ಬೆಂಗಳೂರು,ಫೆ.27- ಮುಖ್ಯಮಂತ್ರಿ ಸ್ಥಾನದ ಕುರ್ಚಿ ಕದನ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ ಬಣ, ಡಿಸಿಎಂ ಡಿಕೆಶಿ ಬಣದ ಔತಣಕೂಟಗಳು, ವಿದೇಶ ಪ್ರವಾಸ, ರೆಸಾರ್ಟ್ ರಾಜಕೀಯ ಮೇಲಾಟಗಳು, ಪರಸ್ಪರ ಹೇಳಿಕೆಗಳು, ಬಣ ಗುದ್ದಾಟವನ್ನು ತೀವ್ರಗೊಳಿಸಿವೆ.
ನಿನ್ನೆಯಷ್ಟೇ ಡಿ.ಕೆ.ಶಿವಕುಮಾರ್ ಅವರ ಬಣದ 20ಕ್ಕೂ ಹೆಚ್ಚು ಶಾಸಕರು ಖಾಸಗಿ ಹೋಟೆಲ್‌ನಲ್ಲಿ ಔತಣ ಕೂಟ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ.
ಈ ಹಿಂದೆ ಇದೇ ಬಣ ದೆಹಲಿ ಪ್ರವಾಸ ಮಾಡಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆಯ ಹಕ್ಕು ಪ್ರತಿಪಾದನೆಯನ್ನು ಪರೋಕ್ಷವಾಗಿ ಮಂಡಿಸಿದ್ದರು. ನಿನ್ನೆ ಮಾಗಡಿ ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬದ ನೆಪದಲ್ಲಿ ಸೇರಿದ್ದ 20ಕ್ಕೂ ಹೆಚ್ಚು ಶಾಸಕರು ನಾಯಕತ್ವ ಬದಲಾವಣೆಯ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ಯಾವುದಾದರೂ ತೀರ್ಮಾನ ಕೈಗೊಳ್ಳದಿದ್ದರೆ ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಹಾನಿಯಾಗಲಿದೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.
ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುಖದಲ್ಲಿ ದಲಿತ ಸಚಿವರು ಸಭೆ ಸೇರಿದ್ದರು. ದಲಿತ ಮುಖ್ಯಮಂತ್ರಿ ಮಾಡಬೇಕೆಂಬ ಕೂಗೆದ್ದಿತ್ತು. ಅಲ್ಲದೆ ಸತೀಶ್ ಜಾರಕಿಹೊಳಿಯರು 40ಕ್ಕೂ ಹೆಚ್ಚು ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲಿದ್ದಾರೆ ಎಂಬ ಮಾಹಿತಿಯು ಹೊರಬಿದ್ದಿದೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಣದ ಆಪ್ತರಾದ 15ಕ್ಕೂ ಹೆಚ್ಚು ಶಾಸಕರು ಅಧ್ಯಯನದ ನೆಪದಲ್ಲಿ ವಿದೇಶಕ್ಕೆ ತೆರಳಿದ್ದಾರೆ. 20ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿರುವುದು, ಒಂದಷ್ಟು ಶಾಸಕರು ವಿದೇಶಕ್ಕೆ ತೆರಳಿರುವುದು, ಮತ್ತೊಂದಷ್ಟು ಶಾಸಕರು ಔತಣ ಕೂಟದ ನೆಪದಲ್ಲಿ ಸೇರುವುದು ಈ ಎಲ್ಲವನ್ನೂ ಗಮನಿಸಿದರೆ ಬಜೆಟ್ ನಂತರ ನಾಯಕತ್ವ ಬದಲಾವಣೆಯಾಗಲಿದೆಯೇ ಎಂಬ ಕುತೂಹಲ ಕೆರಳಿದೆ.
ಕಳೆದ ನವೆಂಬರ್‌ನಿಂದ ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆಯು ನಿರಂತರವಾಗಿ ನಡೆಯುತ್ತಲೇ ಬಂದಿದೆ.ನವೆಂಬರ್ ಕ್ರಾಂತಿ, ಸಂಕ್ರಾಂತಿ ಈಗ ಬಜೆಟ್ ನಂತರ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರತೊಡಗಿವೆ.
ಯಾವ ಬದಲಾವಣೆಗಳೂ ಆಗುವುದಿಲ್ಲ. ಬಜೆಟ್ ನಂತರ ಸಂಪುಟ ಪುನರ್ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಬಣದ ಶಾಸಕರು ಹೇಳುತ್ತಿದ್ದಾರೆ. ಬದಲಾವಣೆಯಾಗುವುದಿದ್ದರೆ ದಲಿತರು ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಮುಂದೆ ಜಿ.ಪಂ, ತಾ.ಪಂ., ಗ್ರಾ.ಪಂ., ಮಹಾನಗರ ಪಾಲಿಕೆಗಳ ಚುನಾವಣೆ ಬರುತ್ತಿದೆ. ಅಲ್ಲದೆ, 5 ರಾಜ್ಯಗಳ ಚುನಾವಣೆ ಇದೆ. ಚುನಾವಣೆಗಳ ನಂತರ ನಾಯಕತ್ವ ಬದಲಾವಣೆ ಮಾಡಬೇಕೇ? ಇಲ್ಲವೇ ಅದಕ್ಕೂ ಮುಂಚೆಯೇ ನಾಯಕತ್ವ ಬದಲಾವಣೆ ಮಾಡಬೇಕೇ? ಎಂಬ ಜಿಜ್ಞಾಸೆಯಲ್ಲಿ ಹೈಕಮಾಂಡ್ ಇದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಾಯಕತ್ವ ಬದಲಾವಣೆ ಪಟ್ಟು ಮುಂದುವರೆಸಿದ್ದಾರೆ. ತಮ ಬೆಂಬಲಿಗರೊಂದಿಗೆ ಬೇರೆಬೇರೆ ರೀತಿಯ ಕಸರತ್ತುಗಳನ್ನು ನಡೆಸಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯನವರು ತಮ ಸ್ಥಾನ ಉಳಿಸಿಕೊಳ್ಳಲು ಹಲವು ಪಟ್ಟುಗಳನ್ನು ನಡೆಸಿದ್ದು, ತಮ ಬೆಂಬಲಿಗರೊಂದಿಗೆ ಹಲವು ತಂತ್ರ, ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಬಜೆಟ್ ನಂತರ ಏನಾಗುತ್ತದೆಯೋ ಕಾದು ನೋಡಬೇಕು. ಬಜೆಟ್‌ಗೂ ಮುನ್ನವೇ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನು ಕರೆಸಿ ಮಾತನಾಡಿ ಈ ಗೊಂದಲಕ್ಕೆ ತೆರೆ ಎಳೆಯಲಿದ್ದಾರೆ ಎನ್ನಲಾಗಿದೆ.ರಾಜಕೀಯ ಕ್ಷಣಕ್ಷಣದ ಕುತೂಹಲಕ್ಕೆ ಎಡೆಯಾಗಿದ್ದು, ಯಾವಾಗ ಏನು ತಿರುವು ತೆಗೆದುಕೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕು.
