Thursday, April 16, 2026
Homeರಾಷ್ಟ್ರೀಯಬೆಂಗಳೂರಿನ ಡಾ.ರಾಜ್‌ಕುಮಾರ್‌ ರಸ್ತೆ ಅಧ್ವಾನ, ನರಕಯಾತನೆ ಅನುಭವಿಸುತ್ತಿರುವ ಜನ

ಬೆಂಗಳೂರಿನ ಡಾ.ರಾಜ್‌ಕುಮಾರ್‌ ರಸ್ತೆ ಅಧ್ವಾನ, ನರಕಯಾತನೆ ಅನುಭವಿಸುತ್ತಿರುವ ಜನ

People are suffering like hell on Dr. Rajkumar Road in Bengaluru.

ಬೆಂಗಳೂರು, ಫೆ.27-ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವತಿಯಿಂದ ಆಮೆಗತಿಯಲ್ಲಿ ನಡೆಯುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ರಾಜಾಜಿನಗರ ಮತ್ತು ಸುತ್ತಮುತ್ತಲ ಬಡಾವಣೆಯ ನಾಗರಿಕರು ನರಕಯಾತನೆ ಅನುಭವಿಸುವಂತಾಗಿದೆ. ರಾಜಾಜಿನಗರ ಡಾ. ರಾಜ್‌ಕುಮಾರಸ್ತೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಒಂದಲ್ಲ ಒಂದು ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಈಗಾಗಲೇ ನೀರಿನ ಕೊಳವೆ ಮಾರ್ಗ, ವಿವಿಧ ಕೇಬಲ್‌ ಅಳವಡಿಕೆಯ ಕೊಳವೆ ಮಾರ್ಗದ ಅಳವಡಿಕೆಗಾಗಿ ಪದೇ ಪದೇ ರಸ್ತೆ ಅಗೆಯುವುದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಪೈಪ್‌ಗಳ ಅವಳಡಿಕೆಗೆ ಅಗೆದಿದ್ದ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮುನ್ನ ವೈಟ್‌ಟಾಪಿಂಗ್‌ ಆರಂಭಿಸಲಾಗಿದೆ. ಈ ಕಾಮಗಾರಿ ತ್ವರಿತಗತಿಯಲ್ಲಿ ನಡೆದರೂ ತಿಂಗಳಿಗಿಂತ ಹೆಚ್ಚು ಸಮಯ ಬೇಕು. ಮಂದಗತಿಯಲ್ಲಿ ಕಾಮಗಾರಿ ಸಾಗಿದರೆ ದೇವರೇ ಕಾಪಾಡಬೇಕು.

ನಿರಂತರ ಕಾಮಗಾರಿಯಿಂದ ರಸ್ತೆ ಧೂಳು ಮಯವಾಗಿದ್ದು, ಅನಾರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಅಲ್ಲದೆ, ರಸ್ತೆಯಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ವಾಹನಗಳ ದೈನಂದಿನ ಸಂಚಾರಕ್ಕೆ ಅನುಕೂಲವಾಗುವಂತೆ ಪರ್ಯಾಯ ಮಾರ್ಗಗಳನ್ನು ಒದಗಿಸದಿರುವುದು ತುಂಬಾ ಸಮಸ್ಯೆಯಾಗಿದೆ. ಸುತ್ತಿ ಬಳಸಿ ಕಚೇರಿ, ಹೋಟೆಲ್‌, ಅಂಗಡಿ, ಮುಂಗಟ್ಟುಗಳಿಗೆ ಬರಬೇಕಾದ ಪರಿಸ್ಥಿತಿ ಎದುರಾಗಿದೆ.

ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿ ಬರುವ ಒಂದು ಅಡ್ಡರಸ್ತೆ ಮತ್ತೊಂದು ಅಡ್ಡರಸ್ತೆಯ ನಡುವೆ ವೈಟ್‌ಟ್ಯಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಿ ನಂತರ ಮತ್ತೊಂದು ಅಡ್ಡರಸ್ತೆಯ ನಡುವಿನ ಕಾಮಗಾರಿ ಆರಂಭಿಸಿದರೆ ವಾಹನಗಳ ಓಡಾಟ, ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಏಕಾಏಕಿ ಕಿಲೋಮೀಟರ್‌ಗಟ್ಟಲೇ ರಸ್ತೆ ಅಗೆದು, ವೈಟ್‌ಟಾಪಿಂಗ್‌ ಮಾಡುವ ಕಾಮಗಾರಿಯಿಂದ ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ.

ಡಾ. ರಾಜ್‌ಕುಮಾರ್‌ ರಸ್ತೆ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವಂತಹದ್ದು. ಹೋಟೆಲ್‌, ಡಯಾಗ್ನೋಸ್ಟಿಕ್‌ ಕೇಂದ್ರ, ಆಸ್ಪತ್ರೆ, ಬ್ಯಾಂಕ್‌, ಗ್ಯಾರೇಜ್‌, ವಾಹನಗಳ ಷೋ ರೂಂ ಇತ್ಯಾದಿಗಳು ರಸ್ತೆಯ ಇಕ್ಕೆಲಗಳಲ್ಲಿವೆ. ರಸ್ತೆ ಅಗೆತದಿಂದ ದೈನಂದಿನ ವ್ಯವಹಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಸಣ್ಣ-ಪುಟ್ಟ ಅಂಗಡಿ ಹೋಟೆಲ್‌ಗಳಿಗೂ ಬ್ಯುಸಿನೆಸ್‌‍ ಇಲ್ಲದಂತಾಗಿದೆ. ಏಕೆಂದರೆ ವಾಹನಗಳ ಸುಗಮ ಸಂಚಾರ ಹಾಗೂ ಪಾರ್ಕಿಂಗ್‌ಗೆ ತೊಂದರೆ ಆಗುತ್ತಿದೆ.

ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯಾರೂ ವಿರೋಧ ಮಾಡುವುದಿಲ್ಲ. ಆದರೆ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರೋಪಾಯಗಳನ್ನು ಮನವರಿಕೆ ಮಾಡಿಕೊಟ್ಟರೆ ಎಲ್ಲರೂ ಸಹಕಾರ ಕೊಡುತ್ತಾರೆ.

ಆಯಾ ಪ್ರದೇಶದ ಜಿಬಿಎ ಅಧಿಕಾರಿಗಳು, ಸಂಚಾರಿ ಪೊಲೀಸರು ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಯೋಜಿತ ರೀತಿಯಲ್ಲಿ ವೈಟ್‌ಟಾಪಿಂಗ್‌ ಮಾಡುವುದು ಸೂಕ್ತ. ಇಲ್ಲದಿದ್ದರೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತದೆ. ಅಕ್ಕ ಪಕ್ಕದ ರಸ್ತೆಗಳ ಮೇಲೆ ಅನಗತ್ಯ ಒತ್ತಡ ಉಂಟಾಗಿ ಸಮಸ್ಯೆಗೆ ಪರಿಹಾರ ಸಿಗುವ ಬದಲು ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ. ಪೂರ್ವ ಮಾಹಿತಿ ನೀಡದೇ ಏಕಾಏಕಿ ಕಾಮಗಾರಿ ಆರಂಭಿಸುವುದರಿಂದ ಹಲವು ಸಮಸ್ಯೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ.

ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ನವರಂಗ್‌ ಚಿತ್ರಮಂದಿರದಿಂದ ಸುಬ್ರಹಣ್ಯ ನಗರದ ಅಡ್ಡರಸ್ತೆಯವರೆಗೆ ಈಗಾಗಲೇ ಎಡಬದಿಯಲ್ಲಿ ವೈಟ್‌ಟಾಪಿಂಗ್‌ ಪೂರ್ಣಗೊಂಡಿದೆ. ಬಲಬದಿಯ ರಸ್ತೆಯಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು ವಾಹನ ಸಂಚಾರ ನಿಲ್ಲಿಸಲಾಗಿದೆ. ನವರಂಗ್‌ ಚಿತ್ರಮಂದಿರದಿಂದ ಮಾಗಡಿರಸ್ತೆಗೆ ಸಂಪರ್ಕ ಕಲ್ಪಿಸುವ ಡಾ. ರಾಜ್‌ಕುಮಾರ್‌ ರಸ್ತೆ ಎಡಬದಿಯಲ್ಲಿ ಸುಜಾತ ಚಿತ್ರಮಂದಿರ ಸಿಗ್ನಲ್‌ವರೆಗೆ ವೈಟ್‌ಟಾಪಿಂಗ್‌ ಕಾಮಗಾರಿಗೆ ಸಿದ್ಧತೆ ನಡೆದಿದೆ.

ಈ ಭಾಗದ ರಸ್ತೆಯ ಎರಡೂ ಕಡೆ ಇರುವ ವಾಣಿಜ್ಯ ಮಳಿಗೆಗಳು ಹಾಗೂ ಹಲವು ಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಪಾರ್ಕಿಂಗ್‌ ಹಾಗೂ ವಾಹನ ಸಂಚಾರಕ್ಕೆ ಯೋಗ್ಯ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಿ. ಇಲ್ಲದಿದ್ದರೆ, ಈಗಿರುವ ಡಾಂಬರ್‌ ರಸ್ತೆಯೇ ಇರಲಿ ಎಂಬುದು ಸ್ಥಳೀಯ ಸಾರ್ವಜನಿಕರ ಅಭಿಪ್ರಾಯವಾಗಿದೆ.

ತೆರಿಗೆ ಕಟ್ಟಲ್ಲ; ವ್ಯಾಪಾರಿಗಳ ಆಕ್ರೋಶ

ಏನ್ರೀ ಇದು ಕರ್ಮ…… ಡಾ.ರಾಜ್‌ಕುಮಾರ್‌ ರೋಡ್‌ನಲ್ಲಿ ಓಡಾಡೋದೇ ಕಷ್ಟವಾಗಿದೆ. ಇನ್ನು ಆರು ತಿಂಗಳು ನಾವು ವ್ಯಾಪಾರ ವಹಿವಾಟು ಮಾಡದೆ ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಿಂಗೇಯಾದರೆ ಹೆಂಗ್ರೀ ನಮ ಬದುಕು… ಎಂಬುದು ಡಾ.ರಾಜ್‌ಕುಮಾರ್‌ ರಸ್ತೆ ಜನರ ಒಂದೆಡೆ ಅಳಲು…. ಮತ್ತೊಂದೆಡೆ ಆಕ್ರೋಶ…..

ಆರು ತಿಂಗ್ಳು ಅಂಗಡಿ ಮುಂಗಟ್ಟು ಮುಚ್ಚಬೇಕಾಗ್ತದೆ, ವ್ಯಾಪಾರ ವಹಿವಾಟು ನಿಲ್ಲುತ್ತೆ, ನಾವ್‌ ತೆರಿಗೆ ಕಟ್ಟಲ್ಲ ಅಂದ್ರೆ ಸುಮ್ನಿರ್ತೀರಾ? ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರು ತಿಂಗ್ಳು ನಮ್ಗೆ ತೊಂದ್ರೆಯಾದ್ರೆ ಆರು ತಿಂಗ್ಳು ತೆರಿಗೆ ಬಿಡ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುವ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸಗಳನ್ನು ಮಾಡಬೇಕಾದ ಹೊಣೆಗಾರಿಕೆ ಇದೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ ಎಂದು ಡಾ.ರಾಜ್‌ಕುಮಾರ್‌ ರಸ್ತೆಯ ಸಂತ್ರಸ್ತರು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿ, ಫುಟ್‌ಪಾತ್‌ ಅಭಿವೃದ್ಧಿಗಳ ನೆಪದಲ್ಲಿ ಈ ರಸ್ತೆಯ ಕಟ್ಟಡಗಳನ್ನು ವಿರೂಪಗೊಳಿಸಲಾಯಿತು. ಆ ಸಂದರ್ಭದಲ್ಲಿ ಮೂರ್ನಾಲ್ಕು ತಿಂಗಳು ಕಾಲ ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟ ಅನುಭವಿಸಬೇಕಾಯಿತು.

ಈಗ ವೈಟ್‌ ಟಾಪಿಂಗ್‌ ನೆಪದಲ್ಲಿ ಎರಡು ತಿಂಗಳುಗಳಿಗೂ ಹೆಚ್ಚು ಕಾಲ ರಸ್ತೆಯನ್ನು ಮುಚ್ಚಲಾಗುತ್ತಿದೆ. ಇದು ಈ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟು ಮಾಡುವುದಲ್ಲದೇ ಇಲ್ಲಿರುವ ವಾಣಿಜ್ಯೋದ್ಯಮಕ್ಕೆ ಭಾರಿ ಹೊಡೆತ ಬೀಳುತ್ತಿದೆ.ಯಾವುದೇ ಮುನ್ಸೂಚನೆಯಿಲ್ಲದೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಜಿಬಿಎ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ.

ಪ್ರತಿದಿನ ಓಡಾಡುವ ಜನರು ಹೈರಾಣಾಗುತ್ತಿದ್ದಾರೆ. ತುಮಕೂರು ಹೆದ್ದಾರಿ ಮತ್ತು ರಾಜ್ಯದ ಇತರ ಪ್ರಮುಖ ಭಾಗಗಳಿಂದ ಬರುವ ವಾಹನಗಳಿಗೆ ಈ ರಸ್ತೆ ಪ್ರಮುಖ ಮಾರ್ಗವಾಗಿದೆ. ಈ ರಸ್ತೆ ಸರಿ ಸುಮಾರು 14 ಜಿಲ್ಲೆಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಯಶವಂತಪುರದಿಂದ ಪ್ರಸನ್ನ ಥಿಯೇಟರ್‌ ವರೆಗೆ ಇರುವ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿ ನೂರಾರು ವಾಣಿಜ್ಯ ಮಳಿಗೆಗಳು, ಹಲವು ಆಸ್ಪತ್ರೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಲಾಡ್‌್ಜಗಳು, ಮದುವೆ ಛತ್ರಗಳು, ಚಲನಚಿತ್ರ ಮಂದಿರ, ಶಾಲಾ ಕಾಲೇಜುಗಳು, ಎಲ್‌ಐಸಿ ಕಚೇರಿ, ಬಿಎಸ್‌‍ಎನ್‌ಎಲ್‌ ಕಚೇರಿ, ಪಂಚತಾರಾ ಹೋಟೆಲ್‌, ಮಾಲ್‌ಗಳು ಸೇರಿದಂತೆ ನೂರಾರು ವಾಣಿಜ್ಯೋದ್ಯಮಗಳ ವಹಿವಾಟು ನಡೆಯುತ್ತದೆ. ಹಲವು ಐಟಿ ಕಂಪನಿಗಳು ಸಹ ಇವೆ. ಇವುಗಳಿಂದ ನೂರಾರು ಕೋಟಿ ರೂ. ಜಿಬಿಎಗೆ ತೆರಿಗೆ ಪಾವತಿಯಾಗುತ್ತದೆ. ಅಭಿವೃದ್ಧಿ ನೆಪದಲ್ಲಿ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡುವ ಕೆಲಸವನ್ನು ಜಿಬಿಎ ಮಾಡುತ್ತಿದೆ.

ರಾಜಾಜಿನಗರ ನಿವಾಸಿಗಳು ಮತ್ತು ವಾಹನ ಸವಾರರು ದಿನನಿತ್ಯ ಕಷ್ಟ ಪಡುವುದರ ಜೊತೆಗೆ ಮುಂದಿನ ಎರಡು ತಿಂಗಳು ನಿರ್ಮಾಣ ಕಾರ್ಯ ಮುಂದುವರೆಯುವ ನಿರೀಕ್ಷೆ ಇರುವುದರಿಂದ ಸಂಚಾರ ದಟ್ಟಣೆಯ ಮಾರಕ ತೊಂದರೆ ಅನುಭವಿಸಬೇಕಾಗುತ್ತದೆ.

ಏಕಮುಖ ಸಂಚಾರದಿಂದ ಜನರು ಹೈರಾಣಾಗಿದ್ದಾರೆ. ಟ್ರಾಫಿಕ್‌ ಜಾಮ್‌ ನಿಂದ ಕಳೆದ ಎರಡು ದಿನಗಳಿಂದ ಈ ರಸ್ತೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ. ಇಲ್ಲಿರುವ ಕಚೇರಿಗಳಿಗೆ, ಬ್ಯಾಂಕ್‌, ಶಾಲಾ ಕಾಲೇಜು, ವಾಣಿಜ್ಯ ಕಟ್ಟಡಗಳು, ವಸತಿ ಕಟ್ಟಡಗಳಿಗೆ ಸಿಬ್ಬಂದಿಗಳು ಬರಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿರುವ ಕಚೇರಿಗೆ ತಲುಪಲು ಕನಿಷ್ಠಪಕ್ಷ 2 ರಿಂದ 3 ಗಂಟೆ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಸುಮಾರು 14 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರತಿದಿನ ಸಹಸ್ರಾರು ಜನ ಓಡಾಡುವ ಈ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳುವ ಮುನ್ನ ಪರ್ಯಾಯ ವ್ಯವಸ್ಥೆಯಾಗಲಿ, ಜನರಿಗೆ ಮುನ್ಸೂಚನೆ ನೀಡುವ ಕೆಲಸವನ್ನು ಮಾಡಬೇಕಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಒಂದು ರಸ್ತೆಯ ಕಥೆಯಲ್ಲ, ನಗರದ ಎಲ್ಲಾ ಕಡೆ ಇದೇ ರೀತಿಯಾಗಿದೆ, ಎಲ್ಲಿ ನೋಡಿದರೂ ರಸ್ತೆ ಗುಂಡಿಗಳು, ಅಭಿವೃದ್ಧಿಗೆ ಅಗೆದಿರುವ ರಸ್ತೆಗಳು, ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿ ಒಂದಲ್ಲಾ ಒಂದು ಕೆಲಸದ ನೆಪದಲ್ಲಿ ಸಾರ್ವ ಜನಿಕರಿಗೆ ನಿರಂತರವಾಗಿ ತೊಂದರೆಯಾಗುತ್ತಲೇ ಇದೆ.

ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣ

ಬೆಂಗಳೂರು, ಫೆ.27- ಮುಂದಿನ ಡಿಸೆಂಬರ್‌ ವೇಳೆಗೆ ಡಾ.ರಾಜ್‌ಕುಮಾರ್‌ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಎಸ್‌‍.ಸುರೇಶ್‌ಕುಮಾರ್‌ ತಿಳಿಸಿದ್ದಾರೆ. ಇಂದು ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಇದು ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಬೆಳೆಸುವ ಪ್ರಮುಖ ರಸ್ತೆಯಾಗಿದೆ. ಅಂದಾಜಿನ ಪ್ರಕಾರ, ಪ್ರತಿದಿನ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಬಸ್‌‍ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇನ್ನು ವಾರಾಂತ್ಯದಲ್ಲಿ ವಾಹನ ದಟ್ಟಣೆ ಸಿಕ್ಕು ಹೆಚ್ಚಾಗುತ್ತಿದ್ದು, ಇದನ್ನೆಲ್ಲ ಮನಗಂಡು ಸದೃಢ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಈ ಸಂಜೆಗೆ ತಿಳಿಸಿದರು. ಕೇವಲ ಕಾಂಕ್ರಿಟ್‌ ರಸ್ತೆ ನಿರ್ಮಾಣವಷ್ಟೇ ಅಲ್ಲದೆ ಇಲ್ಲಿ ಯಾವುದೇ ಕಾರಣಕ್ಕೂ ಮುಂದೆ ರಸ್ತೆ ಅಗೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನೆಲದಡಿ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಬೆಸ್ಕಾಂ, ಜಲಮಂಡಳಿ, ಬಿಎಸ್‌‍ಎನ್‌ಎಲ್‌ ಸೇರಿದಂತೆ ಹಲವು ಇಲಾಖೆಗಳ ಕೇಬಲ್‌ಗಳು ನೆಲದಡಿಯಲ್ಲೇ ಹಾದು ಹೋಗಲಿವೆ. ಇದಕ್ಕಾಗಿ 26ಕ್ಕೂ ಹೆಚ್ಚು ಕಡೆ ಜಂಕ್ಷನ್‌ಗಳನ್ನು ಕೂಡ ಮಾಡಲಾಗಿದೆ.

ಒಟ್ಟಾರೆ ಸುಭದ್ರ ರಸ್ತೆ ನಿರ್ಮಿಸುವುದು ನಮ ಉದ್ದೇಶವಾಗಿದೆ. ಎಲ್ಲ ಇಲಾಖೆಗಳು ಹಾಗೂ ಪಶ್ಚಿಮ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಒಗ್ಗೂಡಿಸಿ ಕ್ಷಣ ಕ್ಷಣದ ಕಾಮಗಾರಿ ಮಾಹಿತಿ ಪರಿಶೀಲಿಸಲಾಗುತ್ತದೆ. ಪ್ರತಿ ಶುಕ್ರವಾರ ಆಗಿರುವ ಪ್ರಗತಿಯನ್ನು ಖುದ್ದಾಗಿ ನಾವು ಪರಿಶೀಲಿಸುತ್ತೇವೆ ಮತ್ತು ಸಭೆ ನಡೆಸುತ್ತೇವೆ. ಇದರಿಂದಾಗಿ ವಿಳಂಬವಾಗದೆ ಜುಲೈ ಅಂತ್ಯದ ವೇಳೆಗೆ ಒಂದು ಕಡೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್‌ ಅಂತ್ಯದ ವೇಳೆಗೆ ಇನ್ನೊಂದು ಬದಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಂಕಲ್ಪ ತೊಡಲಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಕೆಲವೊಂದು ಮಾರ್ಪಾಡುಗಳನ್ನು ಮಾಡುತ್ತಿದ್ದೇವೆ ಎಂದರು.

ಈ ವ್ಯಾಪ್ತಿಗೆ ಬರುವ ಸಂಚಾರಿ ಪೊಲೀಸ್‌‍ ಠಾಣೆ ಅಧಿಕಾರಿಗಳಿಗೂ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ತ್ವರಿತವಾಗಿ ಕಾಮಗಾರಿ ಮುಗಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Latest News