Tuesday, April 21, 2026
Homeಬೆಂಗಳೂರುಬಾಡಿಗೆ ಮನೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ : ಕೈ ಕಾಲು ಕಟ್ಟಿ ಕೊಂದು ದುರ್ಷ್ಕಮಿಗಳು...

ಬಾಡಿಗೆ ಮನೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ : ಕೈ ಕಾಲು ಕಟ್ಟಿ ಕೊಂದು ದುರ್ಷ್ಕಮಿಗಳು ಪರಾರಿ

Body of an unknown person found in a rented house:

ಬೆಂಗಳೂರು,ಫೆ.28- ಬಾಗಲಗುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದೆ.ವಿಜಯಲಕ್ಷ್ಮೀ ಬಡಾವಣೆಯ ನಿವಾಸಿ ನಟರಾಜ್‌ ಎಂಬುವವರ ಮನೆಯಲ್ಲಿ ಮೋಹನ್‌ಕೃಷ್ಣ ಮತ್ತು ಊರ್ವಶಿ ಎಂಬುವವರು ಬಾಡಿಗೆಗೆ ಕಳೆದ ಎರಡು ತಿಂಗಳುಗಳಿಂದ ಇದ್ದರು. ಮುಂದಿನ ತಿಂಗಳು ಮನೆ ಖಾಲಿ ಮಾಡುವುದಾಗಿ ತಿಳಿಸಿದ್ದರು.

ನಟರಾಜ್‌ ಅವರು ನಾಲ್ಕೈದು ದಿನಗಳ ಹಿಂದೆ ಬಂದು ನೋಡಿದಾಗ ಈ ಬಾಡಿಗೆ ಮನೆ ಬೀಗ ಹಾಕಿತ್ತು. ಹಾಗಾಗಿ ಅವರು ವಾಪಸ್‌‍ ಹೋಗಿದ್ದರು. ನಿನ್ನೆ ಇವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ನೆರೆಹೊರೆಯವರು ಗಮನಿಸಿ ನಟರಾಜು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ನಟರಾಜು ಅವರ ಮಗ ಮನೆ ಬಳಿ ಬಂದು ಬೀಗ ತೆಗೆದು ನೋಡಿದಾಗ ವ್ಯಕ್ತಿಯೊಬ್ಬರನ್ನು ಕೈಕಾಲು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಕಂಡು ಬಂದಿದ್ದು, ಶವ ಕೊಳೆತಿದೆ. ಈ ಬಗ್ಗೆ ಅವರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಕೊಲೆಯಾಗಿರುವ ವ್ಯಕ್ತಿ ಯಾರು ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಸೇರಿಕೊಂಡು ಯಾರನ್ನಾದರೂ ಕೊಲೆ ಮಾಡಿ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆಯೇ, ಅಥವಾ ಈ ಮನೆಯಲ್ಲಿದ್ದ ಮಹಿಳೆ ಬೇರೆಯವರೊಂದಿಗೆ ಸೇರಿಕೊಂಡು ಜೊತೆಯಲ್ಲಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆಯೇ ಎಂಬುವುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಾಗಲಗುಂಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕೊಳೆತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಯಾದ ವ್ಯಕ್ತಿ ಯಾರು, ಏತಕ್ಕಾಗಿ ಆತನನ್ನು ಯಾರು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಈ ಮನೆಗೆ ಯಾರ್ಯಾರೂ ಬಂದು ಹೋಗಿದ್ದಾರೆಂಬ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

RELATED ARTICLES

Latest News