Homeಬೆಂಗಳೂರುಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಆಮೆಗತಿ ರಸ್ತೆ ಕಾಮಗಾರಿ, ರೋಸಿಹೋದ ವಾಹನ ಸವಾರರು

ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಆಮೆಗತಿ ರಸ್ತೆ ಕಾಮಗಾರಿ, ರೋಸಿಹೋದ ವಾಹನ ಸವಾರರು

Slow road work on Dr. Rajkumar Road, angry motorists

ಬೆಂಗಳೂರು,ಫೆ.28- ಮೆಜೆಸ್ಟಿಕ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆಕೆಎಸ್‌‍ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌‍ಗಳು ತೆರಳಬೇಕೆಂದರೆ ಡಾ.ರಾಜ್‌ಕುಮಾರ್‌ ರಸ್ತೆ ಮುಖ್ಯ ಮಾರ್ಗವಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವೈಟ್‌ಟಾಪಿಂಗ್‌ ನೆಪದಲ್ಲಿ ರಸ್ತೆಯನ್ನು ಅಗೆಯಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಮಾರ್ಗದಲ್ಲಿ ಸಂಚಾರ ಅಕ್ಷರಶಃ ನರಕ ಸದೃಶವಾಗಿದೆ.ಎಲ್ಲೆಂದರಲ್ಲಿ ಬೃಹತ್‌ ಗುಂಡಿಗಳು ನಿರ್ಮಾಣವಾಗಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಕಾಮಗಾರಿಯ ಬಗ್ಗೆ ಮಾಹಿತಿ ನೀಡುವ ಒಂದೇ ಒಂದು ಸೂಚನಾ ಫಲಕವನ್ನೂ ಇಲ್ಲಿ ಅಳವಡಿಸಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿ ವರ್ತನೆ ವಿರುದ್ಧ ಸಾರ್ವಜನಿಕರು ತಮ ಆಕ್ರೋಶ, ಅಸಹನೆ ಹೊರಹಾಕಿದ್ದಾರೆ. ಈ ಕುರಿತು ಈ ಸಂಜೆ ಸಾರ್ವಜನಿಕರನ್ನು ಸಂಪರ್ಕಿಸಿದಾಗ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಅದರಲ್ಲೂ ಒಂದು ವರ್ಷದಿಂದ ಈ ರಸ್ತೆ ಕಾಮಗಾರಿ ನಡೆಯುತ್ತಿತ್ತು ಸಂಚಾರಕ್ಕೆ ಸಾಕಷ್ಟು ತೊಂದರೆ ಯಾಗುತ್ತಿದ್ದು, ಚಾಲಕ ವೃತ್ತಿ ಮಾಡುವುದೇ ಬೇಡ ಎನ್ನುವಷ್ಟು ಬೇಸರವಾಗಿದೆ. ಗುಂಡಿ ರಸ್ತೆಗಳಲ್ಲಿ ಸಂಚಾರ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯಕೀಯ ಸೇವೆಗಳು ಸಿಗುತ್ತಿಲ್ಲ ಎಂದು ಆಟೋ ಚಾಲಕರೊಬ್ಬರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯಲು ಸಾಕಷ್ಟು ಸಮಸ್ಯೆ ಯಾಗುತ್ತಿದ್ದು , ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಮುಖ್ಯರಸ್ತೆ ಇಲ್ಲದ ಕಾರಣ. ಚಿಕ್ಕ ಚಿಕ್ಕ ರಸ್ತೆಗಳಲ್ಲಿ ನುಗ್ಗಿ ಮಕ್ಕಳನ್ನು ಶಾಲೆಗೆ ತಲುಪಿಸುವುದು ಹರಸಾಹಸದಂತೆ ಭಾಸವಾಗು ತ್ತದೆ. ಅದರಲ್ಲೂ ಟ್ರಾಫಿಕ್‌ ಜಾಮ್‌ ಸಮಸ್ಯೆ ಹೆಚ್ಚಿದೆ ಎಂದು ಶಾಲಾ ವಾಹನ ಚಾಲಕರೊಬ್ಬರು ಹೇಳಿದ್ದಾರೆ.

ಒಂದು ಕಡೆಯಿಂದ ಕಾಮಗಾರಿ ನಡೆಸಬೇಕಿತ್ತು ಆದರೆ ಅವೈಜ್ಞಾನಿಕವಾಗಿ ಪೂರ್ತಿ ರಸ್ತೆಯನ್ನು ಕಿತ್ತು ಕಾಮಗಾರಿ ನಡೆಸುತ್ತಿರುವುದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಉದ್ಯೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಬದಲಿ ಮಾರ್ಗ
ಮೆಜೆಸ್ಟಿಕ್‌ನಿಂದ ಲೂಲುಮಾಲ್‌ ಜಂಕ್ಷನ್‌ ಮಾರ್ಗವಾಗಿ ನವರಂಗ್‌ ಸಿಗ್ನಲ್‌ಗೆ ಬರಲು ದ್ವಿಚಕ್ರ ವಾಹನ, ಕಾರುಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಬಸ್‌‍ಗಳು ಲೂಲುಮಾಲ್‌ ಜಂಕ್ಷನ್‌ ಬಳಿ ಇರುವ ಅಂಡರ್‌ ಪಾಸ್‌‍ ಮುಖಾಂತರ ಭಾಷ್ಯಂ ಸರ್ಕಲ್‌ಗೆ ತೆರಳಿ ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌ ಮೂಲಕ ತುಮಕೂರು ರಸ್ತೆಗೆ ತೆರಳಬಹುದು.
ಮೆಜೆಸ್ಟಿಕ್‌ನಿಂದ ಬರುವ ದ್ವಿಚಕ್ರ ವಾಹನ, ಕಾರುಗಳು ನವರಂಗ್‌ ಸಿಗ್ನಲ್‌ ಬಳಿ ಎಡತಿರುವು ಪಡೆದು 19ನೇ ಮುಖ್ಯರಸ್ತೆ , ಮೋದಿ ಸೇತುವೆ ಬಲ ತಿರುವು ಪಡೆದು ಸಾಗಬಹುದು.

ಡಾ.ರಾಜ್‌ಕುಮಾರ್‌ ರಸ್ತೆ ಯಲ್ಲಿ ನಿತ್ಯ ನರಕ..!
ಯಾವುದೇ ಮುನ್ಸೂಚನೆ ಇಲ್ಲದೆ ಕಾಮಗಾರಿಗಳನ್ನು ಕೈಗೊಂಡು ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ವ್ಯವಸ್ಥೆಗೆ ಕನ್ನಡಿಯಂತೆ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿಯೇ ಸಾಕ್ಷಿ.

ಕಳೆದ ನಾಲ್ಕು ವರ್ಷಗಳಿಂದ ಒಂದಲ್ಲ ಒಂದು ಕಾಮಗಾರಿಗಳನ್ನು ಕೈಗೊಂಡು ಕರ್ನಾಟಕ ಸಾಬೂನು ಮಾರ್ಜಕ ಕಾರ್ಖಾನೆ(ಕೆಎಸ್‌‍ಡಿಎಲ್‌)ಯಿಂದ ಮಾಗಡಿ ರಸ್ತೆವರೆಗೂ ಇರುವ ಡಾ.ರಾಜ್‌ಕುಮಾರ್‌ ರಸ್ತೆ ಧೂಳುಮಯವಾಗಿ ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಒಂದು ಸಮಸ್ಯೆಯಾದರೆ, ವ್ಯಾಪಾರ ವಹಿವಾಟಿಗೂ ಕೂಡ ಭಾರೀ ಪೆಟ್ಟು ಬಿದ್ದಿದೆ.

ಮೊದಲು ಮೋರಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕಲ್ಲಿನ ಹಾಸುಗಳನ್ನು ತೆಗೆದು ಹೂಳು ತೆಗೆಯಲಾಗಿತ್ತು. ನಂತರ ಖಾಸಗಿ ದೂರಸಂಪರ್ಕ ಕಂಪನಿಗಳು ಕೇಬಲ್‌ಗಳನ್ನು ಅಳವಡಿಸಲು ರಸ್ತೆಯನ್ನು ಅಗೆದರು. ನಂತರ ಜಲಮಂಡಳಿ ಕೂಡ ಕೆಲವೆಡೆ ಪೈಪಿಂಗ್‌ ಅಳವಡಿಕೆ ಕಾಮಗಾರಿ ಕೈಗೊಂಡಿತ್ತು. ಇವೆಲ್ಲವೂ ಆಮೆಗತಿಯಲ್ಲಿ ಸಾಗಿ ಕೊನೆಗೆ ಗುಂಡಿಮಯವಾಗಿದ್ದ ರಸ್ತೆಗೆ ಸೊಗಸಾಗಿ ಟಾರ್‌ ಕೂಡ ಹಾಕಲಾಗಿತ್ತು.

ಆದರೆ ಈ ಕಾಮಗಾರಿಗಳು ಮುಗಿದು ಒಂದು ಹಂತಕ್ಕೆ ಬಂದಿರುವಾಗಲೇ ಈಗ ಚೆನ್ನಾಗಿದ್ದ ರಸ್ತೆಗಳ ಡಾಂಬರನ್ನು ಕಿತ್ತು ಹಾಕಲಾಗಿದೆ. ಇನ್ನೊಂದೆಡೆ ಚರಂಡಿ ಮತ್ತು ಇತರ ನೆಲ ಮಾರ್ಗದ ಕಾಮಗಾರಿಗಳು ನಡೆಯುತ್ತಿರುವುದರಿಂದ ಇಡೀ ರಾಜ್‌ಕುಮಾರ್‌ ರಸ್ತೆಯ ಒಂದು ಬದಿಯಲ್ಲಿ ಸಂಪೂರ್ಣ ವಾಣಿಜ್ಯ ವಹಿವಾಟು ಸ್ತಬ್ಧಗೊಂಡು, ಶೋರೂಮ್‌ಗಳು, ಕಚೇರಿಗಳು ಧೂಳು ಹಿಡಿದಿವೆ.

ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ-4ಅನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಎಂಬ ಹೆಗ್ಗಳಿಕೆ ಡಾ.ರಾಜ್‌ಕುಮಾರ್‌ ರಸ್ತೆಗೆ ಸಲ್ಲುತ್ತದೆ. ಹಲವಾರು ಕೋಟಿ ರೂ.ಗಳನ್ನು ವ್ಯಯಿಸಿ ರಸ್ತೆ ನಿರ್ಮಾಣ ಮಾಡಿದ್ದು, ಈಗ ನೀರಿನಲ್ಲಿ ಹುಣಿಸೆಹಣ್ಣು ತೊಳೆದಂತಾಗಿದೆ.

ಪಾದಚಾರಿ ಮಾರ್ಗಗಳ ಕೆಲವು ಕಾಮಗಾರಿಗಳು ಮುಗಿಯುವುದರೊಳಗೆ ಮತ್ತೆ ಅದನ್ನು ಕಿತ್ತು ಹಾಕಿರುವುದು ಕೂಡ ಸ್ಥಳೀಯರನ್ನು ಕೆರಳುವಂತೆ ಮಾಡಿದೆ. ಎಲ್ಲಾ ಬಂದ್‌ ಮಾಡಿ ಇನ್ನು ಒಂದು ವರ್ಷ ನಾವು ಸುಮನೆ ಕೂರಬೇಕಾದಂತಹ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾಮಗಾರಿಗಳು ನಡೆದರೂ ಕಾಲಮಿತಿಯೊಳಗೆ ಅದು ಮುಗಿಯುವುದಿಲ್ಲ. ಹಾಗಾಗಿ ಇನ್ನು ಒಂದು ವರ್ಷ ಈ ಯಾತನೆ ಅನುಭವಿಸುವುದು ನಿಶ್ಚಿತ . ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ. ಕೋಟ್ಯಂತ ರೂ. ವೆಚ್ಚ ಮಾಡಿ ಪಾದಚಾರಿ ಮಾರ್ಗ, ಡಾಂಬರು ಹಾಕಿದ ರಸ್ತೆಯನ್ನು ಈಗ ವೈಟ್‌ ಟಾಪಿಂಗ್‌ಗಾಗಿ ಕಿತ್ತು ಹಾಕಿದ್ದಾರೆ. ಇದಕ್ಕೆ ವ್ಯಯಿಸಿದ ಕೋಟ್ಯಂತರ ಹಣ ಶ್ರೀಸಾಮಾನ್ಯರ ತೆರಿಗೆ ಹಣವಲ್ಲವೇ..?

RELATED ARTICLES

Latest News