ಬೆಂಗಳೂರು, ಫೆ.28- ಜಿಬಿಎ ಅಧಿಕಾರಿಗಳ ಆಸ್ತಿ ಹರಾಜು ಪ್ರಕ್ರಿಯೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆಸ್ತಿ ಹರಾಜು ಹಾಕಲಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ತೆರಿಗೆ ಕಟ್ಟಲು ಸತಾಯಿಸುತ್ತಿದ್ದವರು ತಾವೇ ಸ್ವತಃ ಮುಂದೆ ಬಂದು ಟ್ಯಾಕ್ಸ್ ಪಾವತಿಸುತ್ತಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹರಾಜಿಗೂ ಮುನ್ನವೇ 14 ಅಸ್ತಿ ಮಾಲೀಕರಿಂದ 27.62 ಲಕ್ಷ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ.
ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ಕೈಗೊಂಡ ಹರಾಜು ಕ್ರಮ ಫಲಕಾರಿಯಾಗಿದ್ದು, ಹರಾಜು ಪ್ರಕ್ರಿಯೆಗೂ ಮುನ್ನವೇ 14 ಸುಸ್ತಿದಾರರು ಒಟ್ಟು 27,62,525/- ತೆರಿಗೆ ಪಾವತಿಸಿದ್ದಾರೆ.
ಬೊಮ್ಮನಹಳ್ಳಿ ವ್ಯಾಪ್ತಿಯ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದ್ದ 50 ವಸತಿ ಮತ್ತು ವಸತಿಯೇತರ ಆಸ್ತಿಗಳನ್ನು ಹರಾಜಿಗೆ ಇಡಲಾಗುವುದಾಗಿ ಪ್ರಕಟಿಸಲಾಗಿತ್ತು. ಈ 50 ಆಸ್ತಿಗಳ ಒಟ್ಟು ಬಾಕಿ ಮೊತ್ತ 1,08,43,444/- ಆಗಿತ್ತು. ಈಗಾಗಲೇ ಎಲ್ಲಾ ಆಸ್ತಿಗಳಿಗೆ ಪ್ರೋಕ್ಲಮೇಷನ್ ಆರ್ಡರ್ ಜಾರಿಗೊಳಿಸಿ, ವ್ಯಾಪಕ ಪ್ರಚಾರದೊಂದಿಗೆ ಹರಾಜು ಪ್ರಕ್ರಿಯೆ ಆರಂಭಿಸಲಾಗಿತ್ತು.
ಹರಾಜು ಪ್ರಕ್ರಿಯೆಗೂ ಮುನ್ನವೇ 14 ಆಸ್ತಿದಾರರು ಆನ್‌ಲೈನ್ ಮೂಲಕ ತೆರಿಗೆ ಪಾವತಿಸಿದ್ದು, ಒಟ್ಟು 27.62 ಲಕ್ಷ ವಸೂಲಿ ಮಾಡಲಾಗಿದೆ. ಇದರಿಂದಾಗಿ ಅವರ ಆಸ್ತಿಗಳನ್ನು ಹರಾಜು ಪಟ್ಟಿಯಿಂದ ಕೈಬಿಡಲಾಗಿದೆ.
ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳಿಗೆ ನಿಯಮಾನುಸಾರ ಹಿಂಬರಹ ಜಾರಿಗೊಳಿಸಲು ಸೂಚಿಸಲಾಗಿದೆ ಎಂದು ದಕ್ಷಿಣ ನಗರಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಇನ್ನುಳಿದ 36 ಆಸ್ತಿಗಳಿಗೆ ಸಾರ್ವಜನಿಕರಿಂದ ಬಿಡ್ ಪ್ರಕ್ರಿಯೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಈ ಆಸ್ತಿಗಳನ್ನು ಮುಂದಿನ ದಿನಗಳಲ್ಲಿ ಮರು ಹರಾಜಿಗೆ ಇಡಲು ತಯಾರಿ ನಡೆಸಲಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ನಗರ ಪಾಲಿಕೆಯ ಕಂದಾಯ ವಸೂಲಿಗೆ ಹರಾಜು ಕ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ತೆರಿಗೆ ಬಾಕಿದಾರರು ಹರಾಜು ಭೀತಿಯಿಂದ ಪಾವತಿಗೆ ಮುಂದಾಗುತ್ತಿರುವುದು ಗಮನಾರ್ಹ ಬೆಳವಣಿಗೆ.ಆಸ್ತಿ ತೆರಿಗೆ ಬಾಕಿ ಉಳಿಸಿಕೊಳ್ಳುವವರ ವಿರುದ್ಧ ಹರಾಜು ಸೇರಿದಂತೆ ಕಠಿಣ ಕ್ರಮಗಳು ಮುಂದುವರೆಯಲಿವೆ ಎಂದು ಅಯುಕ್ತರು ತಿಳಿಸಿದರು..
