ಬೆಂಗಳೂರು, ಮಾ.1-ಇರಾನ್ ಮತ್ತು ಇಸ್ರೆಲ್ ನಡುವಿನ ಯುದ್ಧದಿಂದಾಗಿ ದುಬೈ ಸೇರಿದಂತೆ ವಿವಿಧ ವಿದೇಶಿ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿದ್ದಾರೆ.
ದುಬೈನಲ್ಲಿ ಸಿಲುಕಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸೇರಿದಂತೆ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಿದೇಶಾಂಗ ಸಚಿವರಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಭೋಜೇಗೌಡ ಅವರೊಂದಿಗೆ ನಿನ್ನೆಯಿಂದ ಕುಮಾರಸ್ವಾಮಿ ಅವರು ಸಂಪರ್ಕದಲ್ಲಿದ್ದು, ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಯುದ್ಧದ ಪರಿಣಾಮದಿಂದ ವಿದೇಶಗಳಲ್ಲಿ ಸಿಲುಕಿರುವವರು ಆಯಾ ದೇಶದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆಯುವಂತೆ ಕುಮಾರಸ್ವಾಮಿ ತಿಳಿಸಿದ್ದಾರೆ. ಯಾರೂ ಕೂಡ ಆತಂಕಕ್ಕೆ ಒಳಗಾಗದೇ ಏನಾದರೂ ತೊಂದರೆಯಾದರೆ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.
