ಬೆಂಗಳೂರು,ಮಾ.2- ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾದ ಪ್ರಕರಣವನ್ನು ಭೇದಿಸಿದ ಬಾಗಲಗುಂಟೆ ಠಾಣೆ ಪೊಲೀಸರು ಸಹನಟಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಸಹನಟಿ, ಶಿವಮೊಗ್ಗ ಮೂಲದ ಬಿಂದೂ (31), ಈಕೆಯ ಸ್ನೇಹಿತ ವಿನಯ್ ಮತ್ತು ಧನುಷ್ ಬಂಧಿತರು.ಬ್ಯಾಡರಹಳ್ಳಿ ನಿವಾಸಿ ಮೋಹನ್ ರಾವ್ (40) ಎಂಬುವವರಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿಯಿಂದ ದೂರವಾಗಿ ಒಬ್ಬರೇ ವಾಸವಾಗಿದ್ದರು.
ಈ ನಡುವೆ ಬಿಂದೂವಿನ ಪರಿಚಯವಾಗಿದೆ. ಬಿಂದುಗೂ ಸಹ ಈಗಾಗಲೇ ಮದುವೆಯಾಗಿದ್ದು, ಆಕೆ ಪತಿಯನ್ನು ಬಿಟ್ಟು ಬೇರೆ ನೆಲೆಸಿದ್ದರು.ತದ ನಂತರಲ್ಲಿ ಮೋಹನ್ರಾವ್ ಹಾಗೂ ಬಿಂದೂವಿಗೆ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ. ಆ ಸ್ನೇಹ ಮುಂದುವರೆಸಿದ್ದ ಇವರಿಬ್ಬರೂ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥನಗರದ ವಿಜಯಲಕ್ಷ್ಮೀ ಬಡಾವಣೆಯ ನಿವಾಸಿ ನಟರಾಜ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆದು ಒಟ್ಟಿಗೆ ನೆಲೆಸಿದ್ದರು.
ಬಿಂದೂಗೆ ಚಾಲಕ ವೃತ್ತಿ ಮಾಡುತ್ತಿದ್ದ ವಿನಯ್ ಎಂಬಾತನ ಪರಿಚಯವಾಗಿದೆ. ಬಿಂದೂ ಈತನೊಂದಿಗೆ ಸುತ್ತಾಡಲು ಆರಂಭಿಸಿದ್ದಾಳೆ. ಇವರಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಬಿಂದೂ ತನ್ನನ್ನು ಬಿಟ್ಟು ಬೇರೆ ಯುವಕನ ಜೊತೆ ಸುತ್ತಾಡುತ್ತಿರುವ ವಿಷಯ ಮೋಹನ್ ರಾವ್ಗೆ ಗೊತ್ತಾಗಿ ಜಗಳವಾಡಿದ್ದಾನೆ.ವಿನಯ್ ಜೊತೆ ಮದುವೆ ಮಾಡಿಕೊಳ್ಳಲು ಮೋಹನ್ರಾವ್ ಅಡ್ಡಿ ಪಡಿಸುತ್ತಾನೆಂದು ಅರಿತು ಆತನ ಕೊಲೆಗೆ ವಿನಯ್ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದಾಳೆ.
ಅದರಂತೆ ತಾನು ವಾಸವಾಗಿದ್ದ ಬಾಡಿಗೆ ಮನೆಗೆ ವಿನಯ್ನನ್ನು ಕರೆದುಕೊಂಡು ಬಂದು ಮೊದಲೇ ಅಂದುಕೊಂಡಿದ್ದ ಸಂಚಿನಂತೆ ಮೋಹನ್ರಾವ್ಗೆ ವಿಪರೀತ ಮದ್ಯ ಕುಡಿಸಿದ್ದಾರೆ.ನಂತರದಲ್ಲಿ ವಿನಯ್ ಸ್ನೇಹಿತ ಧನುಷ್ನನ್ನು ಕರೆಸಿಕೊಂಡು ಮೋಹನ್ರಾವ್ ಕೈಕಾಲು ಕಟ್ಟಿ ಬಾಯಿಗೆ ಟೇಪ್ ಸುತ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಮನೆಗೆ ಬೀಗ ಹಾಕಿಕೊಂಡು ಈ ಮೂವರು ಪರಾರಿಯಾಗಿದ್ದರು.
ತಾವು ಸಿಕ್ಕಿಹಾಕಿಕೊಳ್ಳಬಾರದೆಂದು ಬಿಂದೂ ಹಾಗೂ ವಿನಯ್ ಪ್ರವಾಸದ ಹೆಸರಿನಲ್ಲಿ ಕೆ.ಆರ್.ನಗರ, ಧರ್ಮಸ್ಥಳ ಸೇರಿದಂತೆ ವಿವಿಧ ಸ್ಥಳಗಳಿಗೆ ಹೊಗಿದ್ದಾರೆ.ಇತ್ತ ಈ ಬಾಡಿಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ನೆರೆಹೊರೆಯವರು ಗಮನಿಸಿ ಮನೆ ಮಾಲೀಕ ನಟರಾಜು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ನಟರಾಜು ಅವರ ಮಗ ಮನೆ ಬಳಿ ಬಂದು ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ವ್ಯಕ್ತಿಯೊಬ್ಬರನ್ನು ಕೈಕಾಲು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಕಂಡು ಬಂದಿದ್ದು, ಶವ ಕೊಳೆತ್ತಿತ್ತು. ಈ ಬಗ್ಗೆ ಅವರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಕೊಲೆಯಾದ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ಕಲೆಹಾಕಿದಾಗ ಮೋಹನ್ರಾವ್ ಎಂಬುವುದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು ಈ ವ್ಯಕ್ತಿಯ ಜೊತೆ ಈ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದಾಗ ಸಹನಟಿ ಬಿಂದೂ ಎಂಬುವುದನ್ನು ಪತ್ತೆಹಚ್ಚಿದ್ದಾರೆ.
ಆಕೆಯ ಮೊಬೈಲ್ ನಂಬರ್ನ್ನು ತಾಂತ್ರಿಕ ಆಧಾರದಲ್ಲಿ ಟ್ರ್ಯಾಕ್ ಮಾಡಿ ಕೊನೆಗೂ ಆಕೆಯನ್ನು ಪೊಲೀಸರು ಲಾಕ್ ಮಾಡಿಕೊಂಡಿದ್ದು, ಆಕೆಯ ಜೊತೆ ಇನ್ನಿಬ್ಬರು ಸಹ ಸಿಕ್ಕಿ ಬಿದ್ದಿದ್ದಾರೆ. ಒಟ್ಟಾರೆ ಮನೆಯಲ್ಲಿ ಕೊಳೆತ ಶವ ಪತ್ತೆಯಾದ ಕೆಲವೇ ದಿನಗಳಲ್ಲಿ ಈ ಪ್ರಕರಣವನ್ನು ಭೇದಿಸುವಲ್ಲಿ ಬಾಗಲಗುಂಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
