ಬೆಂಗಳೂರು,ಏ.20- ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗೆ ಬ್ರಹಾಸ್ತ್ರವೊದಗಿಸಿದ್ದ, ಬಿಟ್‌ಕಾಯಿನ್ ಹಗರಣ ಕಾಂಗ್ರೆಸ್‌ಗೆ ತಿರುಗು ಬಾಣವಾಗಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ, ಬಸವರಾಜ್ ಬೊಮಾಯಿ ಗೃಹ ಸಚಿವರಾಗಿದ್ದರು. ಹ್ಯಾಕರ್ ಶ್ರೀಕಿಯನ್ನು ಬಂಧಿಸಿದ ಪೊಲೀಸರು ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಸುಮಾರು 11 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣವನ್ನು 2019ರಲ್ಲಿ ಪತ್ತೆ ಹಚ್ಚಿದ್ದರು.
ಅನಂತರ 2020ರಲ್ಲಿ ಮತ್ತೆ ಶ್ರೀಕಿ ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಗ ಬಿಟ್‌ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. ತನ್ನ ಬಳಿ 2 ಸಾವಿರಕ್ಕೂ ಹೆಚ್ಚು ಬಿಟ್‌ಕಾಯಿನ್‌ಗಳಿವೆ. ಅವುಗಳ ಮೌಲ್ಯ 50 ಸಾವಿರ ಬ್ರಿಟಿಷ್ ಪೌಂಡ್‌ಗಿಂತಲೂ ಹೆಚ್ಚು ಎಂದು ಶ್ರೀಕಿ ಹೇಳಿಕೊಂಡಿದ್ದ.
ಬಿಟ್ ಫೀನೆಕ್‌್ಸ ಸೇರಿದಂತೆ ವಿವಿಧ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್‌ಗಳನ್ನು ಸಂಗ್ರಹಿಸಿ ದ್ದಾಗಿ ಶ್ರೀಕಿ ಹೇಳಿಕೊಂಡಿದ್ದ.
ಶ್ರೀಕಿಯನ್ನು ಬಂಧಿಸಿದ ವೇಳೆ ಯಲ್ಲಿ ಪೊಲೀಸರು ಬಿಡುಗಡೆ ಮಾಡಿದ ಪತ್ರಿಕೆ ಹೇಳಿಕೆಯಲ್ಲಿ ಬಿಟ್‌ಕಾಯಿನ್‌ಗಳ ಬಗ್ಗೆ ಮಾಹಿತಿ ನಮೂದಿಸಲಾಗಿತ್ತು. ಕೆಲವೇ ದಿನಗಳಲ್ಲಿ ಪೊಲೀಸರು ಹೇಳಿಕೆಯನ್ನು ತಿರುವು-ಮರುವು ಮಾಡಿದ್ದರು. ಮಾದಕ ವ್ಯಸನಿಯಾ ಗಿರುವ ಶ್ರೀಕಿ ತನ್ನ ಬಳಿ ಬಿಟ್‌ಕಾಯಿನ್‌ಗಳು ಇವೆ ಎಂದು ಹೇಳುತ್ತಿರುವುದೇ ಕಪೋಲಕಲ್ಪಿತ ಕತೆಯಾಗಿದೆ.
ಆತನ ಬಳಿ ಯಾವ ಬಿಟ್‌ಕಾಯಿನ್‌ಗಳೂ ಇಲ್ಲ ಎಂದು ಪೊಲೀಸ್ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದರು. ಕಾಂಗ್ರೆಸ್ ಪಕ್ಷ ಇದನ್ನು ಗಂಭೀರ ವಾಗಿ ತೆಗೆದುಕೊಂಡು ಸಾವಿರ ಕೋಟಿ ರೂ. ಮೊತ್ತದ ಬಿಟ್‌ಕಾಯಿನ್‌ಗಳನ್ನು ದುರುಪಯೋ ಗಪಡಿಸಿಕೊಳ್ಳಲಾಗಿದೆ ಎಂದು ಟೀಕೆ ಮಾಡಿತ್ತು. ಚುನಾವಣಾ ಕಾಲದಲ್ಲಿ ಇದೇ ಆರೋಪವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಕುರಿತ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು. 2024ರಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದರು. ಆದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ.
ಬಿಟ್‌ಕಾಯಿನ್‌ಗಳು ಮತ್ತು ಕ್ರಿಪ್ಟೋ ಕರೆನ್ಸಿಯ ಕುರಿತ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಭೇದಿಸಿ, ಡಿಜಿಟಲ್ ಲಾಗ್‌ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವ ಪರಿಣಿತರ ಕೊರತೆ ಇದೆ ಎಂದು ತನಿಖಾಧಿಕಾರಿಗಳು ಪರದಾಡಿದರು.
ಈ ನಡುವೆ ಜಾರಿ ನಿರ್ದೇಶ ನಾಲಯ ಬಿಟ್‌ಕಾಯಿನ್ ಹಗರಣದ ತನಿಖೆಗೆ ಕಾಲಿಟ್ಟಿತ್ತು. ಪಿಎಂಎಲ್‌ಎ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ. ಇಂದು ಮುಂಜಾನೆಯಿಂದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮದ್ ನಲಪಾಡ್ ಹಾಗೂ ಮತ್ತೊಬ್ಬ ಪುತ್ರನಿಗೆ ಸೇರಿದ ಒಟ್ಟು 17 ಕಡೆ ದಾಳಿ ನಡೆಸಲಾಗಿದೆ. ಶ್ರೀಕಿಗೆ ಸೇರಿದ ಸ್ಥಳಗಳ ಮೇಲೂ ಶೋಧ ಕಾರ್ಯಚರಣೆಯಾಗಿದೆ.
ಈ ಮೂಲಕ ಬಿಡ್‌ಕಾಯಿನ್ ಹಗರಣ ಕಾಂಗ್ರೆಸ್‌ಗೆ ಸುತ್ತಿಕೊಳ್ಳುವ ಸಾಧ್ಯತೆ ಎದುರಾಗಿದೆ. ಪ್ರಮುಖ ಆರೋಪಿ ಶ್ರೀಕಿ ಜೊತೆ ಮೊಹಮದ್ ನಲಪಾಡ್ 6 ವರ್ಷ ವ್ಯವಾಹಾರಿಕ ನಂಟು ಹೊಂದಿದ್ದ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಮರೆತುಹೋಗಿದ್ದ ಬಿಟ್‌ಕಾಯಿನ್ ಹಗರಣ ಜಾರಿ ನಿರ್ದೇಶನಾಲಯ ದಾಳಿಯಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರ ಸರ್ಕಾರ ಅಧೀನದಲ್ಲಿರುವ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಶಾಸಕರು ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂಬ ಆರೋಪಗಳಿವೆ.
ಬಿಟ್‌ಕಾಯಿನ್ ಹಗರಣದಲ್ಲಿ ಪ್ರಮುಖವಾಗಿ ಬಿಜೆಪಿ ನಾಯಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿ ಬಂದಿತ್ತು. ಆದರೆ ಜಾರಿ ನಿದೇಶನಾಲಯ ಕೇವಲ ಕಾಂಗ್ರೆಸ್ ನಾಯಕರ ಮನೆಗಳಿಗೆ ಮಾತ್ರ ದಾಳಿ ನಡೆಸುವ ಮೂಲಕ ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದು ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ.
