ಟೆಹ್ರಾನ್, ಏ. 20- ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಅಮೆರಿಕ ಜೊತೆಗಿನ ಎರಡನೇ ಸುತ್ತಿನ ಮಹತ್ವದ ಮಾತುಕತೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಮಾತ್ರವಲ್ಲ, ಮಾತುಕತೆ ವಿಫಲಕ್ಕೆ ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ನೌಕಾ ದಿಗ್ಬಂಧನವೇ ಕಾರಣ ಎಂದು ಇರಾನ್ ಆರೋಪಿಸಿದೆ.
ಅಮೆರಿಕ ತನ್ನ ನಿರ್ಧಾರಗಳನ್ನು ಪದೇ ಪದೇ ಬದಲಿಸುತ್ತಿದೆ ಮತ್ತು ಕದನ ವಿರಾಮದ ನೀತಿಗಳನ್ನು ಉಲ್ಲಂಘಿಸಿ ನೌಕಾ ದಿಗ್ಬಂಧನದ ಮೂಲಕ ಬೆದರಿಕೆ ಹಾಕುತ್ತಿದೆ. ಇಂತಹ ವಾತಾವರಣದಲ್ಲಿ ರಚನಾತ್ಮಕ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಅವರು ಈ ಮಾತುಕತೆಯ ಬಗ್ಗೆ ಭಾರಿ ಆಶಾವಾದ ಹೊಂದಿದ್ದರು. ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಅವರು, ಒಪ್ಪಂದ ಸಿದ್ಧವಾಗಿದೆ, ನಮಗೆ ಉತ್ತಮ ಅವಕಾಶವಿದೆ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ , ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜೇರೆಡ್ ಕುಶ್ನರ್ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದರು.
ಇತ್ತೀಚೆಗೆ ಇರಾನ್‌ನ ಹಡಗೊಂದರ ಮೇಲೆ ಅಮೆರಿಕದ ವಿಧ್ವಂಸಕ ನೌಕೆ ಗುಂಡು ಹಾರಿಸಿ ಅದನ್ನು ವಶಪಡಿಸಿಕೊಂಡ ಘಟನೆ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ದಿಗ್ಬಂಧನವನ್ನು ತೆಗೆದುಹಾಕದೆ ಯಾವುದೇ ಮಾತುಕತೆ ಇಲ್ಲ ಎಂಬುದು ಇರಾನ್ ಪಟ್ಟು ಹಿಡಿದಿದೆ.
ಎರಡು ವಾರಗಳ ಕದನ ವಿರಾಮವು ಏ. 22ಕ್ಕೆ ಮುಕ್ತಾಯಗೊಳ್ಳಲಿದೆ. ಟ್ರಂಪ್ ಅವರು ಇರಾನ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸುತ್ತಲೇ, ಮತ್ತೊಂದೆಡೆ ನ್ಯಾಯಯುತ ಒಪ್ಪಂದ ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಒಪ್ಪಂದವಾಗದಿದ್ದರೆ ಇರಾನ್‌ನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್ ತನ್ನ ಮೇಲೆ ಒತ್ತಡ ಹೇರಲು ದೂಷಣೆಯ ಆಟವಾಡುತ್ತಿದೆ ಮತ್ತು ಮಾತುಕತೆಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಟೆಹ್ರಾನ್ ಆರೋಪಿಸಿದೆ. ಇದರಿಂದಾಗಿ ಇಸ್ಲಾಮಾಬಾದ್ ಮಾತುಕತೆಗಳು ಆರಂಭವಾಗುವ ಮೊದಲೇ ವಿಫಲಗೊಂಡಂತಾಗಿವೆ.
ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಈ ಸಂಧಾನ ಪ್ರಕ್ರಿಯೆಯು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸಬೇಕಿತ್ತು. ಆದರೆ, ಇರಾನ್‌ನ ಕಠಿಣ ನಿಲುವು ಮತ್ತು ಅಮೆರಿಕದ ಬಿಗಿ ಹಿಡಿತದಿಂದಾಗಿ ಕದನ ವಿರಾಮದ ನಂತರ ಮತ್ತೆ ಭೀಕರ ಯುದ್ಧ ಸಂಭವಿಸುವ ಆತಂಕ ಎದುರಾಗಿದೆ. ಈ ಮಾತುಕತೆಗೆ ಪಾಕಿಸ್ತಾನವು ಆತಿಥ್ಯ ವಹಿಸಬೇಕಿತ್ತು ಮತ್ತು ಇತ್ತೀಚೆಗಷ್ಟೇ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಇರಾನ್‌ಗೆ ಭೇಟಿ ನೀಡಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ದರು. ಆದರೆ ಈಗ ಇರಾನ್ ಹಿಂದೆ ಸರಿದಿರುವುದು ರಾಜತಾಂತ್ರಿಕ ಹಿನ್ನಡೆಯಾಗಿ ಕಂಡುಬರುತ್ತಿದೆ.
