ಬೆಂಗಳೂರು,ಮಾ.3- ಹೋಳಿ ಹುಣ್ಣಿಮೆಯ ದಿನವಾದ ಇಂದು ಗೋಚರಿಸಲಿರುವ ವರ್ಷದ ಮೊದಲ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿದ್ದು, ಗ್ರಹಣ ಮೋಕ್ಷ ನಂತರ ನಡೆಯಲಿರುವ ಪೂಜೆಗಳಿಗಾಗಿ ಸಿದ್ಧತಾ ಕಾರ್ಯಗಳು ಕೈಗೊಳ್ಳಲಾಗಿದೆ.
ಬೆಂಗಳೂರಿನ ಪ್ರಮುಖ ದೇವಾಲಯಗಳಾದ ಕಾಡುಮಲ್ಲೇಶ್ವರ, ಗವಿಗಂಗಾಧರೇಶ್ವರ, ಅಣ್ಣಮ, ಬನಶಂಕರಿ, ಬಂಡಿಮಹಾಕಾಳಮ ಸೇರಿದಂತೆ ಹಲವು ದೇವಾಲಯಗಳಲ್ಲಿ ಪೂಜಾ ಸಮಯದಲ್ಲಿ ಬದಲಾವಣೆಗಳಾಗಿವೆ.ಅಣ್ಣಮ ದೇವಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಪೂಜೆಗಳು ನಡೆದು 12 ಗಂಟೆಯ ನಂತರ ಗರ್ಭಗುಡಿಯನ್ನು ಬಂದ್ ಮಾಡಲಾಯಿತು.
ಕಾಡುಮಲ್ಲೇಶ್ವರ ದೇವಾಲಯದಲ್ಲಿ ಮಧ್ಯಾಹ್ನ 12 ಗಂಟೆವರೆಗೂ ಎಂದಿನಂತೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಗರ್ಭಗುಡಿಯನ್ನು ದರ್ಬೆಯಿಂದ ಬಂದ್ ಮಾಡಿ ಮುಚ್ಚಲಾಯಿತು. ಸಂಜೆ 7 ಗಂಟೆಗೆ ಬಾಗಿಲು ತೆರೆದು ಕ್ಷೀರಾಭಿಷೇಕ ಹಾಗೂ ಪಂಚಾಮೃತ ನೈವೇದ್ಯ ಮಾಡಲಾಗುವುದು.
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಎಂದಿನಂತೆ 9 ಗಂಟೆವರೆಗೆ ಪೂಜಾ ಕಾರ್ಯಗಳು ನೆರವೇರಿದವು. ನಂತರ ಬಾಗಿಲನ್ನು ಬಂದ್ ಮಾಡಿ ಸಂಜೆ ಗಂಗಾಧರೇಶ್ವರನಿಗೆ ಜಲಾಭಿಷೇಕ ಮಾಡಿ ಗ್ರಹಣ ಶಾಂತಿ ಮಾಡಲಾಗುವುದು.
ಬನಶಂಕರಿ ದೇವಾಲಯದಲ್ಲಿ ಬೆಳಿಗ್ಗೆ 5 ರಿಂದಲೇ ಹುಣ್ಣಿಮೆ ಅಭಿಷೇಕ, ಪೂಜಾ ಕಾರ್ಯಗಳು ನೆರವೇರಿಸಿ 8.30ಕ್ಕೆ ಮಹಾಮಂಗಳಾರತಿಯೊಂದಿಗೆ ಗರ್ಭಗುಡಿಯನ್ನು ಮುಚ್ಚಲಾಯಿತು.
ವಿಜಯನಗರದ ಶ್ರೀ ಶನಿಮಹಾತ ದೇವಾಲಯದಲ್ಲಿ ಮುಂಜಾನೆ 5 ಗಂಟೆಗೆ ವಿಶೇಷ ಪೂಜೆಗಳು ನೆರವೇರಿದವು. ಸಂಜೆ ಗ್ರಹಣ ಶಾಂತಿ ನಡೆಯಲಿದ್ದು, ನಾಳೆ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಕೂಡ ಹಮಿಕೊಳ್ಳಲಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಆದರೆ ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವರ ದರ್ಶನಕ್ಕೆ ಅವಕಾಶವಿತ್ತು. ಚಾಮುಂಡಿ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದ್ದರೂ ಸಹ ಒಳಭಾಗದಲ್ಲಿ ವಿವಿಧ ಪೂಜಾ ವಿಧಾನಗಳು ನೆರವೇರಿದವು. ಬೆಟ್ಟಕ್ಕೆ ಪ್ರತಿನಿತ್ಯ ರಾಜ್ಯ ಹಾಗೂ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. 2 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ದೇವಾಲಯ ಬಂದ್ ಮಾಡಿ ಗ್ರಹಣಮೋಕ್ಷವಾದ ನಂತರ ಪೂಜಾ ಕಾರ್ಯಗಳು ನೆರವೇರಿಸಿ ದರ್ಶನ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಅದೇ ರೀತಿ ಧರ್ಮಸ್ಥಳ, ಮಲೈ ಮಹದೇಶ್ವರ ಸ್ವಾಮಿ, ಗೋಕರ್ಣ, ಶೃಂಗೇರಿ, ಹೊರನಾಡು, ಕಳಸ ಸೇರಿದಂತೆ ಮತ್ತಿತರ ದೇವಾಲಯಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿತ್ತು. ಆದರೆ ಹೋಳಿ ಹುಣ್ಣಿಮೆ ದಿನವಾದ್ದರಿಂದ ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನಕ್ಕೆ ಯಾವುದೇ ನಿರ್ಬಂಧವಿರಲಿಲ್ಲ.
ಹೋಳಿ ಹುಣ್ಣಿಮೆ ದಿನವೇ ಚಂದ್ರಗ್ರಹಣ ಗೋಚರಿಸುತ್ತಿದ್ದು, ರಾಜ್ಯದಲ್ಲಿ ಗ್ರಹಣ ಗೋಚರವಾಗದಿದ್ದರೂ ಸಹ ಗ್ರಹಣದ ಪ್ರಭಾವ ಇರಲಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ.ಇಂದು ಮಧ್ಯಾಹ್ನ 3.27ಕ್ಕೆ ರಕ್ತ ಚಂದ್ರಗ್ರಹಣ ಆರಂಭವಾಗಿ 6.46ಕ್ಕೆ ಮೋಕ್ಷಗೊಳ್ಳಲಿದೆ.
