ಬೆಂಗಳೂರು,ಮಾ.3- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮದೇ ಪಕ್ಷದ ಶಾಸಕರ ಮೇಲೆ ನಂಬಿಕೆ ಇಲ್ಲದ ಕಾರಣ ಅವರ ಚಲನವಲನಗಳ ಬಗ್ಗೆ ಗುಪ್ತಚರ ವಿಭಾಗದ ಮೂಲಕ ಮಾಹಿತಿ ಕಲೆ ಹಾಕಲು ಮುಂದಾಗಿರಬಹುದೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸಂಶಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಸಚಿವರು ಮತ್ತು ಶಾಸಕರ ಮೇಲೆ ನಂಬಿಕೆ ಇರುವುದಿಲ್ಲವೋ ಅಂಥವರ ಮೇಲೆ ಅವರ ಚಟುವಟಿಕೆಗಳ ಕುರಿತು ಗುಪ್ತಚರ ಇಲ್ಲವೇ ತಮದೇ ಆಂತರಿಕ ಮೂಲಗಳಿಂದ ಮಾಹಿತಿ ಕಲೆ ಹಾಕುತ್ತಾರೆ. ಈಗ ಮುಖ್ಯಮಂತ್ರಿಗಳ ಪರಿಸ್ಥಿತಿಯೂ ಅದೇ ಆಗಿರಬಹುದು ಎಂದು ಹೇಳಿದರು.
ಸರ್ಕಾರ ಉಳಿಸಿಕೊಳ್ಳಲು ಅಥವಾ ಕುರ್ಚಿ ಉಳಿಸಿಕೊಳ್ಳಲು ಗೂಢಚಾರಿಕೆ ಅಥವಾ ಫೋನ್ ಟ್ಯಾಪಿಂಗ್ ಸಿಎಂಗೆ ಅನಿವಾರ್ಯ ಇರಬಹುದು. ಆದರೆ ಜನ ನಿಮ ಸರ್ಕಾಜಕಜದ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ಸಿಎಂ ತಿಳಿದುಕೊಳ್ಳಲಿ ಎಂದರು.
ಜನ ಈ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ. ಜನಾಭಿಪ್ರಾಯ ತಿಳಿಯಲು ಗೂಢಚಾರಿಕೆ ಅಥವಾ ಫೋನ್ ಟ್ಯಾಪಿಂಗ್ ಅಗತ್ಯ ಇಲ್ಲ. ಜನ ಏನು ಹೇಳ್ತಾರೆ ಅಂತ ಕಿವಿ ತೆರೆದು ಕೇಳಿಸಿಕೊಂಡರೆ ಸಾಕು ಎಚ್.ಡಿ.ಕುಮಾರಸ್ವಾಮಿ ಮತ್ತು ಅಶೋಕ್ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದಿದ್ದಾರೆ. ಅವರಿಗೆ ಅದರ ಬಗ್ಗೆ ಮಾಹಿತಕ ಇರಬಹುದು. ಆದರೆ ಸಿಎಂಗೆ ಜನರ ನಾಡಿಮಿಡಿತ ತಿಳಿದಿರಬೇಕು ಎಂದು ತಿರುಗೇಟು ನೀಡಿದರು.
ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಡೆಗೆ ವಿಪಕ್ಷಗಳು ಟೀಕೆ ಮಾಡುತ್ತಿರುವ ಕುರಿತ ಮಾತನಾಡಿದ ಸಿ.ಟಿ.ರವಿ, ಭಾರತ ಅಲಿಪ್ತ ನೀತಿಗೆ ತಿಲಾಂಜಲಿ ಹಾಡಿಲ್ಲ. ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಕಾಲಕಾಲಕ್ಕೆ ನಿರ್ಧಾರ ತಗೊಳ್ಳುತ್ತದೆ. ಕಾಂಗ್ರೆಸ್‌ಗೆ ಭಾರತದ ಹಿತಾಸಕ್ತಿಗಿಂತ ಅದರ ಹಿತಾಸಕ್ತಿ ಮುಖ್ಯವಾಗಿದೆ ಎಂದು ಟೀಕಿಸಿದರು.
ರಾಜಕೀಯ ದೃಷ್ಟಿ, ರಾಜಕೀಯ ಲಾಭ ಇಟ್ಟುಕೊಂಡು ಕಾಂಗ್ರೆಸ್ ಮಾತಾಡುತ್ತದೆ. ಅದಕ್ಕೆ ತನ್ನ ವೋಟ್ ಬ್ಯಾಂಕ್ ಮುಖ್ಯ. ಬಿಜೆಪಿ ಭಾರತದ ಪರ ನಿಲುವು ತೆಗೆದುಕೊಳ್ಳುವ ಪಕ್ಷ ಎಂದು ಸಮರ್ಥಿಸಿಕೊಂಡರು.
ಯುದ್ಧಪೀಡಿತ ದೇಶದಿಂದ ಕನ್ನಡಿಗರನ್ನು ಕರೆತರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಪರಿಸ್ಥಿತಿ ತಿಳಿಗೊಳ್ಳುತ್ತಿರುವಂತೆಯೇ ಕನ್ನಡಿಗರನ್ನು ಭಾರತೀಯರನ್ನು ವಾಪಸ್ ಕರೆತರುವ ಕೆಲಸ ಆಗುತ್ತಿರುತ್ತದೆ. ನಿನ್ನೆ ಕೆಲವರು ಬಂದಿದ್ದಾರೆ, ಸುರಕ್ಷಿತವಾಗಿ ಬಂದಿದ್ದಾರೆ. ಯಾರಿಗೂ ಆತಂಕ ಬೇಡ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಕೆಲಸ ಕೇಂದ್ರ ಮಾಡುತ್ತದೆ ಎಂದು ಭರವಸೆ ನೀಡಿದರು.
ಮಾರ್ಚ್ 6 ರಿಂದ ಗುತ್ತಿಗೆದಾರರ ಮುಷ್ಕರದ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಬೊಕ್ಕಸದ ಹಣ ಎಲ್ಲಿ ಹೋಯಿತು? ದುರ್ಬಳಕೆ ಆಯ್ತಾ? ಸಿಎಂ ಸಿದ್ದರಾಮಯ್ಯ ಈಗ ಚಾಣಕ್ಯ ನೀತಿ ಅನುಸರಿಸುತ್ತಿಲ್ಲ, ಚಾರ್ವಾಕ ನೀತಿ ಅನುಸರಿಸುದ್ದಾರೆ. ಬೊಕ್ಕಸ ಖಾಲಿ, ಸಾಲ ಜಾಸ್ತಿ, ಸಾಲ ಮಾಡಿದ ಹಣ ಎಲ್ಲಿ ಹೋಯಿತು? ಸಾಲದ ಹಣ ದುರ್ಬಳಕೆ ಆಯಿತೇ? ಎಂದು ಪ್ರಶ್ನಿಸಿದರು.
