Wednesday, April 29, 2026
Homeರಾಜ್ಯ16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ

Budget proposes ban on social media for children under 16

ಬೆಂಗಳೂರು,ಮಾ.6–ಸಾರ್ಟ್‌ಫೋನ್‌ ಮತ್ತು ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಮಕ್ಕಳನ್ನು ಮುಕ್ತಗೊಳಿಸಲು ಕರ್ನಾಟಕ ಸರ್ಕಾರವು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಿದ್ದು, ಈ ಕಾನೂನು ಜಾರಿಯಾದಲ್ಲಿ ಭಾರತದಲ್ಲೇ ಇಂಥ ಕಟ್ಟುನಿಟ್ಟಿನ ನಿಯಮ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

ಮೊಬೈಲ್‌ ಮತ್ತು ಡಿಜಿಟಲ್‌ ವ್ಯಸನದಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು, ಮಾನಸಿಕ ಒತ್ತಡ, ಆತಹತ್ಯೆಯ ಭಾವನೆಗಳು, ಸಾಮಾಜಿಕ ಸಂಬಂಧಗಳಲ್ಲಿ ಕುಸಿತ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಅಪ್ರಾಪ್ತ ಮಕ್ಕಳನ್ನು ಸೋಶಿಯಲ್‌ ಮೀಡಿಯಾ ದುರುಪಯೋಗದಿಂದ ರಕ್ಷಿಸಿ, ಅವರ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯವನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಸರ್ಕಾರದ ಉದ್ದೇಶ ಮತ್ತು ಜಾರಿ ಸರ್ಕಾರವು ಈ ನಿಷೇಧವನ್ನು ಕೇವಲ ಕಾನೂನು ಮೂಲಕವಲ್ಲದೆ, ಡಿಜಿಟಲ್‌ ಡಿಟಾಕ್ಸಿಫಿಕೇಷನ್‌ ಮತ್ತು ಬಿಯಾಂಡ್‌ ಸ್ಕ್ರೀನ್‌್ಸ ಎಂಬ ಜಾಗೃತಿ ಕಾರ್ಯಕ್ರಮಗಳ ಮೂಲಕ ಯೋಜಿಸಿದೆ. ಶಾಲೆಗಳಲ್ಲಿ ಡಿಜಿಟಲ್‌ ಸಾಕ್ಷರತೆ, ಪೋಷಕರ ಜವಾಬ್ದಾರಿ ಮತ್ತು ಆರೋಗ್ಯ ತಜ್ಞರ ಸಲಹೆಗಳನ್ನು ಒಳಗೊಂಡಂತೆ ಸಮಗ್ರ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಏಕಾಗ್ರತೆ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಅಪ್ರಾಪ್ತರು ಆನ್‌ಲೈನ್‌ ಕಿರುಕುಳ, ಅಶ್ಲೀಲ ವಿಷಯಗಳು ಮತ್ತು ಸೈಬರ್‌ ವಂಚನೆಗಳಿಗೆ ಬಲಿಯಾಗುವುದನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.

ವಯಸ್ಸಿನ ದೃಢೀಕರಣ ಕಡ್ಡಾಯದಿಂದ ಫೇಸ್‌‍ಬುಕ್‌, ಇನ್‌ಸ್ಟಾಗ್ರಾಮ್‌, ಎಕ್ಸ್ ನಂತಹ (ಟ್ವಿಟ್ಟರ್‌)ವೇದಿಕೆಗಳಿಗೆ ಲಾಗ್‌-ಇನ್‌ ಆಗುವಾಗ ಆಧಾರ್‌ ಅಥವಾ ಇತರ ಗುರುತಿನ ಚೀಟಿ ಮೂಲಕ ವಯಸ್ಸನ್ನು ಕಡ್ಡಾಯವಾಗಿ ದೃಢೀಕರಿಸಬೇಕಾಗುತ್ತದೆ.

16 ವರ್ಷದೊಳಗಿನ ಖಾತೆ ತೆರೆಯಲು ಅವಕಾಶ ನೀಡುವ ಕಂಪನಿಗಳ ಮೇಲೆ ಭಾರೀದಂಡ ವಿಧಿಸುವ ಅವಕಾಶ ಈ ಕಾನೂನಿನಲ್ಲಿದೆ. ಮಕ್ಕಳ ಡಿಜಿಟಲ್‌ ಚಟುವಟಿಕೆಗಳ ಮೇಲೆ ನಿಗಾ ಇಡಲು ಪೋಷಕರಿಗೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬಹುದು.

ಮಕ್ಕಳ ಮೆದುಳಿನ ಬೆಳವಣಿಗೆಯ ಹಂತದಲ್ಲಿ ಸೋಷಿಯಲ್‌ ಮೀಡಿಯಾದ ಪ್ರಚೋದನೆ ಅಪಾಯಕಾರಿ. ಈ ನಿಷೇಧವು ಮಕ್ಕಳನ್ನು ಸೃಜನಾತಕ ಚಟುವಟಿಕೆಗಳತ್ತ ಮರಳುವಂತೆ ಮಾಡುತ್ತದೆ ಎನ್ನುವುದು ಮನಶ್ಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ತಂತ್ರಜ್ಞಾನವನ್ನು ಮಾತ್ರ ಸೀಮಿತಗೊಳಿಸಿ, ಮನರಂಜನೆಯ ಹೆಸರಿನಲ್ಲಿ ನಡೆಯುವ ಸಮಯ ವ್ಯರ್ಥವನ್ನು ತಡೆಯಲು ಈ ಕ್ರಮ ಪೂರಕವಾಗಲಿದೆ. ಕರ್ನಾಟಕ ಸರ್ಕಾರವು ತಂತ್ರಜ್ಞಾನದ ಲಾಭ ಮತ್ತು ಹಾನಿಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ಹೆಜ್ಜೆ ಇಟ್ಟಿದೆ. ಇದು ಘೋಷಣೆಯಾಗಿ ಉಳಿಯದೆ, ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು.

RELATED ARTICLES

Latest News