Wednesday, April 29, 2026
Homeಇದೀಗ ಬಂದ ಸುದ್ದಿBIG STORY : ಸಿದ್ದರಾಮಯ್ಯನವರ ದಾಖಲೆ ಬಜೆಟ್‌ನಲ್ಲಿ ಏನೆಲ್ಲಾ ಇದೆ..? ಇಲ್ಲಿದೆ ಕಂಪ್ಲೀಟ್ ಚಿತ್ರಣ

BIG STORY : ಸಿದ್ದರಾಮಯ್ಯನವರ ದಾಖಲೆ ಬಜೆಟ್‌ನಲ್ಲಿ ಏನೆಲ್ಲಾ ಇದೆ..? ಇಲ್ಲಿದೆ ಕಂಪ್ಲೀಟ್ ಚಿತ್ರಣ

Karnataka Budget 2026 (Live Updates)

ಬೆಂಗಳೂರು, ಮಾ.6- ಅಬಕಾರಿ ಇಲಾಖೆಯಲ್ಲಿ ಮಹತ್ವದ ಬದಲಾವಣೆ , ದ್ರವೀಕೃತ ನೈಸರ್ಗಿಕ ಅನಿಲದ ಮೇಲಿನ ತೆರಿಗೆ ಇಳಿಕೆ, ಉಪನೋಂದಣಿ ಕಚೇರಿಗಳಲ್ಲಿ ನಾಗರಿಕ ಸ್ನೇಹಿ ಕ್ರಮಗಳು ಸೇರಿದಂತೆ ಹಲವಾರು ಬದಲಾವಣೆಗಳನ್ನೊಳ ಗೊಂಡ 2026-27ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿಂದು ಮಂಡಿಸಿದ್ದಾರೆ.
ಎಐ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರಸಕ್ತ ವರ್ಷ ಕೈಗಾರಿಕೆಗಳಿಗೆ 1500 ನಿವೇಶನಗಳ ಹಂಚಿಕೆ, ವಿದ್ಯುತ್‌ ಸಹಾಯ ಧನ ಯೋಜನೆ, ಧಾರವಾಡ ಕೈಗಾರಿಕಾ ನೋಡ್‌ ಆರಂಭ, ಮೂಲಸೌಕರ್ಯಕ್ಕೆ ಆದ್ಯತೆ, ಲೋಕೋಪಯೋಗಿ ಇಲಾಖೆಯಿಂದ
2200 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಹಾಗೂ 3500 ಕಿ.ಮೀ ಉದ್ದದ ಜಿಲ್ಲಾ ಹೆದ್ದಾರಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಮುಖ್ಯಮಂತ್ರಿ ಸೌರ ಕೃಷಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಇದಕ್ಕಾಗಿ 10 ಸಾವಿರ ಕೋಟಿ ರೂ. ಅಂದಾಜಿನಲ್ಲಿ 3 ಸಾವಿರ ಮೆಗಾವ್ಯಾಟ್‌ನ ಸೌರ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ.ಬೆಂಗಳೂರಿನಲ್ಲಿ 40 ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ ಯೋಜನೆಯನ್ನು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹಾಗೂ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿಸರ್ಕಲ್‌ವರೆಗೂ ಸುರಂಗ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆಗಳನ್ನು ಘೋಷಿಸಿರುವ ಮುಖ್ಯಮಂತ್ರಿಯವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಈ ವರ್ಷವೂ 5 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿದ್ದಾರೆ.ಹಿಂದುಳಿದ ತಾಲ್ಲೂಕುಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಪ್ರೊ. ಎಂ.ಗೋವಿಂದರಾವ್‌ ಸಮಿತಿಯ ಶಿಫಾರಸುಗಳನ್ನು ಹಂತ-ಹಂತವಾಗಿ ಅನುಷ್ಠಾನ ಗೊಳಿಸುವ ಭರವಸೆ ನೀಡಿದ್ದು, ಇದಕ್ಕಾಗಿ 4291 ಕೋಟಿ ರೂ.ಗಳನ್ನು ಮೀಸಲಿರಿಸಲಾಗುತ್ತಿದೆ.

ಶಾಸಕ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಅನುಷ್ಠಾನಕ್ಕಾಗಿ 10 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜನೆ, ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪಂಚಖಾತ್ರಿ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರಿಸಲಾಗಿದ್ದು, ಇದಕ್ಕಾಗಿ ಅನುದಾನವನ್ನು ಕಾಯ್ದಿರಿಸಲಾಗಿದೆ.ಇಂದಿರಾ ಆಹಾರ ಕಿಟ್‌ ವಿತರಣೆಯನ್ನು ಪ್ರಸ್ತಾಪಿಸಲಾಗಿದೆ.

ವಸತಿ ಇಲಾಖೆಯಿಂದ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯಿದ್ದು, ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ 4.90 ಲಕ್ಷ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಲು ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಅದರಲ್ಲೂ ಶೈಕ್ಷಣಿಕ ಬೆಂಬಲಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸುಮಾರು 2500 ಬ್ಲಾಕ್‌ಲಾಗ್‌ ಹುದ್ದೆಗಳ ಭರ್ತಿಯ ಭರವಸೆ ನೀಡಿದ್ದಾರೆ, ಎಸ್‌‍ಇಪಿ-ಟಿಎಸ್‌‍ಪಿ ಯೋಜನೆಯಡಿ ಈ ಬಾರಿ 44,632 ಕೋಟಿ ರೂ.ಗಳನ್ನು ಕಾಯ್ದಿರಿಸುವುದಾಗಿ ತಿಳಿಸಿದ್ದಾರೆ.

ಮಾದಕ ವ್ಯಸನಿಗಳ ಪುನರ್‌ ವಸತಿ ಕೇಂದ್ರಗಳ ಆರಂಭ, ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ 2500 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ.ಉನ್ನತ ಶಿಕ್ಷಣ-ಶಾಲಾ ಶಿಕ್ಷಣಕ್ಕೆ ಹಲವಾರು ಘೋಷಣೆಗಳನ್ನು ಮಾಡಲಾಗಿದೆ. ನೀರಾವರಿ ಯೋಜನೆಗಳ ದೊಡ್ಡ ಪಟ್ಟಿಯನ್ನೇ ಬಿಡುಗಡೆ ಮಾಡಲಾಗಿದ್ದು, ಕೃಷ್ಣಾ ಮೇಲ್ದಂಡೆ 3ನೇ ಹಂತ ಯೋಜನೆಯಡಿ ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು.

ಕಳಸಾ-ಬಂಡೂರಿ ಯೋಜನೆ ಆರಂಭಕ್ಕೆ ಕೇಂದ್ರದಿಂದ ಅಗತ್ಯ ಪೂರ್ವಾನುಮತಿ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತದೆ. ಎತ್ತಿನ ಹೊಳೆ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಮೇಕೆದಾಟು ಯೋಜನೆಗೆ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯನ್ನು 3 ವರ್ಷಗಳಿಗೆ 100 ಕೋಟಿ ರೂ. ವೆಚ್ಚ ಮಾಡಲಾಗುವುದು. ಕೃಷಿ ಹೊಂಡಗಳ ನಿರ್ಮಾಣ ಹಾಗೂ ವಸುಧಾಮೃತ ಯೋಜನೆಗಳನ್ನು ಘೋಷಿಸಲಾಗಿದೆ.

ಒಟ್ಟು 4,47,240 ಕೋಟಿ ರೂ.ಗಳ ಬಜೆಟ್‌ ಗಾತ್ರದಲ್ಲಿ 74682 ಕೋಟಿ ರೂ.ಗಳ ಯೋಜನಾ ವೆಚ್ಚವನ್ನು ಅಂದಾಜಿಸಲಾಗಿದೆ. 97 ಸಾವಿರ ಕೋಟಿ ರೂ.ಗಳ ಕೊರತೆಯ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರು ಸಾಲದ ಮಿತಿಯನ್ನು 8.24 ಸಾವಿರ ಕೋಟಿ ರೂ. ಗಳಿಗೆ ಹೆಚ್ಚಿಸಿದ್ದಾರೆ. ವಿತ್ತೀಯ ಕೊರತೆ ಮತ್ತು ಸಾಲದ ಪ್ರಮಾಣ ನಿಯಮದ ಮಿತಿಯಲ್ಲೇ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಾಲ ಮರುಪಾವತಿಗೆ ಬಜೆಟ್‌ನ ಸಿಂಹಪಾಲು ಖರ್ಚಾಗುತ್ತಿದ್ದು ಇತರ ಸಾಮಾನ್ಯ ಸೇವೆಗಳಿಗೆ ಶೇ.18ರಷ್ಟು ವೆಚ್ಚವಾಗುತ್ತಿದೆ. ಸಮಾಜ ಕಲ್ಯಾಣಕ್ಕೆ ಶೇ.15, ಆರ್ಥಿಕ ಸೇವೆಗೆ ಶೇ.14, ಕೃಷಿ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೆ ಶೇ.13, ಶಿಕ್ಷಣಕ್ಕೆ ಶೇ.10, ಆರೋಗ್ಯಕ್ಕೆ ಶೇ.4 ರಷ್ಟು ಅನುದಾನವನ್ನು ಹಂಚಿಕೆ ಮಾಡಿದ್ದಾರೆ.

ಬಜೆಟ್‌ ಗಾತ್ರ 4.48 ಲಕ್ಷ ಕೋಟಿ ರೂ.
ಬೆಂಗಳೂರು, ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ 2026-27ನೇ ಸಾಲಿನಲ್ಲಿ ನಡೆಸಿದ ಬಜೆಟ್‌ನ ಗಾತ್ರ 4.48 ಲಕ್ಷ ಕೋಟಿ ದಾಟಿದ್ದು, ಸಾಲದ ಪ್ರಮಾಣ 8 ಲಕ್ಷ ಕೋಟಿ ರೂ. ಮೀರಿದೆ. ಕಲ್ಯಾಣ ಕಾರ್ಯಕ್ರಮಗಳಿಂದ ಸಬಲೀಕರಣಕ್ಕೆ, ಸಬಲೀಕರಣದಿಂದ ಹೊಸ ಅವಕಾಶಗಳಿಗೆ ಮತ್ತು ಈ ಅವಕಾಶಗಳಿಂದ ಸುಸ್ಥಿರ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುವ ಮೂಲಕ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ನಮ ಸಂಕಲ್ಪಕ್ಕೆ ಪೂರಕವಾಗಿ ಬಜೆಟ್‌ ಅನ್ನು ಮಂಡಿಸುತ್ತಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2026-27ನೇ ಸಾಲಿಗೆ 3,15,050ಕೋಟಿ ರೂ.ಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಇದರಲ್ಲಿ 2.20ಲಕ್ಷ ಕೋಟಿ ಸ್ವಂತ ತೆರಿಗೆ ರಾಜ್ಯಸ್ವವಾಗಿದ್ದು, 16ಸಾವಿರ ಕೋಟಿ ತೆರಿಗೆಯೇತರ ಆದಾಯವಾಗಿದೆ. ಕೆಂದ್ರ ಸರ್ಕಾರದಿಂದ 79,050ಕೋಟಿ ರೂ.ಗಳು ಇದರಲ್ಲಿ ಸೇರಿವೆ ಎಂದು ತಿಳಿಸಿದ್ದಾರೆ.

ಮುಂದಿನ ಆರ್ಥಿಕ ವರ್ಷದಲ್ಲಿ 1.32 ಲಕ್ಷ ಕೋಟಿ ರೂ.ಗಳ ಸಾಲ ಮತ್ತು 190 ಕೋಟಿ ರೂ.ಗಳ ಸಾಲೇತರ ಬಂಡವಾಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಒಟ್ಟು ಎಲ್ಲವನ್ನು ಒಳಗೊಂಡು 4,47,240 ಕೋಟಿ ರೂ.ಗಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ.

ಸ್ವೀಕೃತಿಗಿಂತಲೂ 764 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವನ್ನು ಅಂದಾಜಿಸಲಾಗಿದೆ. 2026-27ನ ಸಾಲಿಗೆ ಒಟ್ಟು 4,48,004 ಕೋಟಿ ರೂ.ಗಳ ವೆಚ್ಚವನ್ನು ನಿರೀಕ್ಷಿಸಲಾಗಿದ್ದು, ಇದರಲ್ಲಿ ರಾಜಸ್ವ ವೆಚ್ಚವೇ ಸಿಂಹಪಾಲಾಗಿದೆ. 3,38,007 ಕೋಟಿ ರೂ. ರಾಜಸ್ವ ಖರ್ಚಾಗಲಿದೆ.
ಯೋಜನಾ ವೆಚ್ಚ ಕಳೆದ ಬಾರಿಗಿಂತಲೂ ಕಡಿಮೆ ಇದ್ದು, ಈ ಬಾರಿ ಆಸ್ತಿ ಸೃಜನೆಗಾಗಿ ಖರ್ಚುಮಾಡುವ ಬಂಡವಾಳ ವೆಚ್ಚವನ್ನು 74,682 ಕೋಟಿ ರೂ.ಗಳೆಂದು ನಿರೀಕ್ಷಿಸಲಾಗಿದೆ. ಸಾಲ ಮರು ಪಾವತಿಗೆ 35,316ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. 22,957 ಕೋಟಿ ರೂ.ಗಳ ರಾಜಸ್ವ ಕೊರತೆಯ ಜೊತೆಗೆ 97,449 ಕೋಟಿ ರೂ.ಗಳ ವಿತ್ತಿಯ ಕೊರತೆಯನ್ನು ನಿರೀಕ್ಷಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿ ಆದಾಯದ ಬಜೆಟ್‌ ಅನ್ನೇ ಮಂಡಿಸಿ ಹೆಸರು ಮಾಡಿದ್ದರು. ಆದರೆ ಗ್ಯಾರಂಟಿ ಯೋಜನೆಗಳಿಂದಾಗಿ ಕಳೆದ ಎರಡು ಬಜೆಟ್‌ಗಳಿಂದಲೂ ವಿತ್ತೀಯ ಕೊರತೆಯನ್ನು ದಾಖಲಿಸುತ್ತಿದ್ದಾರೆ.

ಮುಂದಿನ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲದ ಪ್ರಮಾಣ 8,24,384 ಕೋಟಿ ರೂ.ಗಳಾಗಲಿದೆ. ಇದು ಜಿಎಸ್‌‍ಡಿಪಿಯ ಶೇ.24.94ರ ಮಿತಿಯಲ್ಲೇ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ವಿತ್ತೀಯ ಕೊರತೆಯನ್ನು ನಿಯಮದ ಮಿತಿಯ ಪರಿಧಿಯಲ್ಲೇ ನಿಯಂತ್ರಿಸಲಾಗಿದೆ. ವಿತ್ತೀಯ ಕೊರತೆ ಶೇ. 2.95 ರಷ್ಟಾಗಲಿ ಎಂದು ಹೇಳಿದ್ದಾರೆ.
ಆರ್ಥಿಕ ಹೊಣೆಗಾರಿಕೆ ಅನುಸಾರ ರಾಜ್ಯದಲ್ಲಿ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ ಎಂದು ಹೇಳಿದ್ದಾರೆ.

2025-26ನೇ ಸಾಲಿನ ಕಳೆದ ಬಜೆಟ್‌ನಲ್ಲಿ 2,77,402 ಕೋಟಿ ರೂ.ಗಳ ರಾಜಸ್ವ ಸ್ವೀಕೃತಿಯಲ್ಲಿ ಸ್ವಂತ ತೆರಿಗೆ 1.93 ಲಕ್ಷ ಕೋಟಿಯಾಗಿದ್ದು, ತೆರಿಗೆಯೇತರ ಆದಾಯ 17,500 ಕೋಟಿ ರೂ.ಗಳಷ್ಟಿತ್ತು. ಕೇಂದ್ರದಿಂದ 66802 ಕೋಟಿ, ರಾಜಸ್ವ ಸ್ವೀಕೃತಿ ಒಳಗೊಂಡಿತ್ತು.
ಒಟ್ಟು ಆದಾಯ 3,93,572ಕೋಟಿ ರೂ.ಎಂದು ಅಂದಾಜಿಸಲಾಗಿತ್ತು.ಇದಕ್ಕೆ ಎದುರಾಗಿ 3,02,851 ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ರಾಜಸ್ವ ವೆಚ್ಚ 3 ಲಕ್ಷ ಕೋಟಿ ರೂ. ದಾಟಿದರೆ ಸಾಲ ಮರುಪಾವತಿಗೆ 92 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.

12ನೂತನ ಪೊಲೀಸ್‌‍ ಠಾಣೆ :

ಗೃಹ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಯನ್ನು ಕ್ರಮಬದ್ಧವಾಗಿ ಪಾರದರ್ಶಕವಾಗಿ ನಿಯಮಿತವಾಗಿ ನಡೆಸಲು ಶಾಶ್ವತ ಪೊಲೀಸ್‌‍ ಮತ್ತು ಪೊಲೀಸ್‌‍ ಸಹಾಯಕ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ಗೃಹ ಇಲಾಖೆಯಲ್ಲಿ ಖಾಲಿ ಇರುವ 8 ಸಾವಿರ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳ ವೆಚ್ಚದಲ್ಲಿ ಪೊಲೀಸ್‌‍ ಇಲಾಖೆಯ ಸಿಬ್ಬಂದಿಗಳಿಗೆ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದ ಸಮಯದಲ್ಲಿ ಬಂದೋಬಸ್ತ್‌ ಕಾರ್ಯಕ್ಕೆ ನಿಯೋಜಿಸಲಾಗುವ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಒದಗಿಸಲು 20 ಕೋಟಿ ರೂ. ವೆಚ್ಚದಲ್ಲಿ 1 ಸಾವಿರ ಸಿಬ್ಬಂದಿಗಳಿಗೆ ಶಾಶ್ವತ ಬ್ಯಾರಕ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಗೂ ಸಂಚಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ದೃಷ್ಟಿಯಿಂದ 2026-27ನೇ ಸಾಲಿನಲ್ಲಿ 12 ನೂತನ ಪೊಲೀಸ್‌‍ ಠಾಣೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ಪ್ರಸಕ್ತ ವರ್ಷದಲ್ಲಿ ನಿವೇಶನ ಲಭ್ಯವಿರುವ 10 ಪೊಲೀಸ್‌‍ ಠಾಣೆಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 75 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ವಾಹನಗಳನ್ನು ಒದಗಿಸಲಾಗುವುದು ಎಂದರು.

ಕೇಂದ್ರ ಪುರಸ್ಕೃತ ಪೊಲೀಸ್‌‍ ಆಧುನೀಕರಣ ಯೋಜನೆಯಡಿ ಅತ್ಯಾಧುನಿಕ ಸಂಪರ್ಕ ಸಾಧನಗಳು, ಫೊರೆನ್ಸಿಕ್‌ ಉಪಕರಣಗಳು, ಸಿಸಿ ಟಿವಿ, ಬಾಡಿ ವಾರ್ನ್‌ ಕ್ಯಾಮೆರಾ, ಆಂಟಿ ಡ್ರೋನ್‌, ಡ್ರೋನ್‌ ಮತ್ತು ಇತರ ಉಪಕರಣಗಳನ್ನು ಒದಗಿಸಲು 354 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಿದ್ದು 142 ಕೋಟಿ ರೂ.ಗಳ ರಾಜ್ಯದ ಪಾಲು ಒದಗಿಸಲು ಕ್ರಮ ವಹಿಸಿರುವುದಾಗಿ ತಿಳಿಸಿದರು.

ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡಲು ಮಾದಕದ್ರವ್ಯ ವಿರೋಧಿ ಕಾರ್ಯಪಡೆ ಘಟಕವನ್ನು 10 ಕೋಟಿ ರೂ. ವೆಚ್ಚದಲ್ಲಿ ಬಲಪಡಿಸಲಾಗುವುದು ಎಂದರು.ದ್ವೇಷಭಾಷಣ ಮತ್ತು ಸಂಭಾವ್ಯ ಕೋಮು ಗಲಭೆಯನ್ನು ನಿಯಂತ್ರಿಸಿ ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಿದ್ದು, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂರು ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು ಹೇಳಿದರು.

ಐದು ವರ್ಷಕ್ಕೆ ಹೆಚ್ಚಳ :
ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಿಂದ ರಾಜ್ಯದಲ್ಲಿನ ಎಲ್ಲಾ ವರ್ಗದ ಕಟ್ಟಡಗಳಿಗೆ ನೀಡಲಾಗುವ ಕ್ಲಿಯೆರೆನ್‌್ಸ ನವೀಕರಣ ಪ್ರಮಾಣಪತ್ರ ಹಾಗೂ ಬಹುಮಹಡಿ ಕಟ್ಟಡವಲ್ಲದ ಕಟ್ಟಡಗಳಿಗೆ ನೀಡಲಾಗುವುದು ಕ್ಷಮಾಪಣಾ ನವೀಕರಣ ಅವಧಿಯನ್ನು 2 ವರ್ಷಗಳಿಂದ 5 ವರ್ಷಗಳಿಗೆ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ವಾಹನಗಳು, ಅಗ್ನಿಶಮನ ಮತ್ತು ರಕ್ಷಣಾ ಉಪಕರಣಗಳನ್ನು ಒದಗಿಸಲು ಪ್ರಸಕ್ತ ಸಾಲಿಗೆ 50 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಪ್ರಸಕ್ತ ವರ್ಷದಲ್ಲಿ 52-54 ಮೀಟರ್‌ ಎತ್ತರಕ್ಕೆ ತಲುಪುವ ಒಂದು ಏರಿಯಲ್‌ ಲ್ಯಾಡರ್‌ ಪ್ಲಾಟ್‌ಫಾರಂ ವಾಹನವನ್ನು ಒದಗಿಸಲಾಗುವುದು. ಅಗ್ನಿಶಾಮಕ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೀಡುತ್ತಿರುವ ಆಹಾರಭತ್ಯೆಯನ್ನು 150 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.

ಮದ್ಯ ಬೆಲೆ ನಿಗದಿಗೆ ಏಕರೂಪ ನೀತಿ..

ಬೆಂಗಳೂರು, ಮಾ.6- ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಸಮಗ್ರ ಸುಧಾರಣೆಯ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮದ್ಯದ ಬೆಲೆ ನಿಗದಿಗೆ ಏಕರೂಪ ನೀತಿಯನ್ನು ಜಾರಿಗೊಳಿಸಿ ಕಾಲಕಾಲಕ್ಕೆ ಬದಲಾವಣೆಯಾಗುವಂತೆ ನೋಡಿಕೊಳ್ಳು ವುದಾಗಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಂದು 2026-27ನೇ ಸಾಲಿನ ಬಜೆಟ್‌ ಮಂಡಿಸಿದ ಅವರು, ಕರ್ನಾಟಕ ಅಬಕಾರಿ ಇಲಾಖೆಯಲ್ಲಿ 60 ವರ್ಷಗಳ ಹಿಂದೆ ಜಾರಿಗೆ ತಂದಿರುವ ಹಲವು ಕಾಯ್ದೆ ಹಾಗೂ ನಿಬಂಧನೆಗಳು ಪ್ರಸಕ್ತ ಕಾಲಮಾನಕ್ಕೆ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.ಕಳೆದ ಎರಡು ವರ್ಷಗಳಲ್ಲಿ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿವಿಧ ಸನ್ನದ್ದುಗಳ ಮಾನ್ಯತೆಯನ್ನು ಒಂದು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಆನ್‌ಲೈನ್‌ ಅನುಮೋದನೆ ಪ್ರಕ್ರಿಯೆಯನ್ನು 16 ಹಂತಗಳಿಂದ ಏಳು ಹಂತಗಳಿಗೆ ಸರಳೀಕರಿಸಲಾಗಿದೆ. ಎರಡು ದಿನಗಳ ಒಳಗೆ ಅನುಮೋದನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಜಾರಿಗೊಳಿಸಲಾದ ವರ್ಗಾವಣೆ ನಿಯಮಗಳ ಅನ್ವಯ ಅಬಕಾರಿ ನಿರೀಕ್ಷಕರು, ಅಬಕಾರಿ ಉಪನಿರೀಕ್ಷಕರು, ಅಬಕಾರಿ ಮುಖ್ಯ ಪೇದೆಗಳು ಮತ್ತು ಪೇದೆಗಳು ಸೇರಿದಂತೆ ಗ್ರೂಪ್‌ ಸಿ ಹಾಗೂ ನೌಕರರ ವರ್ಗಾವಣೆಯನ್ನು ಡಿಜಿಟಲ್‌ ಕೌನ್ಸಿಲಿಂಗ್‌ ಮೂಲಕ ಮಾಡಲಾಗಿದೆ. ಇಲಾಖೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಅಬಕಾರಿ ಉಪಾಧೀಕ್ಷಕರು ಮತ್ತು ಅಬಕಾರಿ ಅಧಿಕಾರಿಗಳ ವರ್ಗಾವಣೆಯನ್ನು ಸಹ ಡಿಜಿಟಲ್‌ ಕೌನ್ಸಿಲಿಂಗ್‌ ಮೂಲಕ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರ ರಚಿಸಿದ ಸಂಪನೂಲ ಕ್ರೋಡೀಕರಣ ಸಮಿತಿ ಹೊಸ ಅಬಕಾರಿ ತೆರಿಗೆ ಮತ್ತು ಮದ್ಯ ನಿಯಂತ್ರಣ ರೂಪುರೇಷೆಗಳನ್ನು ಒಳಗೊಂಡ ಕರಡು ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಿದೆ. ಪ್ರಸ್ತಾಪಿತ ಸುಧಾರಣೆಗಳು, ಪಾರದರ್ಶಕತೆೆಗಳನ್ನು ಬಲಪಡಿಸಿ ಮದ್ಯ ನಿಯಂತ್ರಣ ಕ್ರಮಗಳನ್ನು ಕಾಲೋಚಿತವಾಗಿ ಸುಧಾರಿಸಲಾಗುವುದು. ಇದರಿಂದ ರಾಜ್ಯಾದ್ಯಂತ ಅಬಕಾರಿ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳು ಸರಳೀಕರಣಗೊಳ್ಳಲಿದೆ ಎಂದಿದ್ದಾರೆ.

ಮದ್ಯಪಾನದಿಂದ ಸಮಾಜದ ಮೇಲಾಗುವ ಪರಿಣಾಮಗಳನ್ನು ಮಾನದಂಡವಾಗಿ ಇಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ಪದ್ಧತಿ ಜಾರಿಗೆ ಬಂದಿದೆ. ಏಪ್ರಿಲ್‌ 2026 ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡು ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಅಬಕಾರಿ ಸುಂಕ ಏಕರೂಪವಾಗಿರಲಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ನಿರ್ದಿಷ್ಟ ಮಿತಿಯ ಒಳಗೆ ಎಕ್‌್ಸ ಫ್ಯಾಕ್ಟರಿ ದರಗಳ ಪಟ್ಟಿ ಆಧಾರದ ಮೇಲೆ ವಿಧಿಸಲಾಗುವುದು. ಇದರಿಂದ ಮದ್ಯದ ಬೆಲೆಯಲ್ಲಿ ತೀವ್ರ ಬದಲಾವಣೆಯಾಗದೆ ಕ್ರಮೇಣವಾಗಿ ವ್ಯತ್ಯಾಸವಾಗುವಂತೆ ಖಚಿತಪಡಿಸುವುದಾಗಿ ತಿಳಿಸಿದ್ದಾರೆ.

ಮುಂದಿನ 3 ರಿಂದ 4ವರ್ಷಗಳಲ್ಲಿ ಎಲ್ಲಾ ಪಾನಿಯಗಳ ಮೇಲೂ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್‌ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳಿಸುವುದಾಗಿ ತಿಳಿಸಿದ್ದಾರೆ.ಹೊಸ ನೀತಿಯ ಅಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ತಪ್ಪಿಸಿ, ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳ ದರವನ್ನು ನಿರ್ಧರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡುವುದಾಗಿ ತಿಳಿಸಿದ್ದಾರೆ.

ದರ ನಿಗದಿ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ 16 ಸ್ಲ್ಯಾಬ್‌ಗಳನ್ನು ಎಂಟು ಸ್ಲ್ಯಾಬ್‌ಗಳಿಗೆ ಇಳಿಸಲಾಗುವುದು. ಅಬಕಾರಿ ಇಲಾಖೆಯಲ್ಲಿ ಕೇವಲ ತೆರಿಗೆ ಸಂಗ್ರಹಣೆ ಮತ್ತು ತೆರಿಗೆ ಅನುಸರಣೆಯ ಮೇಲೆ ಕೇಂದ್ರೀಕರಿಸಲಿದ್ದು, ಆರೋಗ್ಯ ಇಲಾಖೆಯು ಮದ್ಯಪಾನದಿಂದ ಉಂಟಾಗುವ ನಕಾರಾತಕ ಪರಿಣಾಮಗಳು, ಹಾಗೂ ಆರೋಗ್ಯ ಕಾರ್ಯಕ್ರಮಗನ್ನು ನಿರ್ವಹಿಸುತ್ತಿವೆ ಎಂದು ವಿವರಿಸಿದ್ದಾರೆ.

ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್‌ ಚೈನ್‌ ಡಿಜಿಟಲ್‌ ಟ್ರಾಕಿಂಗ್‌ ವ್ಯವಸ್ಥೆಗಳನ್ನು ಜಾರಿಗೆ ತರಲಾಗುವುದು. ಮದ್ಯ ರವಾನೆಗೆೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ ಫೆನ್‌್ಸ್ಡ- ಇ-ಲಾಕ್‌ ವ್ಯವಸ್ಥೆಯನ್ನು ಅಳವಡಿಸುವುದಾಗಿ ಘೋಷಿಸಿದ್ದಾರೆ. ಈ ಕ್ರಮಗಳು ನೈಜ್ಯ ಸಮಯದ ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸಲಿದ್ದು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ ಎಂದಿದ್ದಾರೆ.

ಉತ್ಪಾದನಾ ಸವಲತ್ತುಗಳನ್ನು ಸ್ವಯಂ ಚಾಲಿತವಾಗಿ ನವೀಕರಿಸಲಾಗುವುದು. ಲೇಬಲ್‌ ಅನುಮೋದನೆಗಳುಸಿಎಲ್‌-5, ಆರ್‌ ವಿ ಬಿ ಸನ್ನದ್ದುಗಳು ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮತ್ತು ಶುಲ್ಕ ಪಾವತಿಯ ಷರತ್ತಿಗೆ ಒಳಪಟ್ಟು ಯಾವುದೇ ಹಸ್ತಕ್ಷೇಪವಿಲ್ಲದೆ, ಪರಿಭಾವಿತ ಅನುಮೋದನೆ ವ್ಯವಸ್ಥೆಗೆ ಸೇರ್ಪಡೆಯಾಗುತ್ತವೆ ಎಂದಿದ್ದಾರೆ.

ಡಿಸ್ಟಲರಿ ಮತ್ತು ಬ್ರೂವರಿಗಳಿಗೂ ಆನ್‌ಲೈನ್‌ನಲ್ಲಿ ಪರಿಬಾವಿತ ಅನುಮೋದನೆಯನ್ನು ನೀಡಲಾಗುವುದು. 24 ಗಂಟೆಗಳ ಕಾರ್ಯಾಚರಣೆ ಮತ್ತು ರವಾನೆಗೆ ಅನುಮತಿ ನೀಡಲಾಗುತ್ತದೆ. ಬಿಯರ್‌ ಲೇಬಲ್‌ ಗಳಲ್ಲಿ ಮಾಲ್‌್ಟ ಮತ್ತು ಸಕ್ಕರೆ ಅಂಶವನ್ನು ಕಡ್ಡಾಯವಾಗಿ ನಮೂದಿಸುವ ಅಗತ್ಯತೆಯನ್ನು ರದ್ದುಗೊಳಿಸಲಾಗುತ್ತದೆ. ಮದ್ಯವಲಯದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಡಿಸ್ಟಲರಿಗಳು ಮತ್ತು ಬ್ರೂವರಿಗಳಲ್ಲಿ ಪ್ರವಾಸಿಗರಿಗೆ ಮದ್ಯ ಸವಿಯಲು ಮತ್ತು ತಮ ಆವರಣದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

ಶಾಸಕಾಂಗ ಅನುಮೋದನೆ ಪಡೆದು ಸಮಗ್ರ ಸುಧಾರಣೆಯ ಹೊಸ ಅಬಕಾರಿ ಮಸೂದೆಯನ್ನು ಪರಿಚಯಿಸಲಾಗುವುದು ಇದರಿಂದ ಪಾರದರ್ಶಕತೆ ಮತ್ತು ಸುಲಭ ವ್ಯವಹಾರ ಅವಕಾಶವಾಗಲಿದೆ ಎಂದಿದ್ದಾರೆ.2025-26ನೇ ಸಾಲಿನಲ್ಲಿ ಫೆಬ್ರವರಿ ಅಂತ್ಯದವರೆಗೆ ಅಬಕಾರಿ ಇಲಾಖೆಯಿಂದ 36,492 ಕೋಟಿ ರೂಪಾಯಿಗಳ ರಾಜಸ್ವ ಸಂಗ್ರಹವಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 12.7 ರಷ್ಟು ಬೆಳವಣಿಗೆಯಾಗಿದೆ. 2026-27ನೇ ಸಾಲಿಗೆ 45,000 ಕೋಟಿ ರೂ.ಗಳ ಆದಾಯ ಸಂಗ್ರಹದ ಗುರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಐಟಿ ಕ್ಷೇತ್ರಕ್ಕೆ 45000 ಕೋಟಿ ರೂ.

ಬೆಂಗಳೂರು,ಮಾ.6- ಸೆಮಿ ಕಂಡಕ್ಟರ್‌ ಮತ್ತು ಇಎಸ್‌‍ಡಿಎಂ ವಲಯಗಳ ಉತ್ಪಾದನೆಯಲ್ಲಿ ನಮ ರಾಜ್ಯ ಅಗ್ರಸ್ಥಾನದಲ್ಲಿದ್ದು, ಪ್ರಮುಖ ಜಾಗತಿಕ ಕಂಪನಿಗಳಾದ ಫಾಕ್‌್ಸ ಕಾರ್ನ್‌ ಲ್ಯಾಮ್‌ ರಿಸರ್ಚ್‌, ಅಪ್ಲೈಡ್‌ ಮೆಟೀರಿಯಲ್ಸ್ ರಾಜ್ಯದಲ್ಲಿ ಹೂಡಿಕೆ ಮಾಡಿವೆ. ಬೃಹತ್‌ ಕಂಪನಿಗಳಿಂದ 45 ಸಾವಿರ ಕೋಟಿ ರೂ.ಗಳ ಹೂಡಿಕೆ ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, 2ನೇ ಮತ್ತು 3ನೇ ಹಂತದ ನಗರಗಳಾದ ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ, ಮೈಸೂರಿನಲ್ಲಿ ಉದ್ಯಮಿಗಳಿಗೆ ಇನ್ಕುಬೇಷನ್‌ ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್‌-ಅಂಡ್‌-ಪ್ಲೇ ಸೌಲಭ್ಯದ ಲೀಪ್‌ ಲ್ಯಾಬ್‌್ಸಗಳನ್ನು ಸ್ಥಾಪಿಸಲಾಗುವುದು ಎಂದರು.

ಹೊಸ ಐಟಿ ನೀತಿ 2025-30ರಡಿಯಲ್ಲಿ 2030ರ ವೇಳೆಗೆ ಸಾಫ್‌್ಟವೇರ್‌ ರಫ್ತು 11.5 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆ ಇದೆ. ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ಸಕ್ರಿಯ ಸ್ಟಾರ್ಟ್‌ಅಪ್‌ ಕೇಂದ್ರಗಳಿದ್ದು, ಜಾಗತಿಕ ಸ್ಟಾರ್ಟ್‌ಅಪ್‌ ಪರಿಸರಗಳಲ್ಲಿ ಕಳೆದ ವರ್ಷ 21ನೇ ಸ್ಥಾನದಿಂದ 14ನೇ ಸ್ಥಾನಕ್ಕೇರಿದೆ. ಎಐ ಮತ್ತು ಬಿಗ್‌ ಡೇಟಾ ಕ್ಷೇತ್ರದಲ್ಲಿ ವಿಶ್ವದಲ್ಲಿ 50 ಎಐ ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಸ್ಥಳೀಯ ಆರ್ಥಿಕ ಆಕ್ಸಿಲೇಟರ್‌ ಕಾರ್ಯಕ್ರಮದಡಿ ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ನವೋದ್ಯಮ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಒಂದು ಸಾವಿರ ಕೋಟಿ ರೂ. ಒದಗಿಸಲಾಗುವುದು. ಎಐ ಕ್ಷೇತ್ರವನ್ನು ಬಲಪಡಿಸಲು ಐಐಎಸ್‌‍ಸಿ ಅಧೀನದಲ್ಲಿರುವ ಪ್ರತಿಷ್ಠಾನವಾದ ಎಐ ಮತ್ತು ರೋಬೋಟಿಕ್‌ ತಂತ್ರಜ್ಞಾನ ಪಾರ್ಕ್‌ ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ ಬೆಂಗಳೂರು ರೊಬೋಟಿಕ್‌್ಸ ಮತ್ತು ಎಐ ಇನೋವೇಶನ್‌ ಜೋನ್‌ ಎಂಬ ರೊಬೋಟಿಕ್‌ ಮತ್ತು ಎಐ ಕ್ಯಾಂಪಸ್‌‍ ಅನ್ನು ಸ್ಥಾಪಿಸಲಾಗುವುದು. ಐಐಐಟಿ ರಾಯಚೂರಿನಲ್ಲಿ ಎಐ ಶ್ರೇಷ್ಠತಾ ಕೇಂದ್ರವನ್ನು 5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ರಾಜ್ಯಸರ್ಕಾರದ ಜಿಸಿಸಿ ನೀತಿಯಿಂದ ರಾಜ್ಯದಲ್ಲಿ 550 ಕ್ಕೂ ಹೆಚ್ಚು ಜಿಸಿಸಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರಡಿಯಲ್ಲಿ 2029ರ ವೇಳೆಗೆ 500 ಹೊಸ ಜಿಸಿಸಿಗಳನ್ನು ಸ್ಥಾಪಿಸುವ ಗುರಿ ಇದೆ. ಕಿಯೋನಿಕ್ಸ್ ಮೂಲಕ ಮಂಗಳೂರಿನಲ್ಲಿ ಐಟಿ ಪಾರ್ಕ್‌ ಅಭಿವೃದ್ಧಿಗೊಳಿಸಿ ಜಿಸಿಸಿ ಪ್ರೋತ್ಸಾಹಿಸಲಾಗುವುದು ಎಂದರು.

ಮೈಸೂರು ರಾಜ್ಯದ 2ನೇ ಐಟಿ ಸಿಟಿ :
ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಮತ್ತು ವಿಕೇಂದ್ರಿಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ 2ನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್‌ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ. ಪರಿಣಾಮಕಾರಿ ನರ ಶಸ್ತ್ರಚಿಕಿತ್ಸೆಗೆ ಪೂರಕವಾಗಲು ಅಡ್ವಾನ್ಸ್ಡ್ ಸರ್ಜಿಕಲ್‌ ಅಸಿಸ್ಟೀವ್‌ ರೊಬೋಟ್‌ಗಳನ್ನು ಐಐಐಟಿ ಬೆಂಗಳೂರು ಮತ್ತು ನಿಮ್ಹಾನ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಲು 4 ಕೋಟಿ ಒದಗಿಸಲಾಗುವುದು ಎಂದರು.

ಮಾನವ ತಳಿ ಶಾಸ್ತ್ರ ಕೇಂದ್ರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಒದಗಿಸಲಾಗುವುದು. ಬೆಂಗಳೂರಿನಲ್ಲಿ 16 ಕೋಟಿ ರೂ.ಗಳ ವೆಚ್ಚದಲ್ಲಿ 2 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕ್ವಾಂಟಮ್‌ ರೋಡ್‌ ಮ್ಯಾಪ್‌ನ ಪ್ರಥಮ ಹಂತದ ಅನುಷ್ಠಾನಕ್ಕೆ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ.

6 ಹೊಸ ತಾರಾಲಯ :
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಹಾಗೂ 11 ಜಿಲ್ಲೆಗಳಲ್ಲಿ ತಾರಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ, ಬೀದರ್‌ ಜಿಲ್ಲೆಗಳಲ್ಲಿ ತಲಾ 4 ಕೋಟಿ ರೂ.ಗಳಂತೆ ಒಟ್ಟು 24 ಕೋಟಿ ರೂ. ವೆಚ್ಚದಲ್ಲಿ ತಾರಾಲಯವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ವಿಜ್ಞಾನನಗರವನ್ನು 233 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅನುಮೋದನೆ ದೊರೆತ ಬಳಿಕ ವಾಸ್ತುವಿನ್ಯಾಸ ತಯಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೂಲಭೂತ ಸೌಕರ್ಯ ಅಭಿವೃದ್ಧಿಗೆ 8600 ಕೋಟಿ

ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ದಿ ಕಾರ್ಯಕ್ರಮದಡಿ 8600 ಕೋಟಿ ವೆಚ್ಚದ ಕಾಮಗಾರಿಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ತಮ 17ನೇ ಬಜೆಟ್‌ ಮಂಡನೆ ಮಾಡಿದ ಸಿದ್ದರಾಮಯ್ಯನವರು, ಇಲಾಖಾವಾರು ನೀಡುವ ಅನುದಾನಗಳನ್ನು ಹೊರತುಪಡಿಸಿ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ದಿ ಕಾರ್ಯಕ್ರಮ 8600 ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2ನೇ ಹಂತವಾಗಿ 2026-27ನೇ ಸಾಲಿನಲ್ಲಿ 4000 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ಆರ್ಥಿಕತೆಯಲ್ಲಿ ಸದೃಢ ಬೆಳವಣಿಗೆ :

ಬೆಂಗಳೂರು,ಮಾ.6- ರಾಜ್ಯದ ಜಿ.ಎಸ್‌.ಡಿ.ಪಿಯು 2025-26ನೇ ಸಾಲಿನಲ್ಲಿ ಶೇ.8.1ರಷ್ಟು ನೈಜ ಬೆಳವಣಿಗೆಯನ್ನು ದೇಶದ ಜಿ.ಡಿ.ಪಿ ಬೆಳವಣಿಗೆ ಶೇ.7.4 ಕ್ಕಿಂತ ಹೆಚ್ಚಿಗೆ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮ 17ನೇ ಬಜೆಟ್‌ ಮಂಡಿಸಿದ ಅವರು, ಆರ್ಥಿಕತೆಯಲ್ಲಿನ ಈ ಸದೃಢ ಬೆಳವಣಿಗೆಯು ರಾಜ್ಯದ ಎಲ್ಲಾ ವಲಯಗಳ ಸಮಗ್ರ ಬೆಳವಣಿಗೆಯಿಂದ ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2025-26ನೇ ಸಾಲಿನಲ್ಲಿ ರಾಜ್ಯದ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಬೆಳವಣಿಗೆ ಕಂಡುಬಂದಿದೆ. ಉತ್ತಮ ಮುಂಗಾರಿನಿಂದಾಗಿ ಕೃಷಿ ಕ್ಷೇತ್ರದಲ್ಲಿ ಶೇ.9.1ರಷ್ಟು, ಕೈಗಾರಿಕಾ ವಲಯದಲ್ಲಿ ಶೇ.6.7ರಷ್ಟು ಹಾಗೂ ಸೇವಾ ವಲಯದಲ್ಲಿ ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ.

ಸರ್ಕಾರವು ಹೆಚ್ಚಿಸಿದ ಬಂಡವಾಳ ಹೂಡಿಕೆಯ ಖಾಸಗಿ ಹೂಡಿಕೆಯಲ್ಲಿನ ಹೆಚ್ಚಳವು ರಾಜ್ಯದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ. 2025-26ರ ಮೊದಲಾರ್ಧದಲ್ಲಿ, ರಾಜ್ಯಕ್ಕೆ 9.4 ಬಿಲಿಯನ್‌ ಅಮೇರಿಕನ್‌ ಡಾಲರ್‌ಗಳಷ್ಟು ವಿದೇಶಿ ಹೂಡಿಕೆಯಾಗಿೆದೆ. ಇದು ದೇಶದ ಒಟ್ಟು ವಿದೇಶಿ ಒಳಹರಿವಿನ ಶೇ.26.7 ಹಾಗೂ ಕಳೆದ ವರ್ಷಕ್ಕಿಂತ 2.6 ಪಟ್ಟು ಹೆಚ್ಚಳವನ್ನು ದಾಖಲಿಸಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2025?26ರ ಮೊದಲಾರ್ಧದಲ್ಲಿ ಮಹಾರಾಷ್ಟ್ರ, ಗುಜರಾತ್‌ ಮತ್ತು ದೆಹಲಿಯಂತಹ ಪ್ರಮುಖ ರಾಜ್ಯಗಳಲ್ಲಿ ವಿದೇಶಿ ಒಳಹರಿವು ಕಡಿಮೆಯಾದರೂ ನಮ್ಮ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಯಾಗಿದೆ. ಕೈಗಾರಿಕಾ ನೀತಿ 2025-30 ಅನ್ನು ಜಾರಿಗೊಳಿಸುವುದರಿಂದ ಇನ್ನೂ ಹೆಚ್ಚು ಹೂಡಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಸಿನಿಮಿತ್ರ ಆನ್‌ಲೈನ್‌ ಡಿಜಿಟಲ್‌ ವ್ಯವಸ್ಥೆ

ಬೆಂಗಳೂರು,ಮಾ.6- ರಾಜ್ಯದಲ್ಲಿ ಚಲನಚಿತ್ರ ಹಾಗೂ ಇತರ ಚಿತ್ರೀಕರಣಗಳಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಒಂದೇ ವೇದಿಕೆಯಲ್ಲಿ ನೀಡಲು ಸಿನಿಮಿತ್ರ ಎಂಬ ಆನ್‌ಲೈನ್‌ ಡಿಜಿಟಲ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು
ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ರಾಜ್ಯದ ಪ್ರವಾಸಿತಾಣಗಳು, ಐತಿಹಾಸಿಕ ಸಾರಕಗಳು ಮತ್ತು ಚಿತ್ರೀಕರಣ ಸ್ಥಳಗಳ ಮಾಹಿತಿಯನ್ನು ಒಳಗೊಂಡ ಕರ್ನಾಟಕ ಫಿಲಂ ಲೊಕೇಷನ್‌ ಡಿಜಿಟಲ್‌ ಮ್ಯಾಪ್‌ಅನ್ನು ಒಂದು ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾ ಗುವುದು ಎಂದರು.

ಗುಣಾತಕ ಚಲನಚಿತ್ರಗಳಿಗೆ ನೀಡುವ ಸಹಾಯಧನವನ್ನು ನೀಡಲು ಮೂರು ವರ್ಷಗಳ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಲಾಗುವುದು. ಇದಕ್ಕಾಗಿ 20 ಕೋಟಿ ರೂ. ಒದಗಿಸಲಾಗಿದೆ. ರಾಷ್ಟ್ರಪಿತ ಮಹಾತ ಗಾಂಧೀಜಿಯವರ ವಿಚಾರಧಾರೆಗಳನ್ನು ಯುವಜನರಿಗೆ ತಿಳಿಸಲು ಮತ್ತು ಜಿಲ್ಲಾ ಗಾಂಧಿಭವನಗಳನ್ನು ಪುನಶ್ಚೇತನಗೊಳಿಸಲು ಮಹಾತಗಾಂಧಿ ಜನಶಿಕ್ಷಣ ಯೋಜನೆಯನ್ನು ರೂಪಿಸಿ ಜಾರಿಗೊಳಿಸುವುದಾಗಿ ಪ್ರಕಟಿಸಿದರು.

ವಾರ್ತಾ ಇಲಾಖೆಯಲ್ಲಿ ಲಭ್ಯವಿರುವ ಛಾಯಾಚಿತ್ರಗಳು ಹಾಗೂ ವಿಡಿಯೋ ಡಾಕ್ಯುಮೆಂಟರಿಗಳನ್ನು ಡಿಜಿಟಲ್‌ ಮಾದರಿಗೆ ಪರಿವರ್ತಿಸಿ ಡಿಜಿಟಲ್‌ ದೃಶ್ಯ ಕರ್ನಾಟಕ ಎಂಬ ವೇದಿಕೆಯನ್ನು ಕಲ್ಪಿಸಲು 5 ಕೋಟಿ ರೂ. ಒದಗಿಸಲಾಗಿದೆ. ದಿ.ಪುಟ್ಟಣ್ಣ ಕಣಗಾಲ್‌ ಅವರ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು. ಮಹಾತ ಗಾಂಧೀಜಿಯವರು ಭೇಟಿ ಕೊಟ್ಟ ರಾಜ್ಯದ ವಿವಿಧ ಸ್ಥಳಗಳಲ್ಲಿ ಅವರ ಸರಣಾರ್ಥ ಗಾಂಧಿ ಸಾರಕ ಸ್ತಂಭಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಕಾನೂನುಗಳು ಕನ್ನಡಕ್ಕೆ ಭಾಷಾಂತರ

ಬೆಂಗಳೂರು,ಮಾ.6- ಸರ್ಕಾರದಿಂದ ರಚಿಸಲ್ಪಡುವ ಎಲ್ಲಾ ಕಾನೂನುಗಳನ್ನು ಕನ್ನಡದಲ್ಲಿ ಸಿದ್ಧಪಡಿಸಲಾಗುವುದು ಹಾಗೂ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಅಧಿನಿಯಮಿಸಿದ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುವುದು ಎಂದರು.ಕಳೆದ ಸಾಲಿನಲ್ಲಿ ವಿಶೇಷ ಲೋಕ ಅದಾಲತ್‌ಗಳನ್ನು ನಡೆಸಿ 2.82 ಕೋಟಿ ಸಿವಿಲ್‌ ಪ್ರಕರಣಗಳನ್ನು ಮತ್ತು 1113 ಭೂಸ್ವಾಧೀನ ಪ್ರಕರಣಗಳನ್ನು ಅನುಕ್ರಮವಾಗಿ 9,978 ಕೋಟಿ ರೂ. ಹಾಗೂ 132 ಕೋಟಿ ರೂ.ಗಳ ಪರಿಹಾರದ ಮೊತ್ತದೊಂದಿಗೆ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಣೆಗೊಳಿಸಲು ಮೂಲಭೂತ ಸೌಕರ್ಯಗಳಾದ ಕೋರ್ಟ್‌ ಕಟ್ಟಡ ಮತ್ತು ನ್ಯಾಯಾಧೀಶರಿಗೆ ವಸತಿ ಗೃಹ ನಿರ್ಮಾಣಕ್ಕಾಗಿ 175 ಕೋಟಿ ರೂ. ಒದಗಿಸಲಾಗಿದೆ. ಕಾಗದರಹಿತ ಸಮರ್ಥವಾಗಿ ನಾಗರಿಕ ಕೇಂದ್ರಿತ ನ್ಯಾಯಾಂಗವನ್ನು ಜಾರಿಗೆ ತರಲು ಬೆಂಗಳೂರು, ಧಾರವಾಡ, ಕಲಬುರಗಿ ಮತ್ತು ಮೈಸೂರು ನಗರಗಳಲ್ಲಿ ಪ್ರಾಯೋಗಿಕವಾಗಿ ಇ ಕೋರ್ಟ್‌ಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದರು.

ಅಡ್ವೊಕೇಟ್‌ ಜನರಲ್‌ರವರ ಕಚೇರಿಗೆ ಗ್ರಂಥಾಲಯ, ವಿಸಿ ಸೌಲಭ್ಯ ಒದಗಿಸಲು ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಕಚೇರಿಗಳಲ್ಲಿನ ಸಿಸಿಎಂಎಸ್‌‍ ಇ-ಫೈಲಿಂಗ್‌ಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಉನ್ನತೀಕರಿಸಲು 5 ಕೋಟಿ ರೂ.ಗಳನ್ನು ಒದಗಿಸಲಾಗುವುದು. ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸಿ ಕಡಿಮೆ ಮಾಡಬಹುದಾಗಿದ್ದು, ಮಧ್ಯಸ್ಥಿಕೆಯಲ್ಲಿ ಆಸಕ್ತಿ ಇರುವ ನ್ಯಾಯಾಧೀಶರು ಮತ್ತು ವಕೀಲರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

100 ಕೋಟಿ ವೆಚ್ಚದಲ್ಲಿ ಸಿಎಂ ಕೃಷಿ ವಿಸ್ತಾರ ಯೋಜನೆ

ಬೆಂಗಳೂರು,ಮಾ.6- ರಾಜ್ಯದ ರೈತರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ರೈತರ ಸ್ಥಿರ ಮತ್ತು ಹೆಚ್ಚುವರಿ ಆದಾಯ ಮೂಲವನ್ನು ಹೆಚ್ಚಿಸುವ ಉದ್ದೇಶದಿಂದ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. 2026-27 ನೇ ಸಾಲಿನ ಆಯ ವಯದಲ್ಲಿ ತಿಳಿಸಿದ್ದಾರೆ.

ಉತ್ಪಾದನೋತ್ತರ ಕೃಷಿ ಚಟುವಟಿಕೆಗಳಾದ ಸಂಸ್ಕರಣೆ, ವೌಲ್ಯ ವರ್ಧನೆ, ವೌಲ್ಯ ಸರಪಳಿ ಅಭಿವೃದ್ಧಿ, ಕೃಷಿ ತಾಜ್ಯ ಮರು ಬಳಕೆ ಹಾಗೂ ಮಾರುಕಟ್ಟೆ ಸಂಪರ್ಕವನ್ನು ಸಮಗ್ರವಾಗಿ ಬಲಪಡಿಸುವ ಮೂಲಕ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯನ್ನು ಘೋಷಿಸಲಾಗಿದೆ ಎಂದರು.
ಸಿರಿದಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ನಿರ್ಮಿಸಲಾಗುತ್ತಿರುವ ರೈತರು ಹಾಗೂ ಗ್ರಾಮೀಣ ಯುವಕರು ಹಾಗೂ ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ ಸಂಸ್ಕರಣೆ ಸೌಲಭ್ಯ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸಲು ಏಕಗವಾಕ್ಷಿಯೊಂದಿಗೆ ಮಿಲೇಟ್‌ಹಬ್‌ನ್ನು ಸ್ಥಾಪಿಸಲಾಗುವುದೆಂದರು.

ಹವಾಮಾನ ಕೃಷಿ ಮಾಹಿತಿಗಾಗಿ ರೈತ ಕರೆ ಕೇಂದ್ರ

ಬೆಂಗಳೂರು,ಮಾ.6- ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖ ಮಾಹಿತಿಯನ್ನು ತ್ವರಿತವಾಗಿ ಒದಗಿಸುವ ದೃಷ್ಠಿಯಿಂದ ಎಐ ತಂತ್ರಜ್ಞಾನದಿಂದ ರೈತ ಕರೆ ಕೇಂದ್ರವನ್ನು ಉನ್ನತೀಕರಿಸಲಾಗುವುದೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯ ಮಟ್ಟದ ಕೃಷಿ ಉದ್ಯಮಿ ತರಬೇತಿ ಕೇಂದ್ರವನ್ನಾಗಿ ಉನ್ನತಿಕರಿಸಲಾಗುವುದು ಎಂದರು.ಕೃಷಿ ಚಟುವಟಿಕೆಗಳಲ್ಲಿ ಸಮಯ ಹಾಗೂ ಶ್ರಮ ತಗ್ಗಿಸಿ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ ಯಂತ್ರಗಳನ್ನು ಹೈಟೆಕ್‌ ಹಾರ್ವೆಸ್ಟರ್‌ ಹಬ್‌ ಯೋಜನೆಯಡಿ ಸೇರ್ಪಡೆಗೊಳಿಸಲಾಗುವುದು ಎಂದರು.ಕೃಷಿ ಸಂಬಂಧಿತ ಕಸುಬುಗಳು ಮತ್ತು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈ ಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು ಎಂದರು.

ಕುಸುಮ್‌-ಸಿ ಮಾದರಿ ಸೌರ ಕೃಷಿ ಯೋಜನೆ

ಬೆಂಗಳೂರು,ಮಾ.6- ರಾಜ್ಯಸರ್ಕಾರವು ಮುಖ್ಯಮಂತ್ರಿ ಸೌರಕೃಷಿ ಯೋಜನೆಯಿಂದ ಹೊಸ ಯೋಜನೆಯನ್ನು ಕುಸುಮ್‌-ಸಿ ಮಾದರಿಯಲ್ಲಿ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಈ ಯೋಜನೆಯಡಿ ಕೆಪಿಟಿಸಿಎಲ್‌ ಉಪಕೇಂದ್ರಗಳಲ್ಲಿ ರಿನೀವಬಲ್‌ ಎನರ್ಜಿ ಸರ್ವಿಸ್‌‍ ಕಂಪನಿ ಮಾದರಿಯಲ್ಲಿ 10,500 ಕೋಟಿ ರೂ. ವೆಚ್ಚದಲ್ಲಿ 3,000 ಮೆಗಾವ್ಯಾಟ್‌ ಕ್ಷಮತೆಯ ಸೌರ ವಿದ್ಯುತ್‌ ಸ್ಥಾವರಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕುಸುಮ್‌-ಸಿ ಯೋಜನೆಯಡಿ ನೀರಾವರಿ ಪಂಪ್‌ಸೆಟ್‌ಗಳ ವಿಕೇಂದ್ರಿಕೃತ ಫೀಡರ್‌ ಸೌರೀಕರಣವನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,777 ಮೆಗಾವ್ಯಾಟ್‌ ಸಾಮರ್ಥ್ಯದ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದರು.

2026-27ನೇ ಸಾಲಿನಲ್ಲಿ 2 ಸಾವಿರ ಮೆಗಾವ್ಯಾಟ್‌ ಬೆಸ್‌‍ ಯೋಜನೆಯನ್ನು 3,400 ಕೋಟಿ ರೂ. ವೆಚ್ಚದಲ್ಲಿ ಹುಲಿಯೂರು, ಪಾವಗಡ, ಕುಷ್ಟಗಿಯ ಸಬ್‌ಸ್ಟೇಷನ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

1,250 ವಾಹನ ಚಾರ್ಜಿಂಗ್‌ ಕೇಂದ್ರ :
ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸಲು ಎಸ್ಕಾಂಗಳ ಸಹಯೋಗದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ 777 ಕೋಟಿ ರೂ. ವೆಚ್ಚದಲ್ಲಿ 1,250 ವಾಹನ ಚಾರ್ಜಿಂಗ್‌ ಕೇಂದ್ರಗಳನ್ನು ಪಿಎಂ-ಇ ಡ್ರೈವ್‌ ಯೋಜನೆಯಡಿ ಸ್ಥಾಪಿಸಲಾಗುವುದು ಎಂದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಐಐಎಂ ಬೆಂಗಳೂರು, ಯೂನಿವರ್ಸಿಟಿ ಆಫ್‌ ನ್ಯೂ ಸೌತ್‌ ವೇಲ್‌್ಸ, ಆಸ್ಟ್ರೇಲಿಯಾ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಇಂಕ್ಯುಬೇಶನ್‌ ಸೆಂಟರ್‌ಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಗೃಹಜ್ಯೋತಿಗೆ 10,528 ಕೋಟಿ ರೂ. :

ಗೃಹಜ್ಯೋತಿ ಯೋಜನೆಗೆ ಇದುವರೆಗೂ 1.74 ಕೋಟಿ ಗ್ರಾಹಕರು ನೋಂದಾಯಿಸಿ ಕೊಂಡಿದ್ದು, 3 ವರ್ಷದಲ್ಲಿ 28 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 10,578 ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
21 ಲಕ್ಷ ರೈತರ ಕೃಷಿ ಚಟುವಟಿಕೆಯ ಜೀವನಾಡಿಯಾಗಿರುವ 36 ಲಕ್ಷಗಳಷ್ಟು ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸಹಾಯಧನ ಯೋಜನೆಯಡಿ 3 ವರ್ಷದಲ್ಲಿ 48 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 19,290 ಕೋಟಿ ರೂ. ಒದಗಿಸಲಾಗಿದೆ ಎಂದರು.

ರಾಜ್ಯ-ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿ

ಬೆಂಗಳೂರು,ಮಾ.6- ಲೋಕೋಪಯೋಗಿ ಇಲಾಖೆಯ ವಿವಿಧ ಮುಂದುವರೆದ ಯೋಜನೆಗಳಿಗೆ 2,200 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಹಾಗೂ 3,500 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು 5,776 ಕೋಟಿ ರೂ. ವೆಚ್ಚದಲ್ಲಿ 2026-27ನೇ ಸಾಲಿನಲ್ಲಿ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಕೆಶಿಪ್‌-4 ಅಡಿಯಲ್ಲಿ ಎಡಿಬಿ ನೆರವಿನೊಂದಿಗೆ ಒಟ್ಟು 5,736 ಕೋಟಿ ರೂ. ಯೋಜನಾ ವೆಚ್ಚದಲ್ಲಿ ರಾಜ್ಯಾದ್ಯಂತ ಸುಮಾರು 875 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆ ಪಡೆದು ಟೆಂಡರ್‌ ಆಹ್ವಾನಿಸಲು ಕ್ರಮ ವಹಿಸಲಾಗುವುದು ಎಂದರು.

ತಜ್ಞರ ಸಮಿತಿ :
ರಾಜ್ಯದ ವಿವಿಧ ಇಲಾಖೆಗಳಡಿ ನಿರ್ಮಿಸಲಾಗುವ ಕಟ್ಟಡಗಳ ವಿನ್ಯಾಸ ಮತ್ತು ವೆಚ್ಚದಲ್ಲಿ ಏಕರೂಪತೆಯನ್ನು ತರಲು ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು. ಎಲ್ಲಾ ಇಲಾಖೆಗಳಡಿಯಲ್ಲಿನ ಕಟ್ಟಡಗಳ ವಿನ್ಯಾಸ ಮತ್ತು ಅಂದಾಜುಗಳನ್ನು ಈ ಸಮಿತಿಯ ಶಿಫಾರಸಿನಂತೆ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಸೇತುವೆಗಳ ನಿರ್ಮಾಣಕ್ಕಾಗಿ ಮುಂದಿನ 2 ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ಒದಗಿಸಲಾಗುವುದು. 400 ಕೋಟಿ ರೂ. ವೆಚ್ಚದಲ್ಲಿ 135 ಕಿ.ಮೀ. ಉದ್ದದ ವಾಗ್ದಾರಿ-ರಿಬ್ಬನ್‌ಪಲ್ಲಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಕೆಕೆಆರ್‌ಡಿಬಿಯಿಂದ ಶೇ.50 ರಷ್ಟು ಅನುದಾನ ಒದಗಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದರು.

ಡಿಜಿಟೈಸೇಷನ್‌ :
ಲೋಕೋಪಯೋಗಿ ಇಲಾಖೆಯ ಅಧೀನ ಆಸ್ತಿ ದಾಖಲೆಗಳನ್ನು ಲ್ಯಾಂಡ್‌ ಪ್ಲ್ಯಾನ್‌ ಸರ್ವೆ ಮಾಡಿ ಡಿಜಿಟೈಸೇಷನ್‌ ಹಾಗೂ ರೆಕಾರ್ಡ್‌ ರೂಂ ನಿರ್ಮಾಣವನ್ನು 5 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಂಪರ್ಕ ರಹಿತ ಜನವಸತಿ ಪ್ರದೇಶಗಳಿಗೆ ಸಾರ್ವಜನಿಕರ ಮತ್ತು ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ 300 ಕಾಲುಸಂಕಗಳನ್ನು ನಿರ್ಮಿಸಲಾಗುವುದು ಎಂದು ಪ್ರಕಟಿಸಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-5 ಘಟ್ಟ 2 ರಡಿ 1846 ಕಿ.ಮೀ. ಉದ್ದದ ರಸ್ತೆಯನ್ನು 5000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.ರಾಜ್ಯಪಾಲರ ಕಚೇರಿಯ ಆವರಣದಲ್ಲಿನ ಆಡಳಿತಾತಕ ಬ್ಲಾಕ್‌ ಒಳಾಂಗಣ ಕ್ರೀಡಾಂಗಣ ಹಾಗೂ ಅಧಿಕಾರಿಗಳ ವಸತಿ ಗೃಹಗಳನ್ನು 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಸಹಾಯಧನ

ಬೆಂಗಳೂರು,ಮಾ.6- ಕುಕ್ಕೆಸುಬ್ರಹಣ್ಯ ಹಾಗೂ ಕೊಲ್ಲೂರು ಮುಕಾಂಭಿಕ ದೇವಾಲಯಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ವೈಷ್ಣೋದೇವಿ ದರ್ಶನಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾತಿಗಳಿಗೆ ಸರ್ಕಾರದಿಂದ ತಲಾ 5 ಸಾವಿರ ರೂ. ಸಹಾಯಧನವನ್ನು ಡಿಬಿಟಿ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ ಎಂದರು. ಯಾತ್ರಾರ್ಥಿಗಳ ವೆಚ್ಚವನ್ನು ಭರಿಸುವ ದೃಷ್ಟಿಯಿಂದ ಈ ಯೋಜನೆಯನ್ನು ನೀಡಲು ಉದ್ದೇಶಿಸಲಾಗಿದ್ದು, ಇದಕ್ಕೆ 5 ಕೋಟಿ ರೂ. ಮಿಸಲಿರಿಸಲಾಗಿದೆ ಎಂದರು. ಧರ್ಮದಾಯದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳ 259 ಕಲ್ಯಾಣಿಗಳನ್ನು ಮೂರು ವರ್ಷಗಳಲ್ಲಿ ಪುನರುಜ್ಜೀವನಗೊಳಿಸಲು ಜಲನಿಧಿ ಕಲ್ಯಾಣಿಗಳ ಪುನಶ್ಚೇತನ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ಯೋಜನೆಗೆ 5 ಕೋಟಿ ರೂ. ಒದಗಿಸಲಾಗುವುದು ಎಂದರು.

ಹೊರ ರಾಜ್ಯದ ಪುಣ್ಯಕ್ಷೇತ್ರಗಳಲ್ಲಿರುವ ಕರ್ನಾಟಕ ರಾಜ್ಯದ ಛತ್ರಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ವಾರನಾಸಿನಲ್ಲಿ ಪ್ರಸ್ತುತವಿರುವ ಛತ್ರ ಶಿಥಿಲಗೊಂಡಿದ್ದು, ಹೊಸ ಛತ್ರವನ್ನು ನಿರ್ಮಿಸಲಾಗುವುದು, ಮಂತ್ರಾಲಯದಲ್ಲಿರುವ ಛತ್ರ ನವೀಕರಣ, ಶ್ರೀಶೈಲಂನಲ್ಲಿ ನೂತನ ಯಾತ್ರಾ ನಿರ್ಮಾಣ, ತುಳಜಾಪುರದಲ್ಲಿ ನೂತನ ಛತ್ರ ನಿರ್ಮಾಣ, ಧಾರ್ಮಿಕದತ್ತಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತಂತ್ರಜ್ಞಾನಾಧರಿತ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಕೋಲಾರದಲ್ಲಿ ರೈತ ಮಾಲ್‌ಗಳ ಸ್ಥಾಪನೆ

ಬೆಂಗಳೂರು,ಮಾ.6-ಗುಣಮಟ್ಟದ ಕೃಷಿ ಪರಿಕರ ಬಿತ್ತನೆ ಬೀಜ, ಕೀಟ ನಾಶಕ,ರಸಗೊಬ್ಬರ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಎಂಎಸ್‌‍ಐಎಲ್‌ ಮಾದರಿಯಲ್ಲಿ ರೈತ ಮಾಲ್‌ ಸ್ಥಾಪಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಕೃಷಿ ಯಂತ್ರೋಪಕರಣಗಳು, ರಸಗೊಬ್ಬರ, ಕೀಟ ನಾಶಕಗಳನ್ನು ಒಂದೇ ಸೂರಿನಡಿ ಒದಗಿಸಿ ಮಾರುಕಟ್ಟೆಯ ಅನಿಶ್ಚಿತತೆಯನ್ನು ನಿವಾರಿಸುವ ಉದ್ದೇಶದಿಂದ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಎಂಎಸ್‌‍ಐಎಲ್‌ ವತಿಯಿಂದ ರೈತ ಮಾಲುಗಳನ್ನು ಸ್ಥಾಪಿಸಲಾಗುವುದು ಎಂದರು.

ಕಳಪೆ, ಅಸುರಕ್ಷಿತ,ದೋಷಪೂರಿತ ಬಿತ್ತನೆ ಬೀಜ,ಕೀಟ ನಾಶಕ ಪೂರೈಸುವುದನ್ನು ಹಾಗೂ ಕೃಷಿ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಾಯನ ಮಾಡಿ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಲಹ ಸಮೀತಿಗಳನ್ನು ರಚಿಸಲಾಗುವುದೆಂದರು.

ಹೊನ್ನಾಳಿ, ತೊರವಿಯಲ್ಲಿ ಶೀಥಲಗೃಹ ನಿರ್ಮಾಣ

ಬೆಂಗಳೂರು,ಮಾ.6- ತೋಟಗಾರಿಕೆ ಉತ್ಪನ್ನಗಳ ಸಂರಕ್ಷಣೆಗಳಿಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಹಾಗೂ ವಿಜಯಪುರ ಜಿಲ್ಲೆಯ ತೊರವಿಯಲ್ಲಿ 64 ಕೋಟಿ ರೂ. ವೆಚ್ಚದಲ್ಲಿ 12 ಸಾವಿರ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಎರಡು ಶೀಥಲ ಗೃಹಗಳನ್ನು ನಿರ್ಮಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿಗಳು, ಪ್ರಯೋಗಿಕವಾಗಿ ದಾವಣಗೆರೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಶೀತಲ ಗೃಹಗಳನ್ನು ನಿರ್ಮಿಸಲಾಗುವುದು ನಂತರ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಹಂತಹಂತವಾಗಿ ನಿರ್ಮಿಸಲಾಗುವುದು ಎಂದರು.

ರೈತರ ಆದಾಯ ಮೂಲವಾಗಿರುವ ವಾಣಿಜ್ಯ ಮೂಲಗಳಲ್ಲಿ ಪ್ರಮುಖವಾಗಿರುವ ಅಡಿಕೆ ಮತ್ತು ತೆಂಗು ಬೆಳೆಗಳಿಗೆ ತಗುಲುವ ಎಲೆ ಚುಕ್ಕಿ, ಹಳದಿ ಎಲೆ, ಕೊಳೆ, ಕಪ್ಪು ತಲೆಹುಳು,
ಬಿಳಿ ನೋಣಗಳ ನಿಯಂತ್ರಣಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಸಮೂದಾಯ ಆಧಾರಿತ ರೋಗ ಕೀಟ ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದು ಎಂದರು.ರೋಗ ಕೀಟ ನಿಯಂತ್ರಣಕ್ಕಾಗಿ ಕೃಷಿ ವಿಶ್ವ ವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಕರಗ ಉತ್ಸವಕ್ಕೆ 2 ಕೋಟಿ ರೂ. ಅನುದಾನ

ಬೆಂಗಳೂರು,ಮಾ.6- ತಿಗಳ ಸಮಾಜವು ರಾಜ್ಯದಲ್ಲಿ 180 ಕರಗ ಉತ್ಸವಗಳನ್ನು ಆಚರಿಸುತ್ತಾ ಬಂದಿದ್ದು, ಈ ಉತ್ಸವಕ್ಕೆ ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಮಂದಿರವನ್ನು 3 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಕೋಲಾರದ ಆದಿಮ, ಮೈಸೂರಿನ ರಂಗನಿರಂತರ ಮತ್ತು ಬೆಂಗಳೂರಿನ ಸಮುದಾಯ ಸಂಸ್ಥೆಗಳಿಗೆ ಅನುದಾನ ನೀಡುವ ಮೂಲಕ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿವಿಧ ಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನ ಒದಗಿಸಲಾಗುವುದು. ಅಂಡಮಾನ್‌ ದ್ವೀಪದಲ್ಲಿ ಕರಾಳ ಶಿಕ್ಷೆಗೆ ಒಳಗಾದ 59 ಕನ್ನಡಿಗರ ವೀರಗಾಥೆಯ ಕುರತು ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರು ಎಂಬ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿಸಲಾಗುವುದು. ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗುವುದು. ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ. ಡಿ.ಆರ್‌.ನಾಗರಾಜಯ್ಯ ಹೆಸರಿನಲ್ಲಿ ಟ್ರಸ್ಟ್‌ ರಚಿಸಲು ಕ್ರಮ ಕೈಗೊಳ್ಳಲಾಗುವುದು. ದಲಿತ ಸಾಹಿತ್ಯ ಚಳುವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಅರ್ಧ ಶತಮಾನದ ದಲಿತ ಸಾಹಿತ್ಯ ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಲು ಒಂದು ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.

ಬಂಜಾರ ವಿಶ್ವಕೋಶವನ್ನು ಪ್ರಕಟಿಸಲಾಗುವುದು. ಕುವೆಂಪು ವಿವಿಯಲ್ಲಿ ಡಾ.ಯು.ಆರ್‌. ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಬೆಂಗಳೂರು ಹಬ್ಬ ಸಂಯೋಜಕರ ಸಹಯೋಗದೊಂದಿಗೆ ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ಬೆಂಗಳೂರು ಹಬ್ಬ ಸಂಯೋಜಕರ ಸಹಯೋಗದೊಂದಿಗೆ ಪ್ರತಿವರ್ಷ ರಂಗಭೂಮಿ, ಲಲಿತಕಲೆ, ಚಿತ್ರಕಲೆ ಇತ್ಯಾದಿ ಕಲಾಪ್ರಕಾರಗಳ ಕಾರ್ಯಕ್ರಮ ಆಯೋಜಿಸಲು 5 ಕೋಟಿ ರೂ. ಒದಗಿಸಲಾಗುವುದು ಎಂದರು.

ಸಂತ ಶಿಶುನಾಳ ಶರೀಫ ಹಾಗೂ ವೀರರಾಣಿ ಬೆಳವಾಳಿ ಮಲ್ಲಮ ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾನ ಸ್ಥಾಪಿಸಲಾಗುವುದು. ಎಲ್ಲಾ ಜಾನಪದ ಹಾಗೂ ಬುಡಕಟ್ಟು ಕಲಾವಿದರು, ವಿದ್ವಾಂಸರು ಮತ್ತು ಜಾನಪದ ವಾದ್ಯಗಾರರನ್ನೊಳಗೊಂಡ ಸಮಾವೇಶವನ್ನು ಜಾನಪದ ಸಂಗಮ ಶೀರ್ಷಿಕೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಆಯೋಜಿಸಲಾಗುವುದು. ರಾಷ್ಟ್ರಕವಿ ಜಿ.ಶಿವರುದ್ರಪ್ಪ ಅವರ ಜನ ಶತಮಾನೋತ್ಸವದ ಅಂಗವಾಗಿ ಅವರ ಗೀತಗಾಯನ, ವಿಚಾರ ಸಂಕಿರ್ಣ, ಕವಿಗೋಷ್ಠಿ, ಸಾಹಿತ್ಯ ವಾಚಿಕೆ ಹಾಗೂ ಜಿಎಸ್‌‍ಎಸ್‌‍ ಪ್ರಶಸ್ತಿ ನೀಡಲು 2 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.

ರೇಷೆ ಕೃಷಿ ಪ್ರೋತ್ಸಾಹಕ್ಕೆ ಸಿಲ್ಕ್ ಪಾರ್ಕ್‌ಗಳು

ಬೆಂಗಳೂರು,ಮಾ.6- ರೇಷೆಕೃಷಿಯನ್ನು ಮತ್ತಷ್ಟು ಉತ್ತೇಜಿಸುವ ದೃಷ್ಟಿಯಿಂದ ರೇಷೆನಗರಿ, ರಾಮನಗರ, ಶಿಡ್ಲಘಟ್ಟ, ಹಾವೇರಿ, ಮೈಸೂರಿನ ತಾಂಡವಪುರ ಹಾಗೂ ಕಲ್ಬುರ್ಗಿಯಲ್ಲಿ ಸಿಲ್‌್ಕ ಪಾರ್ಕ್‌ಗಳ ಸ್ಥಾಪನೆಗೆ ಕ್ರಮವಹಿಸಲಾಗುವುದೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ರೇಷೆಗೂಡನ್ನು ಸರ್ಕಾರದ ಯಾವುದೇ ರೇಷೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆಜಿ ಗೂಡಿಗೆ ಹಾಲಿ ಇರುವ 10 ರೂ. ಸಾಗಾಣಿಕೆ ವೆಚ್ಚವನ್ನು 20 ರೂ. ಗೆ ಹೆಚ್ಚಿಸಲಾಗುವುದು ಎಂದರು.ಕೃಷಿ ಇಲಾಖೆಯ ಆಯ್ದ ಕ್ಷೇತ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗಗಳೊಂದಿಗೆ ಚಾಕಿ ಸಾಕಾಣಿಕೆ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.

ಹವಾಮಾನ ಕೃಷಿ ಮಾಹಿತಿಗಾಗಿ ರೈತ ಕರೆ ಕೇಂದ್ರ

ಬೆಂಗಳೂರು,ಮಾ.6- ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖ ಮಾಹಿತಿಯನ್ನು ತ್ವರಿತವಾಗಿ ಒದಗಿಸುವ ದೃಷ್ಠಿಯಿಂದ ಎಐ ತಂತ್ರಜ್ಞಾನದಿಂದ ರೈತ ಕರೆ ಕೇಂದ್ರವನ್ನು ಉನ್ನತೀಕರಿಸಲಾಗುವುದೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯ ಮಟ್ಟದ ಕೃಷಿ ಉದ್ಯಮಿ ತರಬೇತಿ ಕೇಂದ್ರವನ್ನಾಗಿ ಉನ್ನತಿಕರಿಸಲಾಗುವುದು ಎಂದರು.ಕೃಷಿ ಚಟುವಟಿಕೆಗಳಲ್ಲಿ ಸಮಯ ಹಾಗೂ ಶ್ರಮ ತಗ್ಗಿಸಿ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ ಯಂತ್ರಗಳನ್ನು ಹೈಟೆಕ್‌ ಹಾರ್ವೆಸ್ಟರ್‌ ಹಬ್‌ ಯೋಜನೆಯಡಿ ಸೇರ್ಪಡೆಗೊಳಿಸಲಾಗುವುದು ಎಂದರು.

ಕೃಷಿ ಸಂಬಂಧಿತ ಕಸುಬುಗಳು ಮತ್ತು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈ ಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು ಎಂದರು.

ಬೆಳೆಗಳ ಕೀಟ-ರೋಗ ಬಾಧೆ ನಿಯಂತ್ರಣಕ್ಕೆ ಸಸ್ಯಸಂಜೀವಿನಿ ಯೋಜನೆ

ಬೆಂಗಳೂರು,ಮಾ.6- ಬೆಳೆಗಳ ಉತ್ತಮ ಇಳುವರಿ ದೃಷ್ಠಿಯಿಂದ ಮಣ್ಣು, ನೀರು, ಬಿತ್ತನೆ ಬೀಜ, ರಸಗೊಬ್ಬರಗಳ ಪರೀಕ್ಷೆಗಾಗಿ ವೈಜ್ಞಾನಿಕ ಪರೀಕ್ಷಾ ಸೇವೆಗಳನ್ನು ಒದಗಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿದ ಅವರು,ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ನಿಖರ ಫಲಿತಾಂಶಗಳನ್ನು ಒದಗಿಸಿ, ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ ಎನ್‌ಬಿಎಲ್‌ ಮಾನ್ಯತೆ ಪಡೆದು ವಿಶ್ವಾಸಾರ್ಹಹಾಗೂ ವೈಜ್ಞಾನಿಕ ಪರೀಕ್ಷಾ ಸೇವೆಗಳನ್ನು ಒದಗಿಸಲಾಗುವುದೆಂದರು.

ನೂತನ ದ್ವಿದಳ ಧಾನ್ಯ, ತಳಿಗಳ ಬಿತ್ತನೆ ಬೀಜಗಳ ಬಳಕೆಯನ್ನು ಪ್ರೇರೇಪಿಸಲು ನೀಡಲಾಗುತ್ತಿರುವ ಸಹಾಯಧನವನ್ನು ಹೆಚ್ಚಿಸಲಾಗುವುದು. ಪರಿಸರ ಸ್ನೇಹಿ ಮತ್ತು ಸುಸ್ತಿರ ಕೃಷಿ ಪದ್ದತಿಗಳನ್ನು ಉತ್ತೇಜಿಸಲು ವಸುಧಾಮೃತ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು ಎಂದರು.

ಬೆಳೆಗಳಿಗೆ ಪ್ರಾರಂಭದಲ್ಲೇ ತಗಲುವ ಕೀಟಾ ಬಾಧೆ, ರೋಗ ಬಾದೆಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಅಗತ್ಯವಿರುವ ಪರಿಸರ ಸ್ನೇಹಿ ಜೈವಿಕ ಪೀಡೆ ನಾಶಕ ಮತ್ತು ಜೈವಿಕ ಕೀಟ ನಾಶಕಗಳ ಜೋತೆ ಇತರೆ ಸುರಕ್ಷತಾ ಶಿಫಾರಸ್ಸುಗಳನ್ನು ಸಕಾಲದಲ್ಲಿ ಒದಗಿಸಲು ಸಸ್ಯ ಸಂಜೀವಿನಿ ಯೋಜನೆಯನ್ನು ಮುಂದಿನ ಮೂರು ವರ್ಷದಲ್ಲಿ ಅನುಷ್ಠಾನ ಗೊಳಿಸಲಾಗುವುದು ಎಂದರು.

ಎಸ್‌‍ಸಿ, ಎಸ್‌‍ಟಿ ಉಪಯೋಜನೆಗೆ 44,632 ಕೋಟಿ ರೂ. ಅನುದಾನ

ಬೆಂಗಳೂರು, ಮಾ.6-ಪರಿಶಿಷ್ಟ ಜಾತಿ ಉಪಯೋಜನೆಗೆ 31,314 ಕೋಟಿ, ಬುಡಕಟ್ಟು ಉಪ-ಯೋಜನೆಗೆ 12,828 ಕೋಟಿ ರೂ.ಗಳು ಸೇರಿದಂತೆ ಒಟ್ಟಾರೆ 44,632 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.ಸಮಾಜ ಕಲ್ಯಾಣ ಇಲಾಖೆಯಡಿ ಭೌದ್ಧ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗುವುದೆಂದು ಬಜೆಟ್‌ ಭಾಷಣದಲ್ಲಿ ಸಿಎಂ ಘೋಷಿಸಿದ್ದಾರೆ.

ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್‌ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳ ಇತರೆ ನಿರ್ವಹಣೆ ವೆಚ್ಚ ದರವನ್ನು ಪರಿಷ್ಕರಿಸಿ 56 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಒದಗಿಸಲಾಗುವುದು.

ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು 25 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿ ನಿಲಯಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತಿ ಜಿಲ್ಲೆಗೆ 150 ಸಂಖ್ಯಾಬಲದ ಒಂದು ಬಾಲಕಿಯರ ಮತ್ತು ಒಂದು ಬಾಲಕರ ಒಟ್ಟು 62 ಹೊಸ ಮೆಟ್ರಿಕ್‌ ನಂತರ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುವುದು.

1650 ಸಮುದಾಯ ಭವನ/ವಾಲಿಕಿ ಭವನ /ಶಾದಿಮಾಲ್‌ಗಳ ನಿರ್ಮಾಣಕ್ಕೆ 732 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಇನ್ನೂ ಅಲ್ಪಸಂಖ್ಯಾತರ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು 1.635 ಕೋಟಿ ರೂ.ಗಳನ್ನು ನೀಡಲಾಗಿದೆ. ಆರ್‌ಟಿಇ ಅಡಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿ ವ್ಯಾಸಂಗ ಮುಂದುವರಿಸಲು 19 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಪದವಿಪೂರ್ವ ಶಿಕ್ಷಣಕ್ಕೆ ಅನುವು ಮಾಡಿಕೊಡಲು 31 ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು, 40 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದೆಂದು ತಿಳಿಸಿದ್ದಾರೆ.

ಕ್ರೈಸ್‌‍ ವಸತಿ ಶಾಲೆಗಳಿಗೆ ಪೀಠೋಪಕರಣಗಳು, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌, ವಿಜ್ಞಾನ ಪ್ರಯೋಗಾಲಯ ಸೇರಿ ಮೂಲಭೂತ ಸೌಕರ್ಯಗಳಿಗೆ 30 ಕೋಟಿ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಎರಡು ಪರಿಶಿಷ್ಟ ಪಂಗಡದ ಒಂದು ಮತ್ತು ಹಿಂದುಳಿದ ವರ್ಗದ ಒಂದು ಸೇರಿದಂತೆ ಒಟ್ಟು ನಾಲ್ಕು ಕೈಸ್‌‍ ವಸತಿ ಶಾಲಗಳನ್ನು ಕೆ-ಸಿಇಟಿ/ಜೆಇಇ/ನೀಟ್‌ ಪರೀಕ್ಷೆಗಳಿಗೆ ತರಭೇತಿ ನೀಡಲು ಸೆಂಟರ್‌ ಆಫ್‌ ಎಕ್ಸಲೆನ್‌್ಸಗಳನ್ನಾಗಿ ಉನ್ನತೀಕರಿಸಲು ಮತ್ತು ಈ ಶಾಲೆಗಳಿಗೆ ಪ್ರತ್ಯೇಕವಾದ ಪ್ರವೇಶ ಪರೀಕ್ಷೆಗಳ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಇದಕ್ಕಾಗಿ 5 ಕೋಟಿ ಒದಗಿಸಲಾಗುವುದೆಂದು ತಿಳಿಸಿದ್ದಾರೆ.

ವಸತಿ ನಿಲಯ ಮತ್ತು ವಸತಿ ಶಾಲೆಗಳಿಗೆ ಗುಣಮಟ್ಟದ ಆಹಾರ ಪೂರೈಕೆಗಾಗಿ ಅಲ್ಲಿನ ವಿದ್ಯಾರ್ಥಿಗಳ ಮುಂದಾತ್ವದಲ್ಲಿ ಮೆಸ್‌‍ ಸಮಿತಿಯನ್ನು ರಚಿಸಿ ಕಾಲಕಾಲಕ್ಕೆ ಅನುದಾನವನ್ನು ಮುಂಗಡವಾಗಿ ನೀಡಿ ಪಾರದರ್ಶಕ ಮತ್ತು ಜವಾಬ್ದಾರಿಯುತ ವ್ಯವಸ್ಥೆ ಜಾರಿಗೊಳಿಸಲಾಗುವುದು.
ಸಮಾಜ ಕಲ್ಯಾಣ ಪರಿಶಿಷ್ಟ ಪಂಗಡಗಳ ಹಿಂದುಳಿತ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳ ನಿರ್ವಹಣೆಯಲ್ಲಿ ಸುಧಾರಣೆ ತರಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು.

ಎಸ್‌‍ಸಿ, ಎಸ್‌‍ಟಿ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಸಂಖ್ಯಾಬಲದ 10 ವಸತಿ ನಿಲಯಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಪ್ರಾರಂಭಿಸಲಾಗುವುದು. ಮೈಕ್ರೋ ಕ್ರೆಡಿಟ್‌ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆದ ಮಹಿಳಾ ಸ್ವ-ಸಹಾಯ ಸಂಘಗಳು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ್ದರೆ ಅವರಿಗೆ 2ನೇ ಭಾರಿಗೆ ಸಾಲ, ಸಹಾಯಧನ ನೀಡಲಾಗುವುದು.

ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗಿರುವ ಎಸ್‌‍ಟಿ, ಎಸ್‌‍ಸಿ, ಅಲೆಮಾರಿ, ಸೂಕ್ಷ್ಮ ಅತೀ ಸೂಕ್ಷ್ಮ ಸಮುದಾಯ ವಿದ್ಯಾರ್ಥಿಗಳ ಅಭಿವೃದ್ಧಿಗೆ ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ನಾಲ್ಕು ವಿಶೇಷ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ.ಗಳನ್ನು ನೀಡಲಾಗುವುದು.
ಡಾ. ಅಂಬೇಡ್ಕರ್‌ ಭೇಟಿ ನೀಡಿದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳ ನಿಗಧಿತ ಸ್ಥಳಗಳಲ್ಲಿ ಅವರ ಹೆಸರಿನಲ್ಲಿ ಸಿಬಿಎಸ್‌‍ಸಿ ಪಠ್ಯಕ್ರಮದ ನಾಲ್ಕು ಕ್ರೈಸ್‌‍ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಸಮುದಾಯದ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಆಯೋಗವನ್ನು ರಚಿಸುವುದಾಗಿ ತಿಳಿಸಿದ್ದಾರೆ.

ಇಲಾಖಾವಾರು ಅನುದಾನ (ಕೋಟಿ ರೂ.ಗಳಲ್ಲಿ)
*ಶಿಕ್ಷಣ ಇಲಾಖೆ -47,224
*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-34,929
*ಇಂಧನ ಇಲಾಖೆ -29,947
*ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ -26,559
*ಒಳಾಡಳಿತ ಮತ್ತು ಸಾರಿಗೆ ಇಲಾಖೆ-23,100
*ಜಲಸಂಪನೂಲ (ನೀರಾವರಿ) -22,436
*ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ-22,203
*ಕಂದಾಯ ಇಲಾಖೆ -19,843
*ಸಮಾಜ ಕಲ್ಯಾಣ ಇಲಾಖೆ -18,612
*ಆರೋಗ್ಯ ಕುಟುಂಬ ಕಲ್ಯಾಣ-17,817
*ಲೋಕೋಪಯೋಗಿ ಇಲಾಖೆ -11,424
*ಕೃಷಿ ಇಲಾಖೆ-8,373
*ಆಹಾರ ಮತ್ತು ನಾಗರಿಕ ಸರಬರಾಜು-7,942
*ಪಶುಸಂಗೋಪನೆ ಮತ್ತು ಮೀನುಗಾರಿಕೆ-4,084
*ಇತರ ಇಲಾಖೆಗಳು -1,72,757
ಯಾವೆಲ್ಲ ಮೂಲಗಳಿಂದ ತೆರಿಗೆ ಬಂದಿದೆ
*ರಾಜ್ಯ ತೆರಿಗೆ ಆದಾಯ: 49 ಶೇಕಡಾ
*ಬಂಡವಾಳ ಜಮೆ ಮತ್ತು ಸಾಲಗಳು: 29 ಶೇಕಾಡ
*ಕೇಂದ್ರ ಪಾಲು: 14 ಶೇಕಾಡ
*ಕೇಂದ್ರ ಸರ್ಕಾರದ ಸಹಾಯಾನುದಾನ: 4 ಶೇಕಡಾ
*ರಾಜ್ಯ ತೆರಿಗೆಯೇತರ ರಾಜಸ್ವ: 4 ಶೇಕಡಾ
ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳ ವಿವರ

*ವಾಣಿಜ್ಯ ತೆರಿಗೆಗಳು: ರೂ. 1,25,000 (57%).
*ರಾಜ್ಯ ರೂ. 45,000 (20%).
*ನೋಂದಣಿ ಮತ್ತು ಮುದ್ರಾಂಕ: ರೂ. 29,000 (13%).
*ಮೋಟಾರು ವಾಹನ ತೆರಿಗೆ: ರೂ. 15,500 (7%).
*ಇತರೆ: ರೂ. 5,500 (3%).

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 237 ಕೋಟಿ ರೂ.

ಬೆಂಗಳೂರು,ಮಾ.6- ಹೆಬ್ಬಾಳ-ನಾಗವಾರ ಕಣಿವೆಯ 3ನೇ ಹಂತದಲ್ಲಿ ಶಿಡ್ಲಘಟ್ಟದ ಅಮಾನಿಕೆರೆಯಿಂದ ಶಿಡ್ಲಘಟ್ಟ ತಾಲ್ಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲ್ಲೂಕಿನ 119 ಕೆರೆಗಳು ಸೇರಿದಂತೆ ಒಟ್ಟು 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 237 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ವಿಧಾನಸಭೆಯಲ್ಲಿಂದು 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಎಚ್‌.ಎನ್‌ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತನೀರಾವರಿ ಮೂಲಕ ತುಂಬಿಸುವ ಕಾರ್ಯವನ್ನು 140 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂಎಲ್‌ಡಿ ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ 119 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 650 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏತನೀರಾವರಿ, ಚೆಕ್‌ಡ್ಯಾಂ, ಪುನಶ್ಚೇತನ ಮುಂತಾದ 112 ಕಾಮಗಾರಿಗಳನ್ನು 1793 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದಿಸಿದೆ. ಕೆರೆ ಬಳಕೆದಾರರ ಸಂಘವನ್ನು ಬಲವರ್ಧನೆಗೊಳಿಸಲಾಗುವುದು ಎಂದು ಅವರು ಹೇಳಿದರು.

ಲಿಂಗಾಂಬುಧಿ ಸಸ್ಯ ತೋಟ ಅಭಿವೃದ್ಧಿ

ಬೆಂಗಳೂರು,ಮಾ.6-ಪ್ರವಾಸಿಗರು ಹಾಗೂ ಸಸ್ಯ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿ ಮಾತನಾಡಿದ ಅವರು, ನೀರಿನ ಸಂರಕ್ಷಣೆ ಮತ್ತು ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಹೈಡ್ರೋಪೊನಿಕ್ಸ್ ಹಾಗೂ ಕೋಕೋಪೀಟ್‌ ಆಧಾರಿತ ಮಣ್ಣಿಲ್ಲದ ಕೃಷಿ ಪ್ರೋತ್ಸಾಹಿಸಲಾಗುವುದು ಎಂದರು. ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

1 ಲಕ್ಷ ಮನೆ ನಿರ್ಮಾಣದ ಗುರಿ

ಬೆಂಗಳೂರು, ಮಾ.6-ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ವಿವಿಧ ವಸತಿ ಯೋಜನೆಯಡಿ ಜಿಎಲ್‌ಸಿ ಆಧಾರಿತ ಒಂದು ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು 1.20 ಲಕ್ಷದಿಂದ 2 ಲಕ್ಷ ರೂ.ಗಳವರೆಗೆ ಎಸ್‌‍ಸಿ, ಎಸ್‌‍ಟಿ ಫಲಾನುಭವಿಗಳಿಗೆ 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದೆಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪ್ರಸ್ತುತ ಫಲಾನುಭವಿಗಳನ್ನು ಲಾಟರಿ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಆನ್‌ಲೈನ್‌ ಲಾಟರಿ ಮೂಲಕ ಗ್ರಾಮ ಸಭೆಗಳಲ್ಲಿ ಆಯ್ಕೆಗೊಳಿಸಲಾಗುವುದೆಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ವಿವಿಧ ವಸತಿ ಯೋಜನೆಗಳಲ್ಲಿ 7,328 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟಾರೆ 4,19,454 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆಯೆಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಆವಾಸ್‌‍ ಯೋಜನೆಯಡಿ 1.29 ಲಕ್ಷ ಮನೆಗಳ ನಿರ್ಮಾಣ ಕಾರ್ಯಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅನುಷ್ಠಾನಗೊಳಿಸುತ್ತಿದೆ. ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮ ಎಂಬ ಹೆಸರಿನಲ್ಲಿ ಆನೇಕಲ್‌ ತಾಲ್ಲೂಕಿನಲ್ಲಿ 80 ಸಾವಿರ ಆಸನ ಸಾಮರ್ಥ್ಯವುಳ್ಳ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ, ಇದಲ್ಲದೇ ಕೆಎಚ್‌ಬಿಯಿಂದ ನಮ ಮನೆ ಯೋಜನೆಯಡಿ ಮುಂದಿನ 2 ವರ್ಷದಲ್ಲಿ 50 ಸಾವಿರ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಉದ್ದೇಶಿಸಲಾಗಿದೆಯೆಂದು ತಿಳಿಸಿದ್ದಾರೆ.

ಕವಿತೆಗಳ ಸಾಲು ವಾಚಿಸಿ ಗಮನ ಸೆಳೆದ ಸಿದ್ದು

ಬೆಂಗಳೂರು,ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 17ನೇ ದಾಖಲೆಯ ಬಜೆಟ್‌ನಲ್ಲೂ ವಚನಗಳು ಹಾಗೂ ಕವಿತೆಗಳ ಸಾಲುಗಳನ್ನು ಉಲ್ಲೇಖಿಸಿ ಎಲ್ಲರ ಗಮನಸೆಳೆದರು. ಭಾಷಣದ ಆರಂಭದಲ್ಲಿ ವಚನಕಾರ್ತಿ ಅಕ್ಕಮ ಅವರ ಧನಶೀಲ ಮನಶೀಲ ತನುಶೀಲ, ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ, ಇಂತೀ ವ್ರತಸಂಪದವೆಲ್ಲವೂ ಅದಾರ ಕುರಿತು ಮಾಡುವ ನೇಮ ಎಂಬುದು ತಾನರಿಯಬೇಕು ಎಂಬ ಸಾಲುಗಳನ್ನು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಜಲಸಂಪನೂಲ ಯೋಜನೆಗಳಿಗೆ ಸಂಬಂಧಿಸಿದಂತೆ ಬಜೆಟ್‌ ಭಾಷಣದಲ್ಲಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ನದಿಗಳು ನಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ ಉಸಿರು ಉಡುಗುತ್ತಾ ಬಂದಂತೆ ಬರಹದ ಉಲ್ಲೇಖ ಮಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಘೋಷಣೆಗಳನ್ನು ಓದುವಾಗ ಹಿರಿಯ ಪತ್ರಕರ್ತ ಬಿಎಂ ಬಶೀರ್‌ ಅವರ ಕವಿತೆಯ ಸಾಲುಗಳಾದ ಗುಲಾಬಿಯೆಂದರೆ ಅಮನಿಗೆ ಇಷ್ಟ, ಗೊತ್ತು ಅವಳಿಗೆ ಮುಳ್ಳಲ್ಲಿ ಅರಳುವ ಎಂಬ ಸಾಲನ್ನು ಉಲ್ಲೇಖ ಮಾಡಿದ್ದಾರೆ.ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ದಲಿತ ಬಂಡಾಯ ಕವಿ ಸಿದ್ದಲಿಂಗಯ್ಯ ಅವರ ಕುರಿಗಳ ಕಾಯುವ ಕುರುಬನ ಕೂಗು, ಜನರ ಮಾತು ಕವನ. ಸೋತ ರಟ್ಟೆಗಳ ಹೂತ ಕಾಲುಗಳ ಹಸಿರು ಕವನ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ಅದೇ ರೀತಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ, ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ, ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ ಎಂದು ಕವಿ ಬಿ.ಆರ್‌ ಲಕ್ಷ್ಮಣ ಅವರ ಕವಿತೆಯ ಸಾಲುಗಳನ್ನು ಉಲ್ಲೇಖ ಮಾಡಿದ್ದಾರೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಹಳೆತನದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ; ಬರಲಿ ವಿಜ್ಞಾನ ಬುದ್ಧಿ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖಿಸಿ ಗಮನ ಸೆಳೆದಿದ್ದಾರೆ.ಈ ಹಿಂದಿನ ಬಜೆಟ್‌ನಲ್ಲಿ ಸಿದದರಾಮಯ್ಯ ಕವಿಗಳ ಕವಿತೆಗಳ ಸಾಲುಗಳನ್ನು ಬಜೆಟ್‌ ಭಾಷಣದಲ್ಲಿ ಉಲ್ಲೇಖಿಸುವ ಮೂಲಕ ಗಮನ ಸೆಳೆದಿದ್ದರು. ಈ ಬಾರಿಯೂ ಬಜೆಟ್‌ನಲ್ಲಿ ಕವಿತೆಗಳ ಸಾಲುಗಳು ಗಮನ ಸೆಳೆದವು.

ಮೈಸೂರು ಲ್ಯಾಂಪ್ಸ್ ಜಾಗದಲ್ಲಿ ಸಮಾವೇಶ ಕೇಂದ್ರ ಸಂಕೀರ್ಣ

ಬೆಂಗಳೂರು, ಮಾ.6- ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೈಸೂರುಲ್ಯಾಂಪ್‌್ಸ ಕಾರ್ಖಾನೆಯ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ ಸಂಕೀರ್ಣವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯಶವಂತಪುರ ಮತ್ತು ಮಲ್ಲೇಶ್ವರಂನ ಗಡಿ ಭಾಗದಲ್ಲಿರುವ ಈ ಜಾಗಕ್ಕೆ ಸಾವಿರಾರು ಕೋಟಿ ರೂ.ಗಳ ಬೆಲೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದ ಮುರುಗೇಶ್‌ ನಿರಾಣಿ ಅವರು ಸದರಿ ಜಾಗದಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮಳಿಗೆ ಆರಂಭಿಸುವುದಾಗಿ ತಿಳಿಸಿದಾಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌‍ ಭಾರಿ ವಿರೋಧ ವ್ಯಕ್ತ ಪಡಿಸಿತ್ತು.

ವಿಧಾನ ಮಂಡಲದ ಅಧಿವೇಶನದಲ್ಲಿ ಈ ಕುರಿತು ಕಾವೇರಿದ ಚರ್ಚೆಗಳು ನಡೆದಿದ್ದವು. ಕೊನೆಗೆ ಬಿಜೆಪಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೇ ತಟಸ್ಥವಾಗಿ ಉಳಿದಿತ್ತು. ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದ 3 ವರ್ಷಗಳ ಬಳಿಕ ಮತ್ತೇ ಅದೇ ಜಾಗದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ನಿರ್ಮಿಸುವುದಾಗಿ ಪ್ರಕಟಿಸಿದೆ. ಉನ್ನತ ಮಟ್ಟದ ಜಾಗತಿಕ ಸಮೇಳನಗಳು, ಶೃಂಗಸಭೆಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ಮೈಸೂರ್‌ ಲ್ಯಾಂಪ್‌ ಜಾಗದಲ್ಲಿ ಸಮಾವೇಶ ಕೇಂದ್ರ ಸಂಕೀರ್ಣವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದಾರೆ.

ಬಜೆಟ್ ಪ್ರತಿಗಳನ್ನು ವಿಧಾನಸೌಧಕ್ಕೆ ತಂದ ಸಿಬ್ಬಂದಿಗಳು
ಇಂದು ಬಜೆಟ್ ಮಂಡನೆ ಹಿನ್ನಲೆಯಲ್ಲಿ ವಿಧಾಸೌಧದ ದ್ವಾರಗಳಿಗೆ ಹೂವಿನ ಅಲಂಕಾರ ಮಾಡಿರುವುದು
RELATED ARTICLES

Latest News