Wednesday, April 29, 2026
Homeರಾಜ್ಯಬಜೆಟ್ ಹೈಲೈಟ್ಸ್ : ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್‌ ಕೇಂದ್ರ ಸ್ಥಾಪನೆ

ಬಜೆಟ್ ಹೈಲೈಟ್ಸ್ : ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್‌ ಕೇಂದ್ರ ಸ್ಥಾಪನೆ

Budget Highlights: CT scanning center to be set up to detect animal diseases

ಬೆಂಗಳೂರು,ಮಾ.6-ಪಶುಗಳಿಗೆ ತಗುಲುವ ರೋಗಗಳನ್ನು ನಿಖರವಾಗಿ ಪತ್ತೆಹಚ್ಚಲು ರಾಜ್ಯದಲ್ಲೇ ಪ್ರಪ್ರಥಮ ಭಾರಿಗೆ ಬೆಂಗಳೂರು ಹಾಗೂ ಬೀದರ್‌ನ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರಗಳ ಸಿಟಿ ಸ್ಕ್ಯಾನಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಬೋಯರ್‌ ಮೇಕೆ ತಳಿ ಸಂವರ್ಧನಾ ಕೇಂದ್ರ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರಗಳ ಸಮಗ್ರ ಅಭಿವೃದ್ದಿಯನ್ನು ಕೈಗೊಳ್ಳಲಾಗುವುದು ಎಂದರು.

ಬೆಳಗಾವಿ, ಕಲ್ಬುರ್ಗಿ ವಿಭಾಗಗಳಲ್ಲಿ ಕುರಿ ಮತ್ತು ಮೇಕೆ ಸಾಗಣಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10 ಸಾವಿರ ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಅರ್ಹ 10 ಸಾವಿರ ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಹಸು ಹಾಗೂ ಎಮೆ ಖರೀದಿಸಲು ಪ್ರೋತ್ಸಾಹಧನ ನೀಡಲಾಗುವುದು . ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ 40 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದರು.


ಜಾನುವಾರುಗಳ ಸಂತಾನೋತ್ಪತಿ ಸಮಸ್ಯೆ ನಿವಾರಿಸಲು ವರ್ಷಕ್ಕೊಂದು ಕರು ಎಂಬ ಘೋಷವಾಕ್ಯದೊಂದಿಗೆ ರಾಜ್ಯದ ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಫಲಧಾರೆ ಶಿಬಿರವನ್ನು 5 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದರು.

ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರೋಪಾಯವಾಗಿ ಸಂತಾನಹರಣ ನಿಯಂತ್ರಣವನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ಪಶುವೈದ್ಯರು ಹಾಗೂ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡಲು ಬೆಂಗಳೂರು ಹಾಗೂ ಬೀದರ್‌ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

RELATED ARTICLES

Latest News