ಬೆಂಗಳೂರು,ಮಾ.6-ತೋಟಗಾರಿಕೆ ಉತ್ಪನ್ನಗಳ ಸಂರಕ್ಷಣೆಗಳಿಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಹಾಗೂ ವಿಜಯಪುರ ಜಿಲ್ಲೆಯ ತೊರವಿಯಲ್ಲಿ 64 ಕೋಟಿ ರೂ. ವೆಚ್ಚದಲ್ಲಿ 12 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲ ಗೃಹಗಳನ್ನು ನಿರ್ಮಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ಪ್ರಯೋಗಿಕವಾಗಿ ದಾವಣಗೆರೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಶೀತಲ ಗೃಹಗಳನ್ನು ನಿರ್ಮಿಸಲಾಗುವುದು ನಂತರ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಹಂತಹಂತವಾಗಿ ನಿರ್ಮಿಸಲಾಗುವುದು ಎಂದರು.
ರೈತರ ಆದಾಯ ಮೂಲವಾಗಿರುವ ವಾಣಿಜ್ಯ ಮೂಲಗಳಲ್ಲಿ ಪ್ರಮುಖವಾಗಿರುವ ಅಡಿಕೆ ಮತ್ತು ತೆಂಗು ಬೆಳೆಗಳಿಗೆ ತಗುಲುವ ಎಲೆ ಚುಕ್ಕಿ, ಹಳದಿ ಎಲೆ, ಕೊಳೆ, ಕಪ್ಪು ತಲೆಹುಳು, ಬಿಳಿ ನೋಣಗಳ ನಿಯಂತ್ರಣಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಸಮೂದಾಯ ಆಧಾರಿತ ರೋಗ ಕೀಟ ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದು ಎಂದರು.
ರೋಗ ಕೀಟ ನಿಯಂತ್ರಣಕ್ಕಾಗಿ ಕೃಷಿ ವಿಶ್ವ ವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
