ಬೆಂಗಳೂರು,ಆ.6-ಕೇಂದ್ರ ಸರ್ಕಾರವು ಅನಿರೀಕ್ಷಿತವಾಗಿ ಸರಕು ಸೇವಾ ತೆರಿಗೆ(ಜಿಎಸ್‌ಟಿ) ದರ ತರ್ಕಬದ್ಧಗೊಳಿಸಿದ ಪರಿಣಾಮ ರಾಜ್ಯದ ರಾಜಸ್ವ ಸಂಗ್ರಹಣೆಯು ಭಾರೀ ಕುಸಿತ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, 2025-26ನೇ ಸಾಲಿನಲ್ಲಿ ಜಿಎಸ್‌ಟಿ ತರ್ಕಬದ್ಧಗೊಳಸುವಿಕೆಗೂ ಮುನ್ನ ರಾಜ್ಯದ ಸರಾಸರಿ ಮಾಸಿಕ ಜಿಎಸ್‌ಟಿ ರಾಜಸ್ವ ಸಂಗ್ರಹಣೆಯು ಶೇ.10ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು.
ಆದರೆ ಏಕಾಏಕಿ ಜಿಎಸ್‌ಟಿ ತರ್ಕಬದ್ಧಗೊಳಿಸುವಿಕೆ ನಂತರ ಜಿಎಸ್‌ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯ ಶೇ.4ಕ್ಕೆ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದ ಜಿಎಸ್‌ಟಿ ಸಂಗ್ರಹಣೆಯು ಅಂದಾಜು 10 ಸಾವಿರ ಕೋಟಿ ಆಗಿದೆ. ಮುಂದಿನ ವರ್ಷದಲ್ಲಿ ಇದರ ಪ್ರಮಾಣ 15 ಸಾವಿರ ಕೋಟಿವರೆಗೂ ಏರಿಕೆಯಾಗಲಿದೆ ಎಂದು ಆತಂಕ ಹೊರ ಹಾಕಿದರು.
2025-26ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಅಂದಾಜುಗಳಿಗೆ ಹೋಲಿಸಿದರೆ, ಪರಿಷ್ಕೃತ ಅಂದಾಜುಗಳಲ್ಲಿ ಜಿ.ಎಸ್.ಟಿ ಸಂಗ್ರಹಣೆಯು ಶೇ.11ರಷ್ಟು ಇಳಿಕೆಯಾಗಿದೆ ಹಾಗೂ 2026-27ರ ಆಯವ್ಯಯ ಅಂದಾಜುಗಳಲ್ಲಿ ಇಳಿಕೆಯಾಗಿದೆ. ಇದನ್ನು 2024-25ರ ವಾಸ್ತವ ಸಂಗ್ರಹಣೆಗಿಂತಲೂ ಕಡಿಮೆಯಾಗಿದೆ. ದೇಶದ ಜಿ.ಎಸ್.ಟಿ ಸಂಗ್ರಹಣೆಯು ಪ್ರಸಕ್ತ ಸಾಲಿನಲ್ಲಿ 1.3 ಲಕ್ಷ ಕೋಟಿ ರೂ.ಗಳು ಮತ್ತು ಮುಂದಿನ ವರ್ಷದಲ್ಲಿ 2 ಲಕ್ಷ ಕೋಟಿ ರೂ. ಕೊರತೆಯಾಗಲಿದೆ. ಪರಿಣಾಮವಾಗಿ ರಾಜ್ಯಗಳಿಗೆ ನೀಡುವ ತೆರಿಗೆ ಹಂಚಿಕೆಯೂ ಕಡಿಮೆಯಾಗಲಿದೆ.
ರಾಜ್ಯಗಳು ರಾಜಸ್ವ ನಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಮಾದಕ ವಸ್ತುಗಳು ಮತ್ತು ಐಶಾರಾಮಿ ವಸ್ತುಗಳ ಮೇಲೆ ಸೆಸ್ ಮತ್ತು ಇತರೆ ತೆರಿಗೆಗಳನ್ನು ವಿಧಿಸುವ ಮೂಲಕ ಸರ್ಕಾರವು ರಾಜಸ್ವವನ್ನು ಸಂಗ್ರಹಿಸುತ್ತಿದ್ದು, ಈ ಆದಾಯದ ಸಂಪೂರ್ಣ ಮೊತ್ತವು ಕೇಂದ್ರ ಸರ್ಕಾರದ ಬೊಕ್ಕಸ ಸೇರಲಿದೆ ಎಂದರು.
ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯನ್ನು ರಾಜ್ಯ ಸರ್ಕಾರ ತಾತ್ವಿಕವಾಗಿ ಬೆಂಬಲಿಸುತ್ತದೆ. ಆದರೆ ಇದರಿಂದ ರಾಜ್ಯಗಳಿಗೆ ಉಂಟಾಗುವ ರಾಜಸ್ವ ಪರಿಹರಿಸುವುದರ ಜೊತೆಗೆ ರಾಜ್ಯಗಳ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ, ಕರ್ನಾಟಕವು ಇತರೆ ಏಳು ರಾಜ್ಯಗಳೊಂದಿಗೆ ಸೇರಿ ಜಿ.ಎಸ್.ಟಿ ಮಂಡಳಿಗೆ ಜಂಟಿ ಜ್ಞಾಪಕ ಪತ್ರವನ್ನು ಸಲ್ಲಿಸಿತ್ತು. ಈ ದರ ಪರಿಷ್ಕರಣೆಯು ರಾಜ್ಯಗಳ ರಾಜಸ್ವಕ್ಕೆ ವ್ಯತಿರಿಕ್ತ ಪರಿಣಾಮ ರಾಜ್ಯದ ರಾಜಸ್ವ ಸಂಗ್ರಹಣೆಯನ್ನು ರಕ್ಷಿಸುವ ರೀತಿಯಲ್ಲಿ ರೂಪಿತವಾಗಬೇಕು. ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಯಿಂದ ಉಂಟಾಗಿರುವ ರಾಜಸ್ವ ನಷ್ಟವನ್ನು ಸರಿದೂಗಿಸಲು ರಾಜ್ಯಗಳಿಗೆ ಅಗತ್ಯ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಮ ಒತ್ತಾಯವು ಮುಂದುವರೆಯಲಿದೆ ಎಂದರು.
ರಾಜ್ಯಗಳ ಸ್ವಂತ ರಾಜಸ್ವದ ಮೇಲಿನ ಈ ನಿರ್ಬಂಧಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ತೆರಿಗೆ ಹಂಚಿಕೆಯು ಇನ್ನಷ್ಟು ನಿರ್ಣಾಯಕವಾಗುತ್ತದೆ. 14ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಹಂಚಿಕೆಯ ಪಾಲನ್ನು ಶೇ.4.713ರಷ್ಟು ಶಿಫಾರಸ್ಸು ಮಾಡಿತ್ತು.
ಆದರೆ, ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯದ ತೆರಿಗೆ ಪಾಲು ಶೇ.3.647ಕ್ಕೆ ಇಳಿಕೆಯಾಗಿದ್ದು, ಇದು ಹಿಂದಿನ ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ ಶೇ.23 ರಷ್ಟು ಕಡಿಮೆಯಾಗಿದೆ. 15ನೇ ಹಣಕಾಸು ಆಯೋಗದ ಆರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 65,000 ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಇದಲ್ಲದೆ 15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ 5,495 ಕೋಟಿ ರೂ.ಗಳ ವಿಶೇಷ ಅನುದಾನ ಮತ್ತು 6,000 ಕೋಟಿ ರೂ.ಗಳ ರಾಜ್ಯ ಕೇಂದ್ರಿತ ಅನುದಾನಗಳನ್ನು ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಹಂಚಿಕೆ ಮಾಡಲು ಸಮಾನತೆ ಮತ್ತು ಬೆಳವಣಿಗೆ ಎರಡಕ್ಕೂ ಪ್ರಾಮುಖ್ಯತೆ ನೀಡುವ ಸೂತ್ರವನ್ನು ಶಿಫಾರಸ್ಸು ಮಾಡಬೇಕು ಎಂದು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿತ್ತು.
16ನೇ ಹಣಕಾಸು 2026- 31ರ ಅವಧಿಗೆ ತನ್ನ ವರದಿಯನ್ನು ಸಲ್ಲಿಸಿದ್ದು ಕರ್ನಾಟಕಕ್ಕೆ ಶೇ.4.131ರಷ್ಟು ತೆರಿಗೆ ಪಾಲನ್ನು ಶಿಫಾರಸ್ಸು ಮಾಡಿದೆ. ಇದು 15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಪಾಲಿಗಿಂತ ಶೇ.13ರಷ್ಟು ಹೆಚ್ಚಳವಾಗಿರುತ್ತದೆ. 14ನೇ ಆಯೋಗವು ಶಿಫಾರಸ್ಸು ಮಾಡಿದ ಶೇ.4.713ರಷ್ಟು ತೆರಿಗೆ ಪಾಲನ್ನು ರಾಜ್ಯವು ನಿರೀಕ್ಷಿಸಿದ್ದರೂ, 16ನೇ ಹಣಕಾಸು ಆಯೋಗದ ಶಿಫಾರಸ್ಸು ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆದ ಅನ್ಯಾಯವನ್ನು ಭಾಗಶಃ ಪರಿಹರಿಸಿದೆ.
ತೆರಿಗೆ ಹಂಚಿಕೆ ಸೂತ್ರವನ್ನು ಸಂದರ್ಭದಲ್ಲಿ 16ನೇ ಹಣಕಾಸು ಆಯೋಗವು, ರಾಜ್ಯಗಳ ಆರ್ಥಿಕ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಗುರುತಿಸುವ ಉದ್ದೇಶದಿಂದ, ದೇಶದ ಜಿ.ಡಿ.ಪಿಗೆ ರಾಜ್ಯದ ಕೊಡುಗೆಯನ್ನು ಮಾನದಂಡವಾಗಿ ಪರಿಗಣಿಸಿರುವುದು ಆರ್ಥಿಕ ಆಯೋಗದ ತತ್ವಗಳಲ್ಲಿ ಒಂದು ಮಹತ್ವದ ಬೆಳೆವಣೆಗೆಯಾಗಿದ್ದು, ಇದನ್ನು ಸ್ವಾಗತಿಸುತ್ತದೆ ಎಂದರು.
ರಾಜಸ್ವ ಸಂಗ್ರಹಣೆಗಿರುವ ಈ ನಿರ್ಬಂಧಗಳ ನಡುವೆಯೂ, ರಾಜ್ಯವು ಆರ್ಥಿಕ ಬೆಳವಣಿಗೆ, ಜನ ಕಲ್ಯಾಣ ಮತ್ತು ವಿತ್ತೀಯ ಶಿಸ್ತನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು ವೆಚ್ಚ ನಿರ್ವಹಣೆಗೆ ಆದ್ಯತೆ ನೀಡಿದೆ. ರಾಜ್ಯವು ಸಮಾಜದ ನೀಡಿದ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ, ಫೆಬ್ರವರಿ 2026ರವರೆಗೆ ಒಟ್ಟು 1,21,598 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ನಮ ಸರ್ಕಾರವು ವಿತ್ತೀಯ ಶಿಸ್ತನ್ನು ಪಾಲಿಸುವುದರೊಂದಿಗೆ ಜನ ಸಾಮಾನ್ಯರಿಗೆ ನೀಡಿರುವ ಈಡೇರಿಸಿರುತ್ತದೆ ಎಂದು ಹೇಳಿದರು.
