ಬೆಂಗಳೂರು, ಮಾ.6- ಸಿದ್ದರಾಮಯ್ಯ 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ತಮದೇ ದಾಖಲೆ ಮುರಿದಿದ್ದಾರೆ. ಈ ಮೂಲಕ ಕರ್ನಾಟಕ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ನಾಯಕನಾಗಿದ್ದಾರೆ. ಜತೆಗೆ ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಗುಜರಾತ್‌ನ ಬಿಜೆಪಿಯ ಹಿರಿಯ ನಾಯಕ ವಜುಭಾಯಿ ಆರ್ ವಾಲಾ ಅವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದರು. ಇವರು 1998 ಮತ್ತು 2012ರ ನಡುವೆ ಒಟ್ಟು 18 ಬಜೆಟ್ ಮಂಡಿಸಿದ್ದರು. ವಾಲಾ ಅವರು 2014 ರಿಂದ 2021 ರವರೆಗೆ ಕರ್ನಾಟಕದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವಿಭಜಿತ ಆಂಧ್ರಪ್ರದೇಶದಲ್ಲಿ ಕೆ.ರೋಸಯ್ಯ ಅವರು 16 ಬಜೆಟ್‌ಗಳನ್ನು ಮಂಡಿಸುವ ಮೂಲಕ 3ನೇ ಸ್ಥಾನದಲ್ಲಿ ಇದ್ದಾರೆ. ಇವರು ತಮ ಸುದೀರ್ಘ ರಾಜಕೀಯ ಪಯಣದಲ್ಲಿ ಆಂಧ್ರಪ್ರದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು 3 ಅವಧಿಗೆ ಮುಖ್ಯ ಮಂತ್ರಿಯಾಗಿ ಒಟ್ಟು 15 ಬಜೆಟ್‌ಗಳನ್ನು ಮಂಡಿಸಿದ್ದರು.
ತಮಿಳುನಾಡಿನ ವಿ.ಆರ್. ನೆಡುಂಚೆಳಿಯನ್ ಅವರು 14 ಬಜೆಟ್ ಮಂಡಿಸಿದ್ದರು. ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ನೇತೃತ್ವದ ಸಚಿವ ಸಂಪುಟಗಳಲ್ಲಿ 12 ವರ್ಷಗಳ ಕಾಲ ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ.ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ಅವರು ಒಟ್ಟು 13 ಬಜೆಟ್‌ಗಳನ್ನು ಮಂಡಿಸಿದ್ದರು.
ಕೇರಳದ ಅನುಭವಿ ಹಾಗೂ ಪ್ರಮುಖ ರಾಜಕಾರಣಿ ಎಂದು ಗುರುತಿಸುವ ಕೆ.ಎಂ.ಮಣಿ ಅವರು ಒಟ್ಟು 13 ಬಜೆಟ್‌ಗಳನ್ನು ಮಂಡಿಸಿದ್ದರು. ಹಲವು ವರ್ಷಗಳ ಕಾಲ ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
2026-27ರ ಬಜೆಟ್‌ಗೂ ಮುನ್ನ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ 7 ಬಾರಿ ಬಜೆಟ್ ಮಂಡಿಸಿದ್ದರು. 3ಬಾರಿ ಮುಖ್ಯ ಮಂತ್ರಿಯಾಗಿ ಬಜೆಟ್ ಮಂಡಿಸಿದ್ದಾರೆ. 1995 ಮತ್ತು 1996ರಲ್ಲಿ ಎಚ್‌ಡಿ ದೇವೇಗೌಡರ ಅವರ ನೇತೃತ್ವದಲ್ಲಿ, 2 ಬಾರಿ, 1997, 1998 ಮತ್ತು 1999 ನಡುವೆ ಜೆ.ಎಚ್ ಪಟೇಲ್ ಅವರ ನೇತೃತ್ವದಲ್ಲಿ 3 ಬಾರಿ ಹಾಗೂ 2005-2006ರಲ್ಲಿ ಎನ್.ಧರಂ ಸಿಂಗ್ ಅವರ ನೇತೃತ್ವದಲ್ಲಿ 2 ಬಾರಿ ಬಜೆಟ್ ಮಂಡನೆ ಮಾಡಿದ್ದರು.
