ಬೆಂಗಳೂರು,ಮಾ.6- ಬಂದರುಗಳು ಮತ್ತು ಸರಕು ಸಾಗಾಣಿಕೆ ವಲಯದ ಅಭಿವೃದ್ಧಿಗಾಗಿ ಸಮಗ್ರ ಮಲ್ಟಿ ಮೋಡಲ್ ಲಾಜೆಸ್ಟಿಕ್ಸ್ ನೀತಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಪಂಜರ ಮೀನು ಸಾಕಾಣಿಕೆ, ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಸಂಬಂಧಿಸಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಕರ್ನಾಟಕ ಸ್ಟೇಟ್ ಆಫ್ ಶೋರ್ ರಿಸೋಸರ್ಸ್ ಡೆವಲಪ್‌ಮೆಂಟ್ ಹಾಗೂ ಯುಟಿಲೈಸೇಷನ್ ಪಾಲಿಸಿಯನ್ನು ರೂಪಿಸಲಾಗುವುದು ಎಂದರು.
ಬೆಂಗಳೂರು ಉಪನಗರ ರೈಲು ಯೋಜನೆಯ 4 ಕಾರಿಡಾರ್ ಗಳ ಪೈಕಿ ಕಾರಿಡಾರ್ 2 ಕ್ಕೆ ಭೂಮಿಯನ್ನು ಸ್ವಾದೀನಪಡಿಸಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಾರಿಡಾರ್ 4ಕ್ಕೆ ಅಗತ್ಯವಿರುವ ಭೂಮಿಯ ಭೂಸ್ವಾದೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಡಿ.30ಕ್ಕೆ ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರ ಹಾಗೂ ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್‌ಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು, ಈ ಕಾಮಗಾರಿಗಳಿಗೆ 500 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಬಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪತಿಕರಣ ಯೋಜನೆಗಳಡಿಯಲ್ಲಿ 70 ಕಿ.ಮೀ. ರೈಲು ಮಾರ್ಗಗಳ ಯೋಜನೆಗೆ ರಾಜ್ಯಸರ್ಕಾರದ ಪಾಲು 406 ಕೋಟಿ ಸೇರಿದಂತೆ 812 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 14 ಕಿ.ಮೀ. ದ್ವಿಗುಣಗೊಳಿಸುವ ಕಾಮಗಾರಿ ಲೋಕಾರ್ಪಣೆಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಈ ಕಾಮಗಾರಿಗಳಿಗೆ 100 ಕೋಟಿ ರೂ. ಒದಗಿಸಲಾಗಿದೆ ಎಂದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ದಟ್ಟಣೆಯನ್ನು ತಗ್ಗಿಸಲು ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ನಿರ್ಮಿಸಲು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ತಾಂತ್ರಿಕ ಅಭಿಪ್ರಾಯ ಪಡೆದು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿನ 7 ದೇಶೀಯ ವಿಮಾನನಿಲ್ದಾಣಗಳ ಅಭಿವೃದ್ಧಿಗಾಗಿ ಈವರೆಗೆ 1,593 ಕೋಟಿ ರೂ. ಅನುದಾನವನ್ನು ರಾಜ್ಯಸರ್ಕಾರದಿಂದ ಬಿಡುಗಡೆ ಮಾಡಿದ್ದು, ಪ್ರಸಕ್ತ ಸಾಲಿಗೆ 200 ಕೋಟಿ ರೂ. ಅನುದಾನ ನಿಗಿಪಡಿಸಲಾಗಿದೆ ಎಂದರು.
ವಿಜಯಪುರ ಹಾಗೂ ಶಿವಮೊಗ್ಗ ವಿಮಾನನಿಲ್ದಾಣಗಳ ಆವರಣದಲ್ಲಿ ಕ್ರಮವಾಗಿ ಫ್ಲೈಟ್ ತರಬೇತಿ ಶಾಲೆ ಹಾಗೂ ಮನುಫ್ಯಾಕ್ಚರಿಂಗ್ /ಅಸೆಂಬ್ಲಿ ಆಫ್ ಏರ್‌ಕ್ರಾಫ್‌್ಟ ಚಟುವಟಿಕೆಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉ.ಕನ್ನಡ ಜಿಲ್ಲೆಯ ತದಡಿ ಪ್ರದೇಶದಲ್ಲಿ ಪರಿಸರ ಸ್ನೇಹಿ ವಸತಿ ವ್ಯವಸ್ಥೆ, ಪ್ರವಾಸಿ ಮಾಹಿತಿ ಕೇಂದ್ರಗಳು, ಪರಿಸರ ಸ್ನೇಹಿ ವಾಕಿಂಗ್ ಕಾರಿಡಾರ್ ಮತ್ತು ಇತರ ಮೂಲಸೌಕರ್ಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು.
ರೈಲ್ವೆ ಇಲಾಖೆಯೊಂದಿಗೆ 50:50 ಅನುಪಾತದಲ್ಲಿ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲ್ವೆ ಮಾರ್ಗಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆಯವ್ಯಯದಲ್ಲಿ ಇದಕ್ಕಾಗಿ 600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
