ನವದೆಹಲಿ,ಮಾ.8- ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 52 ಸಾವಿರ ಭಾರತೀಯರು ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಮಾ.1 ರಿಂದ 7 ರ ಅವಧಿಯಲ್ಲಿ ವಿವಿಧ ವಿಮಾನಗಳಲ್ಲಿ ಭಾರತೀಯರು ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ಹಿಂದಿರುಗಲಿದ್ದಾರೆಂದು ಅದು ಹೇಳಿದೆ.
ಇರಾನ್ ಮೇಲೆ ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿದ ಬಳಿಕ ಪಶ್ಚಿಮ ಏಷ್ಯಾ ದೇಶಗಳಲ್ಲಿ ನೆಲೆಸಿರುವ 1 ಕೋಟಿ ಭಾರತೀಯರ ಸುರಕ್ಷತೆ ಬಗ್ಗೆ ಹಾಗೂ ವ್ಯಾಪಾರ ಸರಕುಗಳು ಮತ್ತು ಇಂಧನ ಪೂರೈಕೆ ವ್ಯವಸ್ಥಿತವಾಗಿ ಮುಂದುವರೆಸಲು ಭಾರತ ಒತ್ತು ನೀಡಿದೆ ಎಂದು ಸಚಿವಾಲಯ ಹೇಳಿದೆ.
ಕಳೆದ ಕೆಲ ದಿನಗಳಿಂದ ಮಧ್ಯಪ್ರಾಚ್ಯ ಭಾಗದಲ್ಲಿ ವಾಯು ಮಾರ್ಗಗಳನ್ನು ಭಾಗಶಃ ತೆರೆದಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ವಿದೇಶಿ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಆರಂಭಿಸಿವೆ. ಮಧ್ಯಂತರ ಹಾಗೂ ಅಲ್ಪಾವಧಿ ವೀಸಾ ಹೊಂದಿದ ಭಾರತೀಯ ಪ್ರಯಾಣಿಕರು ವಾಪಸ್ ಆಗಲು ಇದರಿಂದ ಸಾಧ್ಯವಾಗಿದೆ ಎಂದು ಸಚಿವಾಲಯ ವಿವರಿಸಿದೆ.
