Wednesday, April 29, 2026
Homeರಾಜಕೀಯದಾವಣಗೆರೆ ದಕ್ಷಿಣ ಟಿಕೆಟ್‌ ಕಲಹ : ಜಮೀರ್‌-ಮಲ್ಲಿಕಾರ್ಜುನ್‌ ನಡುವೆ ವಾಕ್ಸಮರ

ದಾವಣಗೆರೆ ದಕ್ಷಿಣ ಟಿಕೆಟ್‌ ಕಲಹ : ಜಮೀರ್‌-ಮಲ್ಲಿಕಾರ್ಜುನ್‌ ನಡುವೆ ವಾಕ್ಸಮರ

Davangere South Ticket Dispute: War of Words Between Jamir-Mallikarjun

ಬೆಂಗಳೂರು, ಮಾ.9- ಕಾಂಗ್ರೆಸ್‌‍ನಲ್ಲಿ ಅಧಿಕಾರ ಹಂಚಿಕೆಯ ಕಿತ್ತಾಟ ಒಂದು ಕಡೆಯಾದರೆ, ಸಚಿವರು, ಶಾಸಕರು ಸೇರಿದಂತೆ ಪರಸ್ಪರ ನಾಯಕರುಗಳ ನಡುವೆಯೇ ತಾಳೆ ಇಲ್ಲದೇ ಅರಾಜಕತೆಯ ವಾತಾವರಣ ನಿರ್ಮಾಣವಾಗಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧ ಪಟ್ಟಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌‍.ಎಸ್‌‍ ಮಲ್ಲಿಕಾರ್ಜುನ್‌, ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಹಿರಿಯ ಕಾಂಗ್ರೆಸ್‌‍ ನಾಯಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲು ತಮ ಕುಟುಂಬಕ್ಕೆ ಟಿಕೆಟ್‌ ನೀಡಬೇಕೆಂದು ಎಸ್‌‍.ಎಸ್‌‍. ಮಲ್ಲಿಕಾರ್ಜುನ್‌ ಪಟ್ಟು ಹಿಡಿದಿದ್ದಾರೆ.
ಆದರೆ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸೆಟೆದು ನಿಂತಿರುವ ಕಾಂಗ್ರೆಸ್‌‍ನ ಒಂದು ಬಣ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕೆಂದು ಪ್ರತಿಪಾದಿಸುತ್ತಿದೆ. ಇತ್ತ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂದು ಲಾಬಿ ನಡೆಸುತ್ತಿದ್ದಾರೆ.

ಜಮೀರ್‌ ಅವರ ದಾವಣಗೆರೆಯ ಪ್ರವಾಸಗಳು ಹೆಚ್ಚಾಗಿವೆ. ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಜಮೀರ್‌ ಅಹಮದ್‌ಖಾನ್‌ ಅವರು, ದಾವಣಗೆರೆಗೆ ಪದೇಪದೇ ಭೇಟಿ ನೀಡುತ್ತಿರುವುದು ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಡ ಹಾಕುತ್ತಿರುವುದು ಶಾಮನೂರು ಕುಟುಂಬವನ್ನು ಕೆರಳಿಸಿದೆ.

ತಮ ತಂದೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಸಹೋದರರು ಅಥವಾ ಸಂಬಂಧಿಕರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಬೇಕು ಎಂಬ ಇರಾದೆ ಎಸ್‌‍.ಎಸ್‌‍. ಮಲ್ಲಿಕಾರ್ಜುನ್‌ ಅವರದ್ದಾಗಿದೆ. ಆದರೆ ಇದಕ್ಕೆ ಅಡ್ಡಿಪಡಿಸಿರುವ ಜಮೀರ್‌ ಅಹಮದ್‌ಖಾನ್‌ಗೆ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಬಹಿರಂಗವಾಗಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕುರಿತು ಈಗಾಗಲೇ ನಿರ್ಧಾರವಾಗಿದೆ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಎಲ್ಲಿಂದಲೋ ಬಂದ ಜಮೀರ್‌ ಅಹಮದ್‌ ಖಾನ್‌ಗೆ ದಾವಣಗೆರೆ ಕ್ಷೇತ್ರದ ಬಗ್ಗೆ ಮಾತನಾಡಲು ಅಧಿಕಾರ ಕೊಟ್ಟವರು ಯಾರು? ಎಂಬ ಖಾರವಾದ ಪ್ರಶ್ನೆಯನ್ನು ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಮುಂದಿಟ್ಟಿದ್ದಾರೆ.

ಶಾಮನೂರು ಶಿವಶಂಕರಪ್ಪ ಕುಟಂಬ ತಮ ಅಧಿಪತ್ಯಕ್ಕಾಗಿ ಬಿಜೆಪಿಯ ಜೊತೆ ಕೂಡ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಶಾಮನೂರು ಕುಟುಂಬದ ಬದಲಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂಬುದು ಕಾಂಗ್ರೆಸ್‌‍ನಲ್ಲಿರುವ ಕೆಲ ನಾಯಕರ ಲೆಕ್ಕಾಚಾರ. ಆದರೆ ಶಾಮನೂರು ಶಿವಶಂಕರಪ್ಪ ಅವರನ್ನು ಹೊರತು ಪಡಿಸಿ, ದಾವಣಗೆರೆಯಲ್ಲಿ ಚುನಾವಣಾ ರಾಜಕೀಯ ಮಾಡುವುದು ಸುಲಭಸಾಧ್ಯವಲ್ಲ ಎಂಬ ವ್ಯಾಖ್ಯಾನಗಳಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ವಿಚಾರವಾಗಿ ಎಸ್‌‍.ಸ್‌‍.ಮಲ್ಲಿಕಾರ್ಜುನ್‌ ಮತ್ತು ಜಮೀರ್‌ ಅಹಮದ್‌ಖಾನ್‌ ನಡುವೆ ಮಾತಿನ ಸಂಘ಼ರ್ಷ ಆರಂಭವಾಗಿದೆ. ಇದಕ್ಕೂ ಮೊದಲು ಹುಬ್ಬಳ್ಳಿ-ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಜಕ್ಕಪ್ಪನವರ ನಡುವೆ ಕೆಡಿಪಿ ಸಭೆಯಲ್ಲಿ ಮಾತಿನ ಚಕಮಕಿ ನಡೆದಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಶಾಸಕ ಸತೀಶ್‌ ಸೈಲ್‌ ಅವರ ನಡುವೆ ಬಹಿರಂಗ ಚಕಮಕಿಯಾಗಿತ್ತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿಗೆ ಭೇಟಿ ನೀಡಿದಾಗ ಚಿಕ್ಕೋಡಿ-ಹುಕ್ಕೇರಿ ಪ್ರತ್ಯೇಕ ಜಿಲ್ಲೆಗಳಾಗಬೇಕೆಂದು ಹೇಳಿಕೆ ನೀಡಿದರು. ಅದರ ವಿರುದ್ಧವಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಒಳಗೊಂಡು, ಜಾರಕಿಹೊಳಿ ಕುಟುಂಬದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೆ ಕೋಲಾರ, ತುಮಕೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಚಿವರು ಮತ್ತು ಶಾಸಕರ ನಡುವೆ ಸಂಘರ್ಷಮಯ ಘಟನೆಗಳಾಗಿರುವ ಉದಾಹರಣೆಗಳಿವೆ.

ಒಂದೆಡೆ ಕಾಂಗ್ರೆಸ್‌‍ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮುಸುಕಿನ ಗುದ್ದಾಟವಾಗುತ್ತಿದ್ದರೆ, ಮತ್ತೊಂದೆಡೆ ಸಚಿವರು, ಶಾಸಕರುಗಳ ನಡುವೆ ಕೂಡ ಚಕಮಕಿಗಳಾಗುತ್ತಿವೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಚಕಮಕಿಗಳು ಪಕ್ಷದ ಸಂಘಟನೆಯ ಮೇಲೆ ಭಾರಿ ಪರಿಣಾಮ ಬೀರಲಿವೆ ಎಂಬ ಆತಂಕ ಕಾರ್ಯಕರ್ತರದ್ದಾಗಿದೆ.

RELATED ARTICLES

Latest News