ಬೆಂಗಳೂರು, ಆ.7- ನಗರದ ವಿವಿಧೆಡೆ ಪತ್ತೆಯಾಗುವ ಅನಾಥ ವಾಹನಗಳನ್ನು ಡಂಪಿಂಗ್ ಯಾರ್ಡ್‌ಗೆ ಸ್ಥಳಾಂತರಿಸಿ, ನಿಗದಿತ ಅವಧಿಯಲ್ಲಿ ಹರಾಜು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಆರ್‌ಟಿಒ, ಸಂಚಾರ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಅವರು, ಡಂಪಿಂಗ್ ಯಾರ್ಡ್‌ನಲ್ಲಿರುವ ವಾಹನಗಳ ಮೌಲ್ಯಮಾಪನ ವರದಿಯನ್ನು ತ್ವರಿತವಾಗಿ ನೀಡುವಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು.
ಜಯನಗರ, ಜೆ.ಪಿ.ನಗರ, ಕೆ.ಎಸ್. ಲೇಔಟ್, ತಿಲಕ್‌ನಗರ ಸೇರಿದಂತೆ ವಿವಿಧೆಡೆ ಈವರೆಗೆ 328 ಅನಾಥ ವಾಹನಗಳಿಗೆ ನೋಟಿಸ್ ಅಂಟಿಸಲಾಗಿದೆ. ಈ ಪೈಕಿ 40 ವಾಹನಗಳನ್ನು ಡಂಪಿಂಗ್ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಹೊಸದಾಗಿ ಗುರುತಿಸಲಾದ 18ರಿಂದ 20 ವಾಹನಗಳಿಗೆ ಸ್ಟಿಕ್ಕರ್ ಹಾಗೂ ನೋಟಿಸ್ ಅಂಟಿಸಲಾಗುತ್ತಿದ್ದು, ಏಳು ದಿನಗಳ ಕಾಲಾವಕಾಶದ ಬಳಿಕ ಅವುಗಳನ್ನೂ ಯಾರ್ಡ್‌ಗೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಲಾಗಿದೆ.
ಡಂಪಿಂಗ್ ಯಾರ್ಡ್‌ನಲ್ಲಿರುವ ವಾಹನಗಳನ್ನು ಹರಾಜು ಮಾಡಲು ಆರ್‌ಟಿಒ ಅಧಿಕಾರಿಗಳ ಮೌಲ್ಯಮಾಪನ ವರದಿ ಅಗತ್ಯವಿದ್ದು, ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ ಒಂದರಿಂದ ಎರಡು ದಿನಗಳೊಳಗೆ ಮೌಲ್ಯಮಾಪನ ವರದಿ ಸಲ್ಲಿಸಬೇಕು ಎಂದು ಡಾ. ನವೀನ್ ಕುಮಾರ್ ರಾಜು ಗಡುವು ವಿಧಿಸಿದ್ದಾರೆ. ಅನಾಥ ವಾಹನಗಳ ತೆರವು ಹಾಗೂ ವಿಲೇ ವಾರಿ ಕಾರ್ಯದಲ್ಲಿ ಸಂಚಾರ ಪೊಲೀಸ್, ಆರ್‌ಟಿಒ ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ಸಮನ್ವಯ ಹೆಚ್ಚಿಸಲು ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸುವಂತೆಯೂ ಸೂಚಿಸಲಾಗಿದೆ. ಪ್ರತಿದಿನ ಎಷ್ಟು ವಾಹನ ಗುರುತಿಸಲಾಗಿದೆ, ಎಷ್ಟು ನೋಟೀಸ್ ನೀಡಲಾಗಿದೆ ಹಾಗೂ ಎಷ್ಟು ವಾಹನಗಳ ಮೌಲ್ಯಮಾಪನ ಪೂರ್ಣಗೊಂಡಿದೆ ಎಂಬುದರ ಕುರಿತು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದಾರೆ.
