ಮೈಸೂರು, ಆ. 7- ಆಷಾಢ ಮಾಸದ ಕಡೆಯ ಶುಕ್ರವಾರವಾದ ಇಂದು ಚಾಮುಂಡಿ ಬೆಟ್ಟದಲ್ಲಿ ಭಕ್ತರ ದಂಡೇ ಹರಿದು ಬಂದಿತು. ಮುಂಜಾವಿನಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಇಂದು ದೇವಿಯನ್ನು ಮಹಾಲಕ್ಷಿ ಅಲಂಕಾರದಲ್ಲಿ ಅಲಂಕರಿಸಲಾಗಿತ್ತು. ತಿಳಿ ನೀಲಿ ಬಣ್ಣದ ರೇಷೆ ಸೀರೆ, ಚಿನ್ನಾಭರಣಗಳು ಹಾಗೂ ವಿವಿಧ ಬಗೆಯ ತಾಜಾ ಪುಷ್ಪಗಳಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿತ್ತು.
ಉತ್ಸವಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಳೆದ 4 ಶುಕ್ರವಾರಗಳಿಂದಲೂ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ನಡೆಯುತ್ತಿದ್ದವು.
ಕಡೆಯ ಶುಕ್ರವಾರವಾದ್ದರಿಂದ ಭಕ್ತರ ಸಂಖ್ಯೆ ಹೆಚ್ಚಿತ್ತು. ಬೆಳಗ್ಗೆ 4 ಗಂಟೆಯಿಂದಲೇ ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ದೇವಸ್ಥಾನ ಆವರಣ, ಮೆಟ್ಟಿಲುಗಳು ಮತ್ತು ರಸ್ತೆಗಳ ಉದ್ದಕ್ಕೂ ಭಕ್ತರ ಕ್ಯೂ ಕಂಡುಬಂತು. ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಎಲ್ಲರೂ ಭಕ್ತಿಯಿಂದ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಪೊಲೀಸ್ ಮತ್ತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಹಾಗೂ ಅನೌನ್್ಸಮೆಂಟ್ ವ್ಯವಸ್ಥೆ ಮಾಡಲಾಗಿತ್ತು. ಆಷಾಢದ ಪ್ರತಿ ಶುಕ್ರವಾರವೂ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದು ಮೈಸೂರಿನ ಸಂಪ್ರದಾಯ. ಈ ಬಾರಿಯೂ ನಾಲ್ಕೂ ಶುಕ್ರವಾರಗಳು ಅದ್ದೂರಿಯಾಗಿ ಆಚರಿಸಲ್ಪಟ್ಟವು.
ಕಡೆಯ ದಿನದಂದು ಮಹಾಲಕ್ಷಿ ಸ್ವರೂಪದಲ್ಲಿ ಕಂಗೊಳಿಸಿದ ದೇವಿಯನ್ನು ನೋಡಿ ಭಕ್ತರು ಪುಳಕಿತರಾದರು. ಒಟ್ಟಾರೆ ಆಷಾಢ ಶುಕ್ರವಾರಗಳು ಮೈಸೂರಿನಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಸಂಪನ್ನಗೊಂಡವು. ಮುಂದಿನ ದಿನಗಳಲ್ಲಿ ನವರಾತ್ರಿ ಹಬ್ಬಕ್ಕೆ ಚಾಮುಂಡಿ ಬೆಟ್ಟ ಮತ್ತಷ್ಟು ಸಿಂಗಾರಗೊಳ್ಳಲಿದೆ.
