Thursday, April 30, 2026
Homeರಾಜ್ಯಹಿರಿಯ ಪತ್ರಕರ್ತ ಕೆ.ಜೆ. ಕುಮಾರ್‌ ನಿಧನ

ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್‌ ನಿಧನ

Senior journalist K.J Kumar passes away

ಮೈಸೂರು,ಮಾ.12- ಮೈಸೂರಿನ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್‌(74) ಅವರು ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1952ರ ನವೆಂಬರ್‌ 6ರಂದು ಉಡುಪಿ ಜಿಲ್ಲೆ ಕೊರಂಗ್ರಾಡಿ ರಘುರಾಮ್‌ ಶೆಟ್ಟಿ ಮತ್ತು ಶಾರದಾ ದಂಪತಿಯ ಜ್ಯೇಷ್ಠ ಪುತ್ರರಾಗಿ ಜನಿಸಿದ ಇವರು ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

1969ರಲ್ಲಿ ಸೋದರಮಾವ ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಸ್ವಾತಂತ್ರ ಹೋರಾಟಗಾರ ಎ. ರಾಮಣ್ಣ ಸಂಪಾದಕತ್ವದ ವಿಜಯ ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿದ್ದರು.

ನಂತರ ವಿಜಯ ದಿನ ಪತ್ರಿಕೆ ಪ್ರಕಾಶಕ ಮುದ್ರಕರಾಗಿದ್ದರು. ನಂತರ ಸಿನಿಮಾ ಪತ್ರಕರ್ತರಾಗಿ ಸುಧಾ ವಾರಪತ್ರಿಕೆ, ವಿಜಯ ಚಿತ್ರ ಸಿನಿಮಾ ಮಾಸಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ನಂತರ, 1978ರಿಂದ ರೂಪಾತಾರ ಸಿನಿಮಾ ಮಾಸ ಪತ್ರಿಕೆಗೆ ಮೂರೂ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

1993ರಲ್ಲಿ ಉದಯವಾಣಿ ದಿನ ಪತ್ರಿಕೆ ಬೆಂಗಳೂರು ಆವೃತ್ತಿ ಆರಂಭವಾದಾಗ ಮೈಸೂರಿನ ಪ್ರತಿನಿಧಿಯಾಗಿ ಸುಮಾರು ಒಂದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಕಳೆದ ಒಂದೂವರೆ ದಶಕಗಳಿಂದ ಹೊಸ ದಿಗಂತ ದಿನ ಪತ್ರಿಕೆ ಸಿನಿಮಾ ವಿಭಾಗ ನೋಡಿಕೊಳ್ಳುತ್ತಿದ್ದರು. ಪತ್ರಿಕಾ ಕ್ಷೇತ್ರವಲ್ಲದೆ ಹೋಟೆಲ್‌ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದ ಅವರು ಮೈಸೂರಿನ ಸರಸ್ವತಿ ಪುರಂನಲ್ಲಿ ಕುಠೀರ ಮನೆ ಎಂಬ ಹೋಟೆಲ್‌ ಸ್ಥಾಪಿಸಿದ್ದರು.

ಕನ್ನಡ ಚಿತ್ರೋದ್ಯಮದಲ್ಲಿ ಪತ್ರಕರ್ತರಾಗಿ ಹೆಸರಾಗಿದ್ದ ಕೆ.ಜೆ. ಕುಮಾರ್‌, ಕನ್ನಡ ಚಿತ್ರ ರಂಗದ ದಿಗ್ಗಜರಾದ ಡಾ.ರಾಜ್‌ ಕುಮಾರ್‌, ಡಾ.ವಿಷ್ಣುವರ್ಧನ್‌, ಅಂಬರೀಷ್‌, ರಜನಿ ಕಾಂತ್‌, ಶಶಿಕುಮಾರ್‌, ನಿರ್ಮಾಪಕರಾದ ದ್ವಾರಕೀಶ್‌, ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ, ಎಸ್‌‍.ವಿ. ರಾಜೇಂದ್ರ ಸಿಂಗ್‌ ಬಾಬು ಅವರೊಂದಿಗೆ ಆತೀಯ ಒಡನಾಟ ಇಟ್ಟುಕೊಂಡಿದ್ದರು.

ಮೃತರು ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸೋದರಿ ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಪ್ರಕಾಶ್‌ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

RELATED ARTICLES

Latest News