Saturday, May 2, 2026
Homeರಾಜ್ಯಆಟೋ, ಟ್ಯಾಕ್ಸಿ ದರ ದುಪ್ಪಟ್ಟು : ಸಾರ್ವಜನಿಕರ ಆಕ್ರೋಶ

ಆಟೋ, ಟ್ಯಾಕ್ಸಿ ದರ ದುಪ್ಪಟ್ಟು : ಸಾರ್ವಜನಿಕರ ಆಕ್ರೋಶ

Public outrage as auto and taxi fares double

ಬೆಂಗಳೂರು, ಮಾ.12- ಮಧ್ಯಪ್ರಾಚ್ಯದ ದೇಶಗಳಲ್ಲಿ ಆರಂಭವಾಗಿರುವ ಯುದ್ಧದ ಪರಿಣಾಮ ದೇಶದ ಹಲವು ಕ್ಷೇತ್ರಗಳ ಮೇಲೆ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಕೆಲ ಅಟೋ ಹಾಗೂ ಟ್ಯಾಕ್ಸಿ ಚಾಲಕರು ಸಾರ್ವಜನಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.

ಅಟೋ ಗ್ಯಾಸ್‌‍ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ
ಕೆಲ ಚಾಲಕರು ಮೀಟರ್‌ಗಿಂತ ಹೆಚ್ಚಿನ ಹಣವನ್ನು ಗ್ರಾಹಕರ ಬಳಿ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಹಲವು ಪ್ರದೇಶಗಳಲ್ಲಿ ಗ್ಯಾಸ್‌‍ ಬಂಕ್‌ಗಳು ಮುಚ್ಚಿರುವುದರಿಂದ ಹಾಗೂ ಸರಿಯಾದ ಪ್ರಮಾಣದಲ್ಲಿ ಗ್ಯಾಸ್‌‍ ಪೂರೈಕೆ ಆಗದ ಕಾರಣ ಈ ಪರಿಸ್ಥಿತಿಯನ್ನು ಕೆಲ ಚಾಲಕರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಗ್ಯಾಸ್‌‍ ಕೊರತೆಯನ್ನೇ ನೆಪ ಮಾಡಿಕೊಂಡು ಕೆಲವು ಅಟೋ ಹಾಗೂ ಟ್ಯಾಕ್ಸಿ ಚಾಲಕರು ನೇರವಾಗಿ ಹೆಚ್ಚುವರಿ ದರ ಕೇಳುತ್ತಿದ್ದು, ಇದರಿಂದ ದಿನನಿತ್ಯ ಪ್ರಯಾಣ ಮಾಡುವ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೀಟರ್‌ ಪ್ರಕಾರ ಹೋಗಲು ಚಾಲಕರು ನಿರಾಕರಿಸುವ ಘಟನೆಗಳು ಕೂಡ ನಗರದಲ್ಲಿ ಹೆಚ್ಚುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.

ಇದರ ಜೊತೆಗೆ ಮುಂದಿನ ವಾರ ಸಾಲು ಸಾಲು ರಜೆಗಳು ಹಾಗೂ ಯುಗಾದಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌‍ ಮಾಲೀಕರು ಕೂಡ ದರ ಏರಿಕೆ ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಬ್ಬದ ಸಂದರ್ಭದಲ್ಲಿ ಊರಿಗೆ ತೆರಳಲು ಯೋಚಿಸುತ್ತಿರುವ ಪ್ರಯಾಣಿಕರಿಂದ ಖಾಸಗಿ ಬಸ್‌‍ ಮಾಲೀಕರು ಎರಡು ರಿಂದ ಮೂರು ಪಟ್ಟು ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಪ್ರತಿ ಬಾರಿ ಹಬ್ಬಗಳ ಸೀಸನ್‌ ಬಂದಾಗ ಖಾಸಗಿ ಬಸ್‌‍ ಮಾಲೀಕರು ಇದೇ ರೀತಿಯಲ್ಲಿ ದರ ಹೆಚ್ಚಿಸುವುದು ಸಾಮಾನ್ಯವಾಗಿದ್ದು, ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಪ್ರವೃತ್ತಿ ಮುಂದುವರಿದಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುವ ಅಟೋ, ಟ್ಯಾಕ್ಸಿ ಹಾಗೂ ಖಾಸಗಿ ಬಸ್‌‍ ಮಾಲೀಕರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಹಬ್ಬದ ಸಂದರ್ಭದಲ್ಲಿ ಜನರಿಗೆ ತೊಂದರೆ ಆಗದಂತೆ ಸಾರಿಗೆ ಇಲಾಖೆ ಹಾಗೂ ನಗರ ಪೊಲೀಸ್‌‍ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED ARTICLES

Latest News