ಬೆಂಗಳೂರು,ಮಾ.12- ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ಸಂಸದರನ್ನು ಭೇಟಿಯಾಗಿ ಮಾಹಿತಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಪರಿಷತ್‌ಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತಿಪ್ಪಣ್ಣಪ್ಪ ಕನಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕಾನೂನು ಸಚಿವ ಎಚ್.ಕೆ.ಪಾಟೀಲ್‌ರ ಜೊತೆಗೂಡಿ ನವದೆಹಲಿಯಲ್ಲಿ ಸಂಸದರನ್ನು ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಇರುವ ಸಮಸ್ಯೆಗಳು, ಕೇಂದ್ರಸರ್ಕಾರದಿಂದ ದೊರೆಯಬೇಕಾದ ಮಂಜೂರಾತಿ ಮೊದಲಾದ ಮಾಹಿತಿ ನೀಡಿ ಅವರ ಸಹಕಾರ ಕೋರಲಾಗುವುದು ಎಂದರು.
ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಲು ಅನುಕೂಲವಾಗುವಂತೆ ಪ್ರತ್ಯೇಕ ವಕೀಲರ ತಂಡವನ್ನು ರಚಿಸಲಾಗುತ್ತದೆ ಎಂದು ತಿಳಿಸಿದರು.
ಜಲಸಂಪನೂಲ ಇಲಾಖೆಯ ಕೃಷ್ಣ ಜಲಭಾಗ್ಯ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳು ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲನವಿಗಳನ್ನು ದಾಖಲಿಸಿವೆ. ಒಟ್ಟು 530 ಪ್ರಕರಣಗಳ ವಿಚಾರಣೆ ನಡೆಸಿ ಫೆ.9 ರಂದು ಅಂತಿಮ ಆದೇಶ ನೀಡಲಾಗಿದೆ. ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಎಲ್ಲಾ ಪ್ರಕರಣಗಳ ಡಿಲೇ ಕಂಡೊನೇಷನ್‌ನೊಂದಿಗೆ ಮೆರಿಟ್ ಆಧಾರದಲ್ಲಿ ವಾದ ಮಂಡಿಸಿ ಆದೇಶ ಪಡೆಯಲು ಅವಕಾಶ ಇರುತ್ತದೆ.
ಹೀಗಾಗಿ ಪ್ರಮುಖ ನೀರಾವರಿ ಯೋಜನೆಗಳ ಭೂಸ್ವಾಧೀನ ಪ್ರಕರಣಗಳಲ್ಲಿ ಜಿಲ್ಲಾ ನ್ಯಾಯಾಲಯಗಳು ಹೆಚ್ಚುವರಿ ಪರಿಹಾರ ನೀಡಿ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ತಡೆಯಬಹುದಾಗಿದೆ. ಅಲ್ಲದೆ ಯೋಜನೆಗಳ ತೀವ್ರ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರತ್ಯೇಕ ಶೌಚಾಲಯ :
ಜಿಬಿಎ ವ್ಯಾಪ್ತಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವ ಚಿಂತನೆಯಿದೆ ಎಂದು ಶಾಸಕರಾದ ಡಾ ಆರತಿ ಕೃಷ್ಣ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಉತ್ತರಿಸಿದರು. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಸ್ವಯಂಸೇವಾ ಸಂಸ್ಥೆಯು ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆಯನ್ನು ಸರಿಪಡಿಸುವ ಸಂಬಂಧ ವರದಿ ಸಲ್ಲಿಸಿಲ್ಲ, ದೂರುಗಳು ದಾಖಲಾಗಿಲ್ಲ, ಸಾರ್ವಜನಿಕ ಶೌಚಾಲಯಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ, ಆ ಪ್ರಸ್ತಾವನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳೆಯರ ಸುರಕ್ಷತೆಗಾಗಿ ಜಿಬಿಎ ಪ್ರತ್ಯೇಕವಾಗಿ 100 ಶಿ ಟಾಯ್ಲೆಟ್ ಅನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ. ಇವುಗಳಲ್ಲಿ ಹಾಲುಣಿಸುವ ಕೊಠಡಿ, ಬಟ್ಟೆ ಬದಲಿಸುವ ಕೊಠಡಿ, ನೈರ್ಮಲ್ಯ ಕೊಠಡಿ, ಆಟೊಮೆಟಿಕ್ ಸೆನ್ಸರ್ ಮೆಷಿನ್, ಹ್ಯಾಂಡ್ ವಾಷ್ ಮತ್ತು ಕನ್ನಡಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
