ಬೆಂಗಳೂರು,ಮಾ.12- ಡಿವೈಎಸ್ಪಿ (ಸಿವಿಲ್) ವೃಂದದ ಜೇಷ್ಠತಾ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಹತೆ ಮೇರೆಗೆ ಪೊಲೀಸ್ ಅಧೀಕ್ಷಕರ (ನಾನ್ ಐಪಿಎಸ್ ) ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಚಿವ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಪುಟ್ಟಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜೇಷ್ಠತಾ ಪಟ್ಟಿ ಪರಿಷ್ಕರಿಸುವ ವಿಷಯದಲ್ಲಿ ಪರಿಣತಿ ಹೊಂದಿರುವ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಕೆ.ಚಿನ್ನಮಾರಯ್ಯ ಅವರನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಅವರ ಸಲಹೆಯಂತೆ ಜೇಷ್ಠತಾ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ ಎಂದರು.
2015 ರಲ್ಲಿ ತಾವು ಗೃಹಸಚಿವರಾಗಿದ್ದಾಗ ಹತ್ತು ವರ್ಷಗಳಿಂದ ಡಿವೈಎಸ್ಪಿಗಳಿಗೆ ಬಡ್ತಿ ಕೊಟ್ಟಿರಲಿಲ್ಲ. ಆಗ 27 ಡಿವೈಎಸ್ಪಿಗಳಿಗೆ ಐಪಿಎಸ್‌ಗೆ ಬಡ್ತಿ ಸಿಕ್ಕಿತ್ತು. ನೇರ ನೇಮಕಾತಿಯವರಿಗೆ ಹೆಚ್ಚು ಅವಕಾಶ ಸಿಗಲಿ ಎಂಬ ಉದ್ದೀಶದಿಂದ ಮುಂಬಡ್ತಿ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.
ನೇರ ನೇಮಕಾತಿಯಲ್ಲಿ ಕನ್ನಡಿಗರಿಗೆ ಹೆಚ್ಚು ಅವಕಾಶ ಸಿಗುತ್ತದೆ. ಹೀಗಾಗಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಹೊರ ರಾಜ್ಯ ಬಡ್ತಿ ನೀಡುತ್ತಿರುವ ಮಾದರಿಯನ್ನು ಅಧ್ಯಯನ ಮಾಡಿ ಅದು ಒಳ್ಳೆಯದಾಗಿದ್ದರೆ ರಾಜ್ಯದಲ್ಲೂ ಪರಿಗಣಿಸಲಾಗುವುದು ಎಂದು ಹೇಳಿದರು.
ಡಿವೈಎಸ್ಪಿಗಳಿಗೆ ಮುಂಬಡ್ತಿ ನೀಡುವ ಪ್ರಮಾಣ ಕಡಿಮೆ ಮಾಡಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಪುಟ್ಟಣ್ಣ ಆರೋಪಿಸಿದರು.
ಕಾನ್‌ಸ್ಟೇಬಲ್ ನೇಮಕ :
ಕಳೆದ ಮೂರು ವರ್ಷಗಳಲ್ಲಿ 4,967 ಕಾನ್‌ಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಕಿಶೋರ್ ಕುಮಾರ್ ಪುತ್ತೂರ್ ಅವರ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದರು.
ಕಳೆದ ಮೂರು ವರ್ಷಗಳಲ್ಲಿ 1,189 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅವರ ಕೋರಿಕೆಯಂತೆ ಅಂತರ್‌ಜಿಲ್ಲಾ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
