Friday, November 22, 2024
Homeಕ್ರೀಡಾ ಸುದ್ದಿ | Sportsಪ್ರಧಾನಿ ಮೋದಿ ಮಾತಿನಿಂದ ನಾವು ವಿಶ್ವಕಪ್ ಸೋಲಿನ ಗುಂಗಿನಿಂದ ಹೊರಬಂದೆವು : ಶಮಿ

ಪ್ರಧಾನಿ ಮೋದಿ ಮಾತಿನಿಂದ ನಾವು ವಿಶ್ವಕಪ್ ಸೋಲಿನ ಗುಂಗಿನಿಂದ ಹೊರಬಂದೆವು : ಶಮಿ

ಬೆಂಗಳೂರು, ಡಿ.14- ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ನಂತರ ನಮಗೆ ಊಟ ಮಾಡಲು ಕೂಡ ಮನಸಾಗದೆ ಡ್ರೆಸಿಂಗ್ ರೂಮ್‍ನಲ್ಲಿ ಬೇಸರದಿಂದ ಕುಳಿತುಕೊಂಡಿದ್ದೆವು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಆತ್ಮಸ್ಥೈರ್ಯ ಮಾತುಗಳಿಂದ ನಾವು ಸಹಜ ಸ್ಥಿತಿಗೆ ಮರಳಿದೆವು ಎಂದು ಅನುಭವಿ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.

ನವೆಂಬರ್ 19 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023ರ ಏಕದಿನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 6 ವಿಕೆಟ್‍ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ನಂತರ ಭಾರತ ತಂಡದ ಆಟಗಾರರು ಇದ್ದ ಕೊಠಡಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ಆಟಗಾರರಲ್ಲಿ ಧೈರ್ಯ ತುಂಬಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಇದಕ್ಕೆ ಸಾಕಷ್ಟು ಪರ- ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈಗ ಈ ಕುರಿತು ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ನಮಗೆ ಆಶ್ಚರ್ಯವಾಗಿತ್ತು:ಮೊಹಮ್ಮದ್ ಶಮಿ
`ವಿಶ್ವಕಪ್ ಫೈನಲ್ ಪಂದ್ಯದ ಸೋಲಿನಿಂದ ನಾವೆಲ್ಲ ಡ್ರೆಸ್ಸಿಂಗ್‍ರೂಮ್‍ನಲ್ಲಿ ನಿರುತ್ಸಾಹದಿಂದ ಕುಳಿತುಕೊಂಡಿದ್ದೆವು. ನಮ್ಮ ಎರಡು ತಿಂಗಳ ಕಠಿಣ ಪರಿಶ್ರಮವು ಕೇವಲ ಒಂದೇ ಒಂದು ಪಂದ್ಯದಿಂದ ಹಾಳಾಯಿತು ಎಂದು ಕೊರಗುತ್ತಿದ್ದೆವು . ಆಗ ಕೊಠಡಿಗೆ ಅಚಾನಕ್ಕಾಗಿ ಪ್ರಧಾನಿ ಮೋದಿ ಅವರು ಬಂದಾಗ ನಾವೆಲ್ಲ ಒಮ್ಮೆ ತಲೆ ಮೇಲಕ್ಕೆತ್ತಿ ನೋಡಿದ್ದೆವು. ಪ್ರಧಾನಿ ಅವರು ನಮ್ಮ ಡ್ರೆಸ್ಸಿಂಗ್ ರೂಮ್‍ಗೆ ಬರುವ ಸೂಚನೆಯೇ ನಮಗೆ ಇರಲಿಲ್ಲ. ಆದರೆ ಅವರು ಯಾವುದೇ ಸುಳಿವು ನೀಡದೆ ನಮ್ಮ ಕೊಠಡಿಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ನಾವು ಊಟ ಮಾಡುವ ಮನಸ್ಥಿತಿಯಲ್ಲಿ ಇರಲಿಲ್ಲ, ಅಲ್ಲದೆ ಪರಸ್ಪರ ಮಾತುಕತೆ ನಡೆಸಲು ಇಷ್ಟಪಟ್ಟಿರಲಿಲ್ಲ. ಪ್ರಧಾನಿ ಅವರ ಭೇಟಿಯೂ ನಮಗೆ ಆಶ್ಚರ್ಯ ಮೂಡಿಸಿತ್ತು’ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ಮೇ ತಿಂಗಳಿನಲ್ಲಿ ಮೈಸೂರಿಗೆ ಬಂದಿದ್ದ ಸಾಗರ್ ಶರ್ಮಾ

ಆತ್ಮಸ್ಥೈರ್ಯ ಹೆಚ್ಚಾಯಿತು:
`ನರೇಂದ್ರ ಮೋದಿ ಅವರು ನಮ್ಮ ಕೊಠಡಿಗೆ ಬಂದಿದ್ದು ನನಗೆ ಆಶ್ಚರ್ಯ ಮೂಡಿಸಿತ್ತು. ನಂತರ ಅವರು ಆಟಗಾರರೊಂದಿಗೆ ಸ್ವಲ್ಪ ಕಾಲ ಬೆರೆತು ಮಾತುಕತೆ ನಡೆಸಿದ್ದಲ್ಲದೆ ನಮಗೆ ಸಾಂತ್ವನ ಹೇಳಿದ್ದರು. ಆ ನಂತರವೇ ನಾವು (ಆಟಗಾರರು) ಪರಸ್ಪರ ಮಾತುಕತೆ ನಡೆಸಲು ಇಷ್ಟಪಟ್ಟಿದ್ದೆವು. ಈ ಸೋಲಿನಿಂದ ಹೊರಬಂದು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರಲು ಬಯಸಿದೆವು. ಪ್ರಧಾನಿಯವರ ಭೇಟಿಯಿಂದ ನಮ್ಮ ಆತ್ಮಸ್ಥೈರ್ಯ ಹೆಚ್ಚಲು ನೆರವಾಗಿತ್ತು’ ಎಂದು ಅನುಭವಿ ವೇಗಿ ಹೇಳಿದ್ದಾರೆ.

ಟೀಮ್ ಇಂಡಿಯಾಗೆ ಶುಭ ಕೋರಿದ್ದ ಮೋದಿ:
`ನನ್ನ ಮೆಚ್ಚಿನ ಟೀಮ್ ಇಂಡಿಯಾ, ವಿಶ್ವಕಪ್ ಟೂರ್ನಿಯಲ್ಲಿ ನೀವು ನೀಡಿರುವ ಪ್ರದರ್ಶನ ಹಾಗೂ ನಿರ್ಣಯಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ನೀವು ಸಾಕಷ್ಟು ಉತ್ಸಾಹದಿಂದ ಕ್ರಿಕೆಟ್ ಆಡಿದ್ದು, ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ. ನಾನು ಸದಾ ನಿಮ್ಮ ನೆರವಿಗೆ ನಿಲ್ಲುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆ ಮೂಲಕ ಟೀಮ್ ಇಂಡಿಯಾ ಆಟಗಾರರಿಗೆ ಶುಭ ಕೋರಿದ್ದರು. ಶಮಿ ಅವರು ಈಗ ಸದ್ಯ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡಲು ಹೊರಟಿದ್ದಾರೆ.

RELATED ARTICLES

Latest News