Saturday, October 12, 2024
Homeರಾಜ್ಯವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು, ಡಿ.14- ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಡಿ.18ರೊಳಗೆ ಕೈಗೊಂಡಿರುವ ಕ್ರಮದ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ಬೆಳಗಾವಿ ಪೊಲೀಸ್ ಆಯುಕ್ತರು, ಹಾಗೂ ಎಸಿಪಿ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ಖಡಕ್ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಇವರು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಎರಡು ಗಂಟೆ ಕಾಲ ಮಹಿಳೆಯನ್ನು ಹಿಂಸಿಸಲಾಗಿದೆ. ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಸಂತ್ರಸ್ತೆ ಎದುರಿಸಿರಬಹುದಾದ ನೋವನ್ನು ಊಹಿಸಲೂ ಸಾಧ್ಯವಿಲ್ಲ. ಬಡವರ ಮೇಲೆಯೇ ಇಂತಹ ದೌರ್ಜನ್ಯಗಳು ನಡೆಯುವುದೇಕೆ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಮೇ ತಿಂಗಳಿನಲ್ಲಿ ಮೈಸೂರಿಗೆ ಬಂದಿದ್ದ ಸಾಗರ್ ಶರ್ಮಾ

ಸಂತ್ರಸ್ತೆಗೆ ಅತ್ಯುತ್ತಮ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್ ಒದಗಿಸುವ ಅಗತ್ಯವಿದೆ. ಯಾವ ಆಸ್ಪತ್ರೆಯಲ್ಲಿ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ, ಪೊಲೀಸರು ಕೈಗೊಂಡ ಕ್ರಮವೇನು, ಈ ಕುರಿತು ವರದಿ ನೀಡಲು ಸೂಚನೆ ನೀಡಿತು.ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿದೆ, ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ ಎಂಬ ಮಂತ್ರವಿದ್ದರೂ ಪ್ರಯೋಜನವೇನು ಬಂತು, ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣನಿದ್ದ. ಇದು ದುಶ್ಯಾಸನರ ಕಾಲ.

ಸಂತ್ರಸ್ತೆಯ ಸಹಾಯಕ್ಕೆ ಯಾರೂ ಬರಲಿಲ್ಲ. ನಮ್ಮಲ್ಲಿ ಕಾನೂನು ಭಯವಿಲ್ಲವೆಂಬ ಸಂದೇಶ ಹೋಗುತ್ತಿದೆ. ಸ್ವತಂತ್ರ ಬಂದು 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಇಂತಹ ಸಮಾಜದಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂಬ ಸ್ಥಿತಿ ಬರಬಾರದು. ಇದು ನಾವೆಲ್ಲ ನಾಚಿಕೆ ಪಡಬೇಕಾದ ವಿಷಯ ಎಂದು ಹೇಳಿದ ನ್ಯಾಯಪೀಠ, ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ.18ರೊಳಗೆ ವರದಿ ಸಲ್ಲಿಸಬೇಕು. ಬೆಳಗಾವಿ ಪೊಲೀಸ್ ಆಯುಕ್ತರು ಮುಂದಿನ ವಿಚಾರಣೆಗೆ ಹಾಜರಾಗುವುದರ ಜತೆಗೆ ಎಸಿಪಿಯೂ ಕೂಡ ಹಾಜರಾಗಬೇಕು ಎಂದು ಹೇಳಿದೆ.

RELATED ARTICLES

Latest News