Thursday, April 30, 2026
Homeರಾಜ್ಯರಾಜ್ಯದ 2,870 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ ಆರಂಭ

ರಾಜ್ಯದ 2,870 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ ಆರಂಭ

SSLC exams begin at 2,870 exam centers in the state

ಬೆಂಗಳೂರು,ಮಾ.18- ರಾಜ್ಯದ 2,870 ಪರೀಕ್ಷಾ ಕೇಂದ್ರಗಳಲ್ಲಿ 2026ರ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-1 ಇಂದಿನಿಂದ ಆರಂಭವಾಗಿದ್ದು, ಸುಸೂತ್ರವಾಗಿ ನಡೆಯಿತು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಕ್ಷಣ ಇಲಾಖೆಯು ಭಯಮುಕ್ತರಾಗಿ ಸಂತಸದಿಂದ ಪರೀಕ್ಷೆ ಬರೆಯಿರಿ, ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹಾರೈಸಿದೆ. ಇಂದಿನಿಂದ ಏ.2 ರವರೆಗೆ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ ನಡೆಯಲಿದೆ. ಏ.24 ರಂದು ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಲಾಗಿದೆ.

ರಾಜ್ಯಾದ್ಯಂತ ಒಟ್ಟು 8,65,988 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 4,44,172 ಬಾಲಕರು ಮತ್ತು 4,21,816 ಬಾಲಕಿಯರು ಸೇರಿದ್ದಾರೆ.ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯನ್ನು 5,106 ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ 16 ಮಂದಿ ದೃಷ್ಟಿಮಾಂದ್ಯ ಮಕ್ಕಳು ಲ್ಯಾಪ್‌ಟಾಪ್‌ ಬಳಸಿ ಸ್ವತಃ ಪರೀಕ್ಷೆ ಬರೆಯುತ್ತಿರುವುದು ವಿಶೇಷವಾಗಿದೆ.

ಗಣ್ಯರ ಶುಭಾಶಯ :
ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ, ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

ಮಕ್ಕಳ ಮೇಲೆ ಒತ್ತಡ ಬೇಡ
ಬೆಂಗಳೂರು,ಮಾ.18- ಮಕ್ಕಳು ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿ ಸಬೇಕು. ಪೋಷಕರು ಸಹ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಶಿಕ್ಷಣ ಸಚಿವ ಎಸ್‌‍.ಮಧು ಬಂಗಾರಪ್ಪ ಕಿವಿಮಾತು ಹೇಳಿದ್ದಾರೆ.

ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಗೆ (ಕೆಪಿಎಸ್‌‍) ಭೇಟಿ ನೀಡಿ ಪರಿಶೀಲನೆ ನಡೆಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆತಸ್ಥೈರ್ಯ ತುಂಬಿ ಶುಭ ಹಾರೈಸಿದರು.

ಈ ವರ್ಷ ರಾಜ್ಯಾದ್ಯಂತ ಒಟ್ಟು 8,65,988 ವಿದ್ಯಾರ್ಥಿಗಳು 2,870 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ವಿಶೇಷವಾಗಿ 16 ದೃಷ್ಟಿಮಾಂದ್ಯ ಮಕ್ಕಳು ಬರಹಗಾರರ ಸೌಲಭ್ಯ ಬಳಸದೆ, ಸ್ವತಃ ಲ್ಯಾಪ್‌ಟಾಪ್‌ ಬಳಸಿ ಪರೀಕ್ಷೆ ಬರೆಯುತ್ತಿರುವುದು ಅತ್ಯಂತ ಹೆಮೆಯ ವಿಚಾರ. ಸರ್ಕಾರಿ ಶಾಲೆಗಳ 3,59,594 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,11,486 ವಿದ್ಯಾರ್ಥಿಗಳು ಹಾಗೂ ಅನುದಾನರಹಿತ ಶಾಲೆಗಳ 2,94,908 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷಾ ಸಿದ್ಧತೆಗಾಗಿ ಈಗಾಗಲೇ 3 ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ಮಕ್ಕಳಲ್ಲಿನ ಭಯವನ್ನು ಹೋಗಲಾಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳು, ಆಮಿಷಗಳಿಗೆ ಒಳಗಾಗಿ ತಪ್ಪು ದಾರಿ ಹಿಡಿದು ಮೊಸ ಹೋಗಬಾರದು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿನಂತಿಸಿದರು.

ಪರೀಕ್ಷಾ ಅಕ್ರಮಗಳನ್ನು ತಡೆಯಲು ಎಲ್ಲ ಕೇಂದ್ರಗಳಲ್ಲೂ ವೆಬ್‌ಕಾಸ್ಟಿಂಗ್‌ ಮೂಲಕ ನಿಗಾ ವಹಿಸಲಾಗಿದೆ. ಪ್ರತಿದಿನ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಪೊಲೀಸ್‌‍ ಸಿಬ್ಬಂದಿಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ. ಆಯಾ ಜಿಲ್ಲಾ ಆಡಳಿತದ ಮೂಲಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಭಯಮುಕ್ತರಾಗಿ ಸಂತಸದಿಂದ ಪರೀಕ್ಷೆ ಬರೆಯಿರಿ, ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಮಂಡಳಿ ಹಾರೈಸಿದೆ.

RELATED ARTICLES

Latest News