ಚಿತ್ರದುರ್ಗ,ಮಾ.20- ಪತ್ನಿ, ಮಗಳು ಸೇರಿದಂತೆ ಕುಟುಂಬದ ಐವರ ಮೇಲೆ ಆ್ಯಸಿಡ್ ಎರಚಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ದುರುಳ ಪರಾರಿಯಾಗಿರುವ ಘಟನೆ ತಾಲೂಕಿನ ಮಾಳಪ್ಪನ ಹಟ್ಟಿಯಲ್ಲಿ ನಡೆದಿದೆ.
ನೆಹರುನಗರದ ನಿವಾಸಿ ಆಟೋ ಚಾಲಕ ಆರೋಪಿ ಪತಿ ಸುಹೇಲ್ ಪತ್ತೆಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ.ಸುಹೇಲ್ ಮತ್ತು ತಾಸಿನಾ ಬಾನು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಒಬ್ಬ ಮಗಳಿದ್ದಾಳೆ. ಸುಹೇಲ್ ಕಾಲ ಕಳೆದಂತೆ ಪತ್ನಿ ತಾಸಿನಾ ಬಾನುಗೆ ಕಿರುಕುಳ ನೀಡುತ್ತಿದ್ದನು.
ಇದರಿಂದ ಬೇಸತ್ತು ತಾಸಿನಾ ಕೆಲ ತಿಂಗಳ ಹಿಂದಷ್ಟೇ ಮಗಳನ್ನು ಕರೆದುಕೊಂಡು ಬೆಂಗಳೂರು ನಗರ ಸೇರಿದ್ದಾರೆ. ಇದೀಗ ತಾಸಿನಾ ಹಬ್ಬಕ್ಕೆಂದು ಸಹೋದರಿ ಮನೆಗೆ ಬಂದಿದ್ದರು. ಈ ವಿಷಯ ತಿಳಿದು ಸುಹೇಲ್ ಏಕಾಏಕಿ ಅವರ ಮನೆಗೆ ನುಗ್ಗಿ ಪತ್ನಿ ತಾಸಿನಾ ಬಾನು ಹಾಗೂ ಪುತ್ರಿ ರೋಷನಿ, ಸಹೋದರಿ ನೇಹಾ, ನೇಹಾ ಪುತ್ರಿ ಇಕ್ರಾ, ಹಿರಿಯ ಸಹೋದರಿ ನಗಾ ಮೇಲೆ ಆ್ಯಸಿಡ್ ಎರೆಚಿದ್ದಾನೆ. ನಂತರ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ .
ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ರಂಜಿತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ,ಆಟೋ ಚಾಲಕನಾಗಿರುವ ಸುಹೇಲ್ ಮನೆಗೆ ನುಗ್ಗಿ ಆ್ಯಸಿಡ್ ದಾಳಿ ನಡೆಸಿದ್ದಾನೆ. ಸದ್ಯ ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಆರೋಪಿ ಬಂಧನಕ್ಕೆ ತಂಡ ರಚಿಸಿದ್ದೇವೆ. ಬಂಧನದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
