ಬೆಂಗಳೂರು, ಮಾ.20- ತೀವ್ರ ಜನಾಕ್ರೋಶಕ್ಕೆ ಕಾರಣವಾಗಿರುವ ಕರ್ನಾಟಕ ಲೋಕಾಸೇವಾ ಆಯೋಗದ ಸುಧಾರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ದೀರ್ಘ ಕಾಲದಿಂದಲೂ ಬೀಡುಬಿಟ್ಟಿದ್ದ ಪರೀಕ್ಷಾ ನಿಯಂತ್ರಕರನ್ನು ಕೊನೆಗೂ ಎತ್ತಂಗಡಿ ಮಾಡಿದೆ.
ಕರ್ನಾಟಕ ಲೋಕಾಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಎಲ್ಲಾ ಪರೀಕ್ಷೆಗಳು ಒಂದಲ್ಲಾ ಒಂದು ವಿವಾದಕ್ಕೆ ತುತ್ತಾಗುತ್ತಲೇ ಇದ್ದು, ಸರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿವೆ. ಲೋಕಸೇವಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ರಾಜ್ಯ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಆದರೂ ನೇಮಕಾತಿ ಹಾಗೂ ಪರೀಕ್ಷಾ ಅಕ್ರಮಗಳು ಕೇಳಿ ಬಂದಾಗ ಟೀಕೆಗೆ ಸರ್ಕಾರವೇ ಗುರಿಯಾಗುತ್ತಿತ್ತು.ಇತ್ತೀಚೆಗೆ ವಿಧಾನ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿದ್ದವು. ಪಕ್ಷ ಭೇದ ಮರೆತು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಕೆಪಿಎಸ್‌ಸಿಯನ್ನು ಮುಚ್ಚುವುದೇ ಸೂಕ್ತ ಎಂದಿದ್ದರು. ಬಿಜೆಪಿಯ ಸದಸ್ಯರು ಮಾತನಾಡುವ ವೇಳೆ, ಸರ್ಕಾರ ಕೆಪಿಎಸ್‌ಸಿ ಸುಧಾರಣೆಗೆ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ಬೆಂಬಲ ವ್ಯಕ್ತಪಡಿಸುವುದಾಗಿ ಭರವಸೆ ನೀಡಿದರು. ಸರ್ಕಾರ ಕೂಡ ಕೆಪಿಎಸ್‌ಸಿಯನ್ನು ಶುದ್ಧ ಮಾಡಲು ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳಿತ್ತು.
ಇದೇ ವೇಳೆ ಬಿಜೆಪಿಯವರು ಕೆಪಿಎಸ್‌ಸಿಯಲ್ಲಿ ಕಾರ್ಯದರ್ಶಿಗಳನ್ನು ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ಆದರೆ ಪರೀಕ್ಷಾ ನಿಯಂತ್ರಕರು ಹಲವು ವರ್ಷಗಳಿಂದ ಬೀಡು ಬಿಟ್ಟಿದ್ದು, ಅಕ್ರಮಗಳಿಗೆ ಅವರೇ ಹೊಣೆದಾರರೆಂದು ಆರೋಪಿಸಿದ್ದರು.
ಸುಧೀರ್ಘ ಚರ್ಚೆಗೆ ಖದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಬೇಕಿತ್ತು. ಆದರೆ ಕೆಪಿಎಸ್‌ಸಿಯಲ್ಲಿ ಪದೇ ಪದೇ ಕರ್ಮಕಾಂಡ ನಡೆಯುತ್ತಿದ್ದು, ಉತ್ತರ ನೀಡಲು ಮುಜುಗರವಾಗುತ್ತಿದೆ ಎಂದು ದೂರ ಉಳಿದಿದ್ದರು. ಕೊನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮುಖ್ಯಮಂತ್ರಿ ಅವರ ಪರವಾಗಿ ಉತ್ತರ ನೀಡಿದರು. ಕೆಪಿಎಸ್‌ಸಿ ಅದ್ವಾನಗಳ ಕುರಿತು ಅಧ್ಯಯನ ಮಾಡಿ ಸುಧಾರಣೆಗೆ ಶಿಫಾರಸ್ಸು ನೀಡಲು ಸದನ ಸಮಿತಿ ರಚಿಸುವುದಾಗಿ ಪ್ರಕಟಿಸಿದರು.
ಚರ್ಚೆಯಲ್ಲಿ ಪ್ರಮುಖವಾಗಿ ಆರೊಪಕ್ಕೆ ಗುರಿಯಾದ ಪರೀಕ್ಷಾ ನಿಯಂತ್ರಕರನ್ನು ಕೊನೆಗೂ ಎತ್ತಂಗಡಿ ಮಾಡುವ ಮೂಲಕ ಸರ್ಕಾರ ಸುಧಾರಣಾ ಕ್ರಮಗಳಿಗೆ ಮುಂದಾಗಿದೆ.ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಂದ್ರಕುಮಾರ್ ಗಂಗ್ವಾರ್ ಸುಮಾರು ವರ್ಷಗಳಿಂದಲೂ ಕೆಪಿಎಸ್‌ಸಿಯಲ್ಲಿಯೇ ಪರೀಕ್ಷಾ ನಿಯಂತ್ರಕರಾಗಿ ಟಿಕಾಣಿ ಹೂಡಿದ್ದಾರೆ ಎಂಬ ಟೀಕೆಗಳಿದ್ದವು.
ರಾಜ್ಯ ಸರ್ಕಾರ ಇಂದು ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಅದರಲ್ಲಿ ಪ್ರಮುಖವಾಗಿ ಕೆಪಿಎಸ್‌ಸಿಯ ನಿಯಂತ್ರಕರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.ಕೆಪಿಎಸ್‌ಸಿ ಪರೀಕ್ಷೆಗಳ ನಿಯಂತ್ರಕರ ಹುದ್ದೆಯ ಸಮವರ್ತಿತ ಪ್ರಭಾರದಲ್ಲಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಈ ಮೊದಲೇ ವರ್ಗಾವಣೆ ಮಾಡಲಾಗಿತ್ತು. ಆದರೂ ಅವರು ಪರೀಕ್ಷಾ ನಿಯಂತ್ರಕರ ಹುದ್ದೆಯಲ್ಲಿ ಪ್ರಭಾರವಾಗಿ ಕೆಲಸ ಮಾಡುತ್ತಿದ್ದರು.
ಜಿಬಿಎ ವ್ಯಾಪ್ತಿಯ ಪಶ್ಚಿಮ ಬೆಂಗಳೂರು ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾಗಿದ್ದ (ಅಭಿವೃದ್ಧಿ) ದಿಗ್ವಿಜಯ್ ಬೋಡ್ಕೆ ಅವರನ್ನು ಕೆಪಿಎಸ್‌ಸಿ ಪರೀಕ್ಷೆಗಳ ನಿಯಂತ್ರಕರ ಹುದ್ದೆಗೆ ರಾಜ್ಯಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ.ಖಾಯಂ ಪರೀಕ್ಷಾ ನಿಯಂತ್ರಕರ ನಿಯೋಜನೆಗೊಂಡಿರುವುದರಿಂದಾಗಿ ಇನ್ನೂ ಮುಂದೆ ಪರೀಕ್ಷಾ ಅಕ್ರಮಗಳು ತಗ್ಗಬಹುದು ಎಂಬ ನಿರೀಕ್ಷೆಗಳಿವೆ.
ಇತ್ತೀಚೆಗೆ ನಡೆದ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಯಲ್ಲೂ ಪಕ್ಷಪಾತಗಳು ಮತ್ತು ಭ್ರಷ್ಟಾಚಾರಗಳಾಗಿವೆ ಎಂಬ ಟೀಕೆಗಳು ಕೇಳಿ ಬಂದಿದ್ದವು. ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಮುಜುಗರದಿಂದ ಪಾರಾಗಲು ಸರ್ಕಾರ ಪರೀಕ್ಷ ನಿಯಂತ್ರಕರ ತಲೆದಂಡ ಮಾಡಿದೆ.
