ನವದೆಹಲಿ, ಮಾ.23: ಭಾರತದ ಸ್ವಾತಂತ್ರ್ಯ ಹೋರಾಟದ ವೀರರಾದ ಭಗತ್ ಸಿಂಗ್, ಶಿವರಾಮ ರಾಜಗುರು ಮತ್ತು ಸುಖದೇವ್ ಠಾಪರ್ ಅವರ ಹುತಾತ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಭಾರತ ಮಾತೆಯ ಶೂರ ಪುತ್ರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ನಾವು ಇಂದು ಗೌರವ ನಮನ ಸಲ್ಲಿಸುತ್ತೇವೆ. ದೇಶಕ್ಕಾಗಿ ಅವರ ಬಲಿದಾನ ನಮ ಸಮೂಹ ಸ್ಮೃತಿಯಲ್ಲಿ ಸದಾಕಾಲ ಅಚ್ಚಳಿಯದೇ ಉಳಿದಿದೆ ಎಂದು ತಿಳಿಸಿದ್ದಾರೆ.
ಯುವ ವಯಸ್ಸಿನಲ್ಲೇ ಅವರು ಅಪಾರ ಧೈರ್ಯ ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ಅಚಲ ಬದ್ಧತೆಯನ್ನು ತೋರಿದ್ದಾರೆ ಎಂದು ಅವರು ಹೇಳಿದರುಬ್ರಿಟಿಷರ ವಸಾಹತು ಆಡಳಿತದ ಬಲಕ್ಕೆ ಹೆದರದೆ, ತಮ್ಮ ಪ್ರಾಣಕ್ಕಿಂತ ದೇಶ ಮುಖ್ಯವೆಂದು ಬಲಿದಾನದ ಮಾರ್ಗವನ್ನು ಆರಿಸಿಕೊಂಡರು.
ನ್ಯಾಯ, ದೇಶಭಕ್ತಿ ಮತ್ತು ನಿರ್ಭಯ ಪ್ರತಿರೋಧದ ಅವರ ಆದರ್ಶಗಳು ಇಂದು ಸಹ ಅನೇಕ ಭಾರತೀಯರಿಗೆ ಪ್ರೇರಣೆ ನೀಡುತ್ತಿವೆ, ಎಂದು ಪ್ರಧಾನಿ ತಿಳಿಸಿದ್ದಾರೆ. 1931ರ ಇದೇ ದಿನ, ಬ್ರಿಟಿಷ್ ಆಡಳಿತವು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿತ್ತು.
