Thursday, April 30, 2026
Homeರಾಜಕೀಯಉಪಚುನಾವಣೆ ಗೆಲ್ಲಲು ಸಿಎಂ-ಡಿಸಿಎಂ ಒಗ್ಗಟ್ಟಿನ ಜಪ

ಉಪಚುನಾವಣೆ ಗೆಲ್ಲಲು ಸಿಎಂ-ಡಿಸಿಎಂ ಒಗ್ಗಟ್ಟಿನ ಜಪ

CM-DCM show unity to win by-elections

ಬೆಂಗಳೂರು, ಮಾ.23- ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಂತರಿಕ ಸಂಘರ್ಷವನ್ನು ಮರೆತು ಒಗ್ಗಟಟ್ಟಿನ ಮಂತ್ರ ಜಪಿಸಲಾರಂಭಿಸಿದ್ದಾರೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್‌ ಮಲ್ಲಿಕಾರ್ಜುನ್‌ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಉಮೇಶ್‌ ಮೇಟಿ ನಾಮ ಪತ್ರ ಸಲ್ಲಿಕೆಯ ವೇಳೆ ಇಬ್ಬರೂ ಖುದ್ದು ಹಾಜರು ಇರುವ ಮೂಲಕ ಒಮತದ ಹೋರಾಟದ ಮುನ್ಸೂಚನೆ ನೀಡಿದ್ದಾರೆ.

ಎರಡು ಕ್ಷೇತ್ರಗಳ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್‌‍ನ ಮೌಲ್ಯಮಾಪನ ಎಂದೇ ಬಿಂಬಿಸಲಾಗುತ್ತಿದೆ. ವಿರೋಧ ಪಕ್ಷಗಳು ಕಾಂಗ್ರೆಸ್‌‍ ಒಳಗಿರುವ ಕುರ್ಚಿ ಕಿತ್ತಾಟ, ಇತ್ತೀಚೆಗೆ ವರದಿಯಾದ ಕೆಲ ಭ್ರಷ್ಟಾಚಾರ ಪ್ರಕರಣಗಳು, ಸಚಿವ ಸಂಪುಟ ಪುನರ್‌ರಚನೆ ಗೊಂದಲ, ಮತಕ್ಕಾಗಿ ತುಷ್ಟೀಕರಣ, ಕಾಂಗ್ರೆಸ್‌‍ ಆಡಳಿತದಲ್ಲಿ ನಿಷ್ಕ್ರಿಯತೆ ಸೇರಿದಂತೆ ಹಲವು ವಿಚಾರಗಳನ್ನು ಜನರ ಮುಂದಿಟ್ಟು ಪ್ರಚಾರ ನಡೆಸಲು ತಂತ್ರಗಾರಿಕೆ ರೂಪಿಸಿವೆ.

ಪ್ರಮುಖವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಬಣಗಳ ನಡುವಿನ ಅಧಿಕಾರ ಹಂಚಿಕೆಯ ಸಂಘರ್ಷವೇ, ಬಿಜೆಪಿಯ ಚುನಾವಣಾ ಅಸ್ತ್ರ. ಅದಕ್ಕೆ ಒಗ್ಗಟ್ಟಿನ ಮಂತ್ರದ ಮೂಲಕ ತಿರುಗೇಟು ನೀಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಜಂಟಿಯಾಗಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುವ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಚುನಾವಣೆಯ ಪ್ರಚಾರದ ವೇಳೆಯಲ್ಲೂ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಕಾರ್ಯಕರ್ತರು ಹಾಗೂ ಮುಖಂಡರಲ್ಲಿರುವ ಗೊಂದಲಗಳನ್ನು ಬಗೆ ಹರಿಸಲು ಮತ್ತು ವಿರೋಧ ಪಕ್ಷಗಳಿಗೂ ಸಂದೇಶ ರವಾನಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಈ ಮೊದಲು ಕಾಂಗ್ರೆಸ್‌‍ನ ಶ್ಯಾಮನೂರು ಶಿವಶಂಕರಪ್ಪ ಮತ್ತು ಎಚ್‌.ವೈ.ಮೇಟಿ ಗೆಲುವು ಸಾಧಿಸಿದ್ದರು, ಎರಡು ಕ್ಷೇತ್ರಗಳನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಕಾಂಗ್ರೆಸ್‌‍ ಪಕ್ಷಕ್ಕೆ ಅನಿವಾರ್ಯವಾಗಿದೆ. ಯಾವುದೇ ಕ್ಷೇತ್ರದಲ್ಲೂ ಸೋಲು ಕಂಡರೂ ಅದು ಪಕ್ಷದ ವರ್ಚಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ರಾಮರಾಜ್ಯ ನಿರ್ಮಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರಿಗೆ, ಈ ಚುನಾವಣೆ ಉತ್ತರ ನೀಡಲಿದೆ. ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್‌‍ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾದರೆ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌‍ನ ಕೈ ಹಿಡಿಯುತ್ತವೆ ಎಂದು ಪರಿಭಾವಿಸಬಹುದಾಗಿದೆ. ಇಲ್ಲವಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌‍ ಅಧಿಕಾರಕ್ಕೆ ಮರಳುವ ಬಗ್ಗೆ ಅನುಮಾನಗಳು ದಟ್ಟವಾಗುತ್ತವೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಗೆದ್ದರೆ, ಮುಂದಿನ ಅವಧಿಯಲ್ಲೂ ಕಾಂಗ್ರೆಸ್‌‍ಗೆ ಅಧಿಕಾರ ನಿರೀಕ್ಷೆ ಉಳಿಯಲಿದ್ದು, ಡಿ.ಕೆ.ಶಿವಕುಮರ್‌ ಅವರು 2028ಕ್ಕೆ ಮುಖ್ಯಮಂತ್ರಿಯಾಗುವ ಕನಸ್ಸಿನೊಂದಿಗೆ ಸಮಾಧಾನದಿಂದಿರಬಹುದು. ಇಲ್ಲದೇ ಹೋದರೆ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆ ಇದ್ದರೆ, ಈ ಅವಧಿಗೆ ತಮಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕೆಂದು ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.ಇದರಿಂದ ಮತ್ತೆ ಉಪಚುನಾವಣೆಗಳ ಬಳಿಕ ಕುರ್ಚಿ ಕದನ ಜೋರಾಗುವ ಲಕ್ಷಣಗಳಿವೆ.

RELATED ARTICLES

Latest News