Homeರಾಜ್ಯನಾನು ಆದಿವಾಸಿಯಾಗಿರುವುದಕ್ಕೆ ವಿಪಕ್ಷಗಳಿಗೆ ಅಸಹನೆ : ಸಚಿವ ಬಿ.ನಾಗೇಂದ್ರ

ನಾನು ಆದಿವಾಸಿಯಾಗಿರುವುದಕ್ಕೆ ವಿಪಕ್ಷಗಳಿಗೆ ಅಸಹನೆ : ಸಚಿವ ಬಿ.ನಾಗೇಂದ್ರ

ಬೆಂಗಳೂರು, ಆ.19- ಆದಿವಾಸಿ ಜನಾಂಗದವರು ಮಂತ್ರಿಯಾಗಿರುವುದನ್ನು ಸಹಿಸದೆ ವಿರೋಧ ಪಕ್ಷಗಳು ಅಧಿವೇಶನ ನಡೆಯಲು ಅವಕಾಶ ನೀಡದೆ ಅಡ್ಡಿಪಡಿಸುತ್ತಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಬಿ. ನಾಗೇಂದ್ರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕಾಗಿದ್ದರೂ, ಅದನ್ನು ಬಿಟ್ಟು ತಮ್ಮ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಬಿಜೆಪಿ, ಜೆಡಿಎಸ್‌ನವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದು ವೇಳೆ ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಆಧಾರಗಳಿದ್ದರೆ ಚರ್ಚೆಗೆ ಬರಲಿ. ಉತ್ತರ ನೀಡಲು ಸಿದ್ಧ. ಈ ವಿಚಾರವನ್ನು ಮುಖ್ಯಮಂತ್ರಿಯವರೂ ಹೇಳಿದ್ದಾರೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬೋರ್ಡ್‌ನಲ್ಲಿ ಚರ್ಚೆಯಾಗದೇ, ತಮ್ಮ ಗಮನಕ್ಕೂ ಬಾರದೇ ಹಾಗೂ ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಹಣ ವರ್ಗಾವಣೆಯಾಗಿತ್ತು. ತಮ್ಮ ಗಮನಕ್ಕೆ ಬಂದ ಬಳಿಕ 100 ಕೋಟಿ ರೂ. ಬ್ಯಾಂಕ್‌ನಲ್ಲೇ ಉಳಿಸಲಾಗಿತ್ತು. ಎಸ್‌ಐಟಿ ರಚನೆಯಾದ ನಂತರ ತಾವೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು.

ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ತೆಲಂಗಾಣದ 800 ಖಾತೆಗಳಲ್ಲಿದ್ದ 84.68 ಕೋಟಿ ರೂ. ಪೈಕಿ 79 ಕೋಟಿ ರೂ. ಈಗಾಗಲೇ ವಾಪಸ್‌ ಬಂದಿದೆ. ತಮ್ಮ ಖಾತೆಗೆ ಒಂದು ರೂ. ಕೂಡ ಬಂದಿಲ್ಲ. ಈ ನಡುವೆ ಇ.ಡಿ.ಯವರು ತಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎಂದು ತಿಳಿಸಿದರು.

“ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಹೇಳಬೇಕು ಎಂದರೆ ಅವರು ಚರ್ಚೆಗೆ ಸಿದ್ಧವಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೋಗಿದ್ದ ಜಾಗವನ್ನು ಶುದ್ಧೀಕರಣ ಮಾಡಿದ್ದನ್ನು ನೋಡಿದರೆ ವರ್ಣಪದ್ಧತಿ ಮುಂದುವರಿದಿದೆ ಎನ್ನಿಸುತ್ತದೆ. ಈ ಎಲ್ಲಾ ವಿಚಾರವನ್ನು ವಾಲ್ಮೀಕಿ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಗದಾಪ್ರಹಾರ ಮಾಡುತ್ತಿದ್ದಾರೆ. ಇದರ ಪರಿಣಾಮ ಚುನಾವಣೆಯಲ್ಲಿ ಗೊತ್ತಾಗಲಿದೆ” ಎಂದು ಹೇಳಿದರು.

ವಿನಾಕಾರಣ ಗೊಂದಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿಪಡಿಸುವುದನ್ನು ಕೈಬಿಟ್ಟು ಸುಗಮ ಕಲಾಪ ನಡೆಯಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ಬಿಜೆಪಿಯ 126 ಸಂಸದರ ಮೇಲೆ ಗಂಭೀರ ಸ್ವರೂಪದ ಆರೋಪಗಳಿದ್ದರೂ ರಾಜೀನಾಮೆ ಕೇಳಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧ 29 ಪ್ರಕರಣಗಳಿವೆ. ಅಸ್ಸಾಂನ ಹಿಮಂತ್‌ ಬಿಸ್ವ ಶರ್ಮಾ ವಿರುದ್ಧವೂ ಆರೋಪಗಳಿವೆ. ಅವರು ಜಾಮೀನು ಪಡೆದಿಲ್ಲವೇ? ತಪ್ಪು ಮಾಡಿರುವುದು ಸಾಬೀತಾದರೆ ನಾನು ಶಿಕ್ಷೆ ಅನುಭವಿಸಲು ಸಿದ್ಧ ಎಂದು ನಾಗೇಂದ್ರ ಹೇಳಿದರು.

“ರಾಜ್ಯಪಾಲರು ನನಗೆ ಮಂತ್ರಿಯಾಗಲು ಪ್ರಮಾಣವಚನ ಬೋಧಿಸಿಲ್ಲವೇ? ರಾಜಕೀಯ ಕಾರಣಕ್ಕಾಗಿ ಸದನದ ಸಮಯ ಹಾಳು ಮಾಡುವುದು ಸರಿಯಲ್ಲ. ದಲಿತರ ಹಕ್ಕುಚ್ಯುತಿ ಮಾಡುತ್ತಿದ್ದೀರಿ. ಕೇಂದ್ರದ 29 ಸಚಿವರ ಮೇಲೆ ಆರೋಪಗಳಿಲ್ಲವೇ? ನ್ಯಾಯಾಲಯ ಮತ್ತು ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಚರ್ಚೆಗೆ ಬನ್ನಿ. ನಿರಪರಾಧಿಯಾಗಿರುವ ನನ್ನನ್ನು ಅಪರಾಧಿ ಮಾಡಲು ಹೊರಟಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ದುರುದ್ದೇಶದಿಂದ ತಮ್ಮ ಮೇಲೆ ಕೆಸರು ಎರಚುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. “ನಾನು ಹೈಕಮಾಂಡ್‌ಗೆ ಬ್ಲಾಕ್‌ಮೇಲ್‌ ಮಾಡಿ ಮಂತ್ರಿ ಪದವಿ ಪಡೆದಿಲ್ಲ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಮತ್ತೆ ಮಂತ್ರಿ ಸ್ಥಾನ ನೀಡಿದ್ದಾರೆ” ಎಂದು ನಾಗೇಂದ್ರ ಸ್ಪಷ್ಟಪಡಿಸಿದರು.

RELATED ARTICLES
spot_img

Latest News