ಬೆಂಗಳೂರು, ಮಾ.27- ಮುತ್ತಪ್ಪ ರೈ ಅವರ ಪುತ್ರನ ಐಷರಾಮಿ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಕಾರನ್ನು ಜಪ್ತಿ ಮಾಡಿ ತನಿಖೆ ಆರಂಭಿಸಿದ್ದಾರೆ.
ಮಾ. 21ರಂದು ಬೆಳಗಿನ ಜಾವ 2.40 ರ ಸುಮಾರಿನಲ್ಲಿ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅನಿಲ್‌ಕುಂಬ್ಳೆ ಸರ್ಕಲ್ ಹಾಗೂ ಕಬ್ಬನ್‌ಪಾರ್ಕ್ ಬಳಿ ಐಷರಾಮಿ ಲ್ಯಾಂಬೊರ್ಗಿನಿ ಕಾರನ್ನು ಗಿರಗಿಟ್ಟಲೆ ಹೊಡೆಸಿರುವುದು ಪತ್ತೆಯಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋಗಳು ಪೊಲೀಸರ ಖಾತೆಗಳಿಗೆ ಟ್ಯಾಗ್ ಮಾಡಲ್ಪಟ್ಟಿದ್ದವು. ಪೊಲೀಸ್ ಕಾನ್‌ಸ್ಟೇಬಲ್ ಷಣುಖ ಅವರು ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್‌ಪಾಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಆ್ಯಕ್ಟ್ 28, ಮೋಟಾರ್ ವಾಹನ ಕಾಯ್ದೆ 184, 189ರ ಅಡಿ ಪ್ರಕರಣ ದಾಖಲಿಸಿ, ಕಾರನ್ನು ಜಪ್ತಿ ಮಾಡಲಾಯಿತು.
ತನಿಖೆಯ ಕಾಲದಲ್ಲಿ ಲ್ಯಾಂಬೊರ್ಗಿನಿ ಕಾರಿನ ನಂಬರ್ ಪ್ಲೇಟ್ ಸಂಖ್ಯೆ ಕೆಎ05 ಎನ್ ಆರ್0009 ವಾಹನಕ್ಕೆ ಸಂಬಂಧಪಟ್ಟಂತಹ ಮಾಹಿತಿ ಹಾಗೂ ದಾಖಲಾತಿಗಳನ್ನು ನೀಡಲು ಪೊಲೀಸರು, ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ದೆಹಲಿಯಲ್ಲಿ ನೊಂದಣಿಯಾಗಿರುವ ಕಾರನ್ನು ತೆರಿಗೆ ಪಾವತಿಸದೆ ಕರ್ನಾಟಕದಲ್ಲಿ ಓಡಿಸಲಾಗುತ್ತಿದೆ ಎಂದು ಮೋಟಾರು ವಾಹನ ಹಿರಿಯ ನಿರೀಕ್ಷಕರು 2025ರ ಅ. 28 ರಂದು ಮುತ್ತಪ್ಪರೈ ಅವರ ಪುತ್ರ ರಿಕ್ಕಿ ರೈ ಎಂಬುವರಿಗೆ ನೋಟೀಸ್ ಜಾರಿಗೊಳಿಸಿರುವುದಾಗಿ ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ 2026 ಜ. 27ರಂದು ರಿಕ್ಕಿ ರೈ ಅವರು ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಫ್ಯಾನ್ಸಿ ನೋಂದಣಿ ಸಂಖ್ಯೆಗಾಗಿ ಚಲನ್ ಭರ್ತಿ ಮಾಡಿದ್ದಾರೆ. ಆದರೆ ರಿಕ್ಕಿ ರೈ ಮನವಿ ಮಾಡಿರುವ ನೋಂದಣಿ ಸಂಖ್ಯೆಯನ್ನು ಯಾವುದೇ ವಾಹನಕ್ಕೆ ಇದುವರೆಗೂ ಹಂಚಿಕೆ ಮಾಡಿಲ್ಲ ಮತ್ತು ಸದರಿ ಸಂಖ್ಯೆಯಲ್ಲಿ ಯಾವ ವಾಹನವು ನೋಂದಣಿಯಾಗಿಲ್ಲ ಎಂದು ಸಾರಿಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೇರೆ ವ್ಯಕ್ತಿಯಿಂದ ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿರುವ ರಿಕ್ಕಿ ರೈ ಅದರ ದಾಖಲಾತಿಗಳನ್ನು ಕ್ರಮ ಬದ್ಧಗೊಳಿಸಿಕೊಳ್ಳದೇ, ನಿಯಮ ಬಾಹಿರವಾಗಿ ನಕಲಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕಾರಿನ ಮೂಲ ಮಾಲೀಕರಿಗೆ ಮೋಸ ಮಾಡುವ, ಸಂಚಾರ ಅಪರಾಧ ಹಾಗೂ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ತಪ್ಪಿಸಿಕೊಳ್ಳುವ ದುರುದ್ದೇಶ ಮತ್ತು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಮೂಲ ನಂಬರ್ ಪ್ಲೇಟ್ ಬದಲಾಗಿ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರು, ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ನಂಬುವಂತೆ ವಂಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.
ತನಿಖೆ ಆರಂಭದಲ್ಲಿ ರಿಕ್ಕಿ ರೈ ಕಾರನ್ನು ತಮ ಚಾಲಕ ಓಡಿಸುತ್ತಿದ್ದು, ಗಿರಿಗಿಟ್ಟಲೆ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.ತನಿಖಾಧಿಕಾರಿಗಳು ಚಾಲಕನನ್ನು ವಿಚಾರಣೆಗೊಳಪಡಿಸಿ, ಕಾರಿನ ಬಳಕೆಯ ಬಗ್ಗೆ ಮಾಹಿತಿ ಕೇಳಿದಾಗ ಸ್ಪಷ್ಟ ಉತ್ತರ ನೀಡಲಾಗದೆ ಆತ ತಬ್ಬಿಬ್ಬಾಗಿದ್ದಾನೆ.
ಹೀಗಾಗಿ 2ನೇ ಹಂತದ ವಿಚಾರಣೆಗಾಗಿ ಚಾಲಕ ಹಾಗೂ ರಿಕ್ಕಿ ರೈ ಇಬ್ಬರಿಗೂ ಕಬ್ಬನ್ ಪಾರ್ಕ್ ಸಂಚಾರಿ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಈ ನಡುವೆ ರಿಕ್ಕಿ ರೈ ಅವರ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
