Tuesday, April 14, 2026
Homeರಾಜ್ಯಲಾರಿ ಡಿಕ್ಕಿಯಾಗಿ ಹೊತ್ತಿ ಉರಿದ ಕ್ಯಾಬ್‌, ಚಾಲಕ ಸಜೀವ ದಹನ

ಲಾರಿ ಡಿಕ್ಕಿಯಾಗಿ ಹೊತ್ತಿ ಉರಿದ ಕ್ಯಾಬ್‌, ಚಾಲಕ ಸಜೀವ ದಹನ

Cab catches fire after being hit by lorry, driver burnt alive

ಬೆಂಗಳೂರು,ಮಾ.27- ಕಬ್ಬಿಣ ತುಂಬಿದ್ದ ಲಾರಿ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಕ್ಯಾಬ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಕ್ಯಾಬ್‌ ಚಾಲಕ ಸಜೀವ ದಹನವಾಗಿರುವ ದಾರುಣ ಘಟನೆ ರಾಜಾಜಿನಗರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನಜಾವ ನಡೆದಿದೆ.ಕಲ್ಬುರ್ಗಿ ಮೂಲದ ಅಂಬದಾಸ್‌‍ (23) ಸಜೀವ ದಹನವಾಗಿರುವ ಕ್ಯಾಬ್‌ ಚಾಲಕ. ಇವರು ಕುರುಬರಹಳ್ಳಿಯಲ್ಲಿ ವಾಸವಿದ್ದರು.

ಇಂದು ಬೆಳಗಿನಜಾವ 1.20 ರ ಸುಮಾರಿನಲ್ಲಿ ಏರ್‌ಪೋರ್ಟ್‌ಗೆ ಪಿಕಪ್‌ ಇದ್ದ ಕಾರಣ ಕುರುಬರಹಳ್ಳಿ ಪೈಪ್‌ಲೈನ್‌ನಲ್ಲಿ ಕ್ಯಾಬ್‌ ನಿಲ್ಲಿಸಿಕೊಂಡು ಅಂಬದಾಸ್‌‍ ನಿದ್ರೆಗೆ ಜಾರಿದ್ದಾರೆ. ಆಂದ್ರದಿಂದ ಕಬ್ಬಿಣ ತುಂಬಿಕೊಂಡು ನಗರಕ್ಕೆ ಬಂದಿದ್ದ ಲಾರಿ ಕಬ್ಬಿಣವನ್ನು ಸುಂಕದಕಟ್ಟೆ ಗೋದಾಮಿಗೆ ಇಳಿಸಬೇಕಿತ್ತು.

ಹಾಗಾಗಿ ಲಾರಿ ಚಾಲಕ ಗೂಗಲ್‌ ಮ್ಯಾಪ್‌ ಹಾಕಿಕೊಂಡು ಕುರುಬರಹಳ್ಳಿಯ ಪೈಪ್‌ಲೈನ್‌ ಮಾರ್ಗವಾಗಿ ಇಂದು ಬೆಳಗಿನಜಾವ ಹೋಗುತ್ತಿದ್ದಾಗ ಇಳಿಜಾರು ಪ್ರದೇಶವಾದ್ದರಿಂದ ನಿಯಂತ್ರಣ ತಪ್ಪಿ ಕ್ಯಾಬ್‌ಗೆ ಲಾರಿ ಗುದ್ದಿಕೊಂಡು ಸುಮಾರು 100 ಮೀಟರ್‌ ಎಳೆದೊಯ್ದು ರಸ್ತೆ ಬದಿಯ ಗುಜುರಿ ಗೋದಾಮಿಗೆ ಅಪ್ಪಳಿಸುತ್ತಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಹಾಗೂ ಲಾರಿ ಹೊತ್ತಿ ಉರಿದಿದೆ.

ಲಾರಿ ಚಾಲಕ ಏನು ಮಾಡಬೇಕೆಂದು ತಿಳಿಯದೆ ಲಾರಿಯಿಂದ ರಾಜಕಾಲುವೆಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾನೆ.ಈ ಎರಡು ವಾಹನಗಳು ಹಾಗೂ ಗೋದಾಮಿಗೂ ಸಹ ಹೊತ್ತಿ ಉರಿಯುತ್ತಿರುವು ಗಮನಿಸಿದ ದಾರಿ ಹೋಕರು ತಕ್ಷಣ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.

ನಾಲ್ಕು ಅಗ್ನಿ ಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಹರಸಾಹಸಪಟ್ಟು ಕೆಲ ಗಂಟೆಗಳ ಕಾಲ ಬೆಂಕಿಯನ್ನು ನಂದಿಸಿ ತಹಬದಿಗೆ ತಂದಿದ್ದಾರೆ.ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News