ಬೆಂಗಳೂರು, ಜು. 12- ಚಿತ್ರ ರಂಗದವರೊಂದಿಗೆ ಚರ್ಚಿಸಿ ಖ್ಯಾತ ಗಾಯಕಿ ಎಸ್.ಜಾನಕಿಯವರ ಹೆಸರು ಅಜರಾಮರವಾಗಿರುವಂತೆ ಮಾಡಲು ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಗಾನ ಕೋಗಿಲೆ, ಅಪ್ರತಿಮ ಗಾಯಕಿ ಎಸ್.ಜಾನಕಿಯವರು ತಮ 50 ವರ್ಷಗಳ ವೃತ್ತಿ ಜೀವನದಲ್ಲಿ ಎಲ್ಲಾ ಭಾಷೆಗಳಲ್ಲೂ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಅಸಾಧಾರಣವಾದ ಸೇವೆ ಸಲ್ಲಿಸಿದ್ದಾರೆ ಎಂದರು.
ನಿನ್ನೆ ಅವರ ನಿಧನದ ಬಳಿಕ ತಾವು, ಕುಟುಂಬದ ಸದಸ್ಯರ ಜೊತೆ ಮಾತುಕತೆ ನಡೆಸಿ, ಚೆನ್ನೈ, ಹೈದರಾಬಾದ್ ಸೇರಿದಂತೆ ಎಲ್ಲಿಗೆ ಬೇಕಾದರೂ ಅಲ್ಲಿಗೆ ಪಾರ್ಥೀವ ಶರೀರವನ್ನು ಕಳುಹಿಸಲು ವಿಮಾನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದೆ, ಆದರೆ ಅವರ ಮೊಮಗಳು ಅಜ್ಜಿ ಮೈಸೂರಿನಲ್ಲೇ ಅಂತ್ಯಸಂಸ್ಕಾರವಾಗಬೇಕೆಂದು ಬಯಸಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಆಸೆಯಂತೆ ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು. ಅದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ, 33ಕ್ಕೂ ಹೆಚ್ಚು ವಿವಿಧ ರಾಜ್ಯ ಪ್ರಶಸ್ತಿಗಳನ್ನು ಎಸ್.ಜಾನಕಿಯವರು ಪಡೆದಿದ್ದಾರೆ. ಕರ್ನಾಟಕ ಸರ್ಕಾರವೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ಲತಾ ಮಂಗೇಶ್ಕರ್ ಅವರಂತೆ ಎಸ್.ಜಾನಕಿಯವರು ಅತ್ಯಂತ ಸರಳವಾಗಿ ಜೀವಿಸಿದ್ದರು. ನಮ ನೆಲ ಹಾಗೂ ಭಾಷೆಯ ಮೇಲೆ ಅವರಿಗಿದ್ದ ಅಭಿಮಾನ ಹೆಮೆ ಮೂಡಿಸಿದೆ. ಕಳೆದ ಎರಡು ವರ್ಷಗಳಿಂದಲೂ ಮೈಸೂರಿಲ್ಲೇ ನೆಲೆಸಿದ್ದರು. ಇಲ್ಲಿಯೇ ಅಂತ್ಯ ಸಂಸ್ಕಾರವಾಗಬೇಕೆಂದು ಬಯಸಿದ್ದರು. ಮೊದಲ ಮತ್ತು ಕೊನೆಯ ಹಾಡನ್ನು ಮೈಸೂರಿನಲ್ಲೇ ಹಾಡಿದ್ದರು ಎಂಬುದು ಗಮನಾರ್ಹ ಎಂದು ಮುಖ್ಯಮಂತ್ರಿ ಹೇಳಿದರು.
ಅವರ ಹೆಸರು ಅಜರಾಮರವಾಗಿರುವಂತೆ ಏನು ಕ್ರಮ ಕೈಗೊಳ್ಳಬೇಕೆಂದು ಚಿತ್ರರಂಗದವರ ಜೊತೆ ಚರ್ಚಿಸಿ, ನಿರ್ಣಯ ಕೈಗೊಳ್ಳಲಾಗುವುದು. ತಮಗೆ ಬೇರೆಯೆ ಕೆಲಸ ಇರುವುದರಿಂದ ಮೈಸೂರಿಗೆ ಹೋಗಲಾಗುತ್ತಿಲ್ಲ, ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಹಾಗೂ ಇತರರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
