ಬೆಂಗಳೂರು, ಜು. 12- ಸಾರಿಗೆ ಸಚಿವರಾದ ಬೈರತಿ ಸುರೇಶ್ ಮಾಸ್ಕ್ ಧರಿಸಿ ಬಸ್ನಲ್ಲಿ ಪ್ರಯಾಣದ ವೇಳೆ ನಡೆದ ಘಟನೆ ನಂತರ ನಿರ್ವಾಹಕರನ್ನು ಅಮಾನತು ಮಾಡಿರುವ ಕ್ರಮವನ್ನು ವಿಶ್ವಕಾರ್ಮಿಕರ ಒಕ್ಕೂಟ ಗೌರವಾಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಒಕ್ಕೂಟದ ಪದಾಧಿಕಾರಿಗಳು, ಕರ್ತವ್ಯದ ವೇಳೆಯಲ್ಲಿ ಒಂದು ಪಾಳಿಯ ಚಾಲನಾ ಮತ್ತು ನಿರ್ವಾಹಕ ಸಿಬ್ಬಂದಿಗೆ ಸೀಮಿತ ಪ್ರಮಾಣದ ನಗದು ಹಣವನ್ನು ಮಾತ್ರ ಕೊಂಡೊಯ್ಯಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ನಂತರ ಸರ್ಕಾರಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಉಚಿತ ಪ್ರಯಾಣದ ಟಿಕೆಟ್ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಬಿಎಂಟಿಸಿ ನಿರ್ವಾಹಕರ ಬಳಿಯಿರುವ ಇಟಿಎಂ ಯಂತ್ರಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಲಭ್ಯವಿದ್ದು, ಅನೇಕ ಪ್ರಯಾಣಿಕರು ಆನ್ಲೈನ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುತ್ತಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನಿರ್ವಾಹಕರ ಬಳಿ ಚಿಲ್ಲರೆ ಹಣದ ಕೊರತೆ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಕಾರ್ಯಾಚರಣೆಯಲ್ಲಿ ಉಂಟಾಗುವ ತಾಂತ್ರಿಕ ಹಾಗೂ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಗಣಿಸದೆ ನಿರ್ವಾಹಕರ ವಿರುದ್ಧ ಅಮಾನತು ಕ್ರಮ ಕೈಗೊಂಡಿರುವುದು ಸಿಬ್ಬಂದಿಯ ಮನೋಬಲ ಕುಗ್ಗಿಸುವಂತಾಗಿದೆ. ಹಾಗಾಗಿ ಸಚಿವರು ಅಮಾನತನ್ನು ವಾಪಸ್ ಪಡೆಯಬೇಕು ಎಂದು ಒಕ್ಕೂಟ ತಿಳಿಸಿದೆ.
ಸಾರಿಗೆ ಇಲಾಖೆಯು ಘಟನೆಗೆ ಸಂಬಂಧಿಸಿದ ಎಲ್ಲಾ ವಾಸ್ತವಾಂಶಗಳನ್ನು ಪರಿಶೀಲಿಸಿ, ಸಿಬ್ಬಂದಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಕಾರ್ಮಿಕರ ಒಕ್ಕೂಟ ಆಗ್ರಹಿಸಿದೆ.
