ಬೆಂಗಳೂರು,ಜು.12- ನಗರದ ಕಾಮಾಕ್ಷಿಪಾಳ್ಯದ ಕೊಟ್ಟಿಗೆ ಪಾಳೆಯದಲ್ಲಿ ತ್ರಿವಳಿ ಕೊಲೆ ನಡೆದು ಇಪ್ಪತ್ನಾಲ್ಕು ಗಂಟೆಗಳಾದರೂ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಕ್ಕಪಕ್ಕದ ನಿವಾಸಿಗಳು, ಅವರ ಸಂಬಂಧಿಕರು ಮತ್ತು ಸ್ನೇಹಿತರಿಂದ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ನಾಲ್ಕು ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಶವ ಪರೀಕ್ಷೆ ನಡೆಸಿ ಅವರ ವಾರಸುದಾರರಿಗೆ ಶವಗಳನ್ನು ಹಸ್ತಾಂತರಿಸಲಾಗಿದೆ. ತಾಯಿ, ಅಜ್ಜಿ, ಸೋದರ ಮಾವನನ್ನು ಬರ್ಭರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ ಆತಹತ್ಯೆ ಮಾಡಿಕೊಂಡಿರುವ ಕಾರು ಚಾಲಕ ಪ್ರಶಾಂತ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಅವಿವಾಹಿತನಾಗಿದ್ದ ಪ್ರಶಾಂತ್ ಸುಮಾರು ಒಂದು ವರ್ಷಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಸಂಜೆ ವೇಳೆ ಹೊರಗೆ ಹೋಗಿ ಕುಡಿದು ಬಂದು ತನ್ನ ಸೋದರ ಮಾವನ ಜೊತೆ ಜಗಳ ಮಾಡತ್ತಿದ್ದ ಎಂದು ಗೊತ್ತಾಗಿದೆ.
ಪಬ್ಲಿಂಗ್ ಕೆಲಸ ಮಾಡಿಕೊಂಡು ಇವರ ಮನೆಯಲ್ಲೇ ವಾಸವಾಗಿದ್ದ ಪ್ರಶಾಂತ್ ಅವರ ಮಾವ ಸತೀಶ್ ಅವರಿಗೂ ಮದುವೆಯಾಗಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ನಿನ್ನೆ ತಂದೆ ಚಿಕ್ಕಣ್ಣ ಐರನ್ ಅಂಗಡಿಯ ಬಾಗಿಲು ತೆರೆಯಲು ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋಗಿದ್ದಾರೆ. ನಂತರ ಪ್ರಶಾಂತ್ ಮತ್ತು ಅವರ ಸೋದರ ಮಾವ ಸತೀಶ್ ನಡುವೆ ಜಗಳ ಉಂಟಾಗಿದೆ.
ಆಗ ಮಚ್ಚು ತೆಗೆದುಕೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಅದನ್ನು ತಪ್ಪಿಸಲು ಮಂಗಳಮ ಮತ್ತು ನಂಜಮ ಹೋಗಿದ್ದಾರೆ. ಆಗ ಅವರ ಮೇಲೂ ಈತ ಹಲ್ಲೆ ಮಾಡಿದ್ದಾನೆ. ಕೊನೆಗೆ ಮೂವರನ್ನು ಕೊಲೆ ಮಾಡಿದ ನಂತರ ರೂಮ್‌ಗೆ ಹೋದ ಪ್ರಶಾಂತ್ ಫ್ಯಾನ್‌ಗೆ ಸೀರೆಯಿಂದ ನೇಣು ಹಾಕಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.
ಪ್ರಶಾಂತ್ ಮತ್ತು ಸತೀಶ್ ನಡುವೆ ಯಾವ ವಿಚಾರಕ್ಕಾಗಿ ಜಗಳ ಉಂಟಾಗಿತ್ತು? ಎಂಬುದನ್ನು ಹೇಳಲು ಆ ಸಂದರ್ಭದಲ್ಲಿದ್ದ ಮನೆಯಲ್ಲಿದ್ದವರೇ ಕೊಲೆಯಾಗಿದ್ದಾರೆ. ಹಾಗಾಗಿ ತ್ರಿವಳಿಗೆ ಕಾರಣ ಇನ್ನು ನಿಗೂಢವಾಗಿದೆ.
ಇಡೀ ಕುಟುಂಬದಲ್ಲಿ ಉಳಿದಿರುವ ಏಕೈಕ ವ್ಯಕ್ತಿ ಪ್ರಶಾಂತ್ ಅವರ ತಂದೆ ಚಿಕ್ಕಣ್ಣ ಅವರನ್ನು ಕಾಮಾಕ್ಷಿ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದರೂ ಕಾರಣ ತಿಳಿದುಬಂದಿಲ್ಲ.
