Homeಮನರಂಜನೆಸಕಲ ಸರ್ಕಾರಿ ಗೌರವಗಳೊಂದಿಗೆ ಶಾರದೆಯ ವರಪುತ್ರಿ `ಜಾನಕಿ' ಪಂಚಭೂತಗಳಲ್ಲಿ ಲೀನ

ಸಕಲ ಸರ್ಕಾರಿ ಗೌರವಗಳೊಂದಿಗೆ ಶಾರದೆಯ ವರಪುತ್ರಿ `ಜಾನಕಿ’ ಪಂಚಭೂತಗಳಲ್ಲಿ ಲೀನ

Veteran playback singer S Janaki dies at age 88

ಬೆಂಗಳೂರು,ಜು.12- ಭಾರತೀಯ ಸಂಗೀತ ಲೋಕದ ದೈತ್ಯ ಪ್ರತಿಭೆ, ಗಾನಕೋಗಿಲೆ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಎಸ್‌‍.ಜಾನಕಿ ಅವರ ಇಚ್ಛೆಯಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಮ ಸುಮಧುರ ಧ್ವನಿಯ ಮೂಲಕ ದಶಕಗಳ ಕಾಲ ಇಡೀ ದೇಶವನ್ನು ಮಂತ್ರಮುಗ್ಧವನ್ನಾಗಿಸಿದ್ದ ಎಸ್‌‍.ಜಾನಕಿ ಅವರಿಗೆ ಮೈಸೂರಿನೊಂದಿಗೆ ಅಪಾರ ಒಡನಾಟವಿತ್ತು. ತಮ ಅಂತಿಮ ಸಂಸ್ಕಾರವು ಮೈಸೂರಿನಲ್ಲೇ ನೆರವೇರಬೇಕು ಎಂಬುದು ಅವರ ಕೊನೆಯ ಇಚ್ಛೆಯಾಗಿತ್ತು.ಗಾಯಕಿಯ ಈ ಅಂತಿಮ ಬಯಕೆಯನ್ನು ಗೌರವಿಸಿ ಅವರ ಕುಟುಂಬಸ್ಥರು ಹಾಗೂ ಕರ್ನಾಟಕ ಸರ್ಕಾರ, ಮೈಸೂರು ತಾಲ್ಲೂಕಿನ ಹೆಚ್‌.ಡಿ.ಕೋಟೆ ರಸ್ತೆಯಲ್ಲಿರುವ ಕಣಿಯನಹುಂಡಿ ಗ್ರಾಮದ ನವೀನ್‌ ಫಾರ್ಮ್‌ ಹೌಸ್‌‍ (ಜಮೀನು)ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೇರವೇರಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸೂಚನೆಯಂತೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.ರಾಜ್ಯ ಸರ್ಕಾರ ಎಸ್‌‍.ಜಾನಕಿ ಅವರನ್ನು ರಾಜ್ಯದ ಸಾಂಸ್ಕೃತಿಕ ಆಸ್ತಿ ಎಂದು ಘೋಷಿಸಿ ಪೂರ್ಣ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಆದೇಶಿಸಿತ್ತು. ಅದರಂತೆ ಬೆಳಗ್ಗೆಯಿಂದಲೇ ಕನಿಯನಹುಂಡಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದವು.

ಪಾರ್ಥಿವ ಶರೀರ ತಲುಪಿದ ಕೂಡಲೇ ಪೊಲೀಸ್‌‍ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಕುಶಾಲತೋಪು ಹಾರಿಸಿದರು. ರಾಷ್ಟ್ರಧ್ವಜದಲ್ಲಿ ಸುತ್ತಿದ್ದ ಪಾರ್ಥಿವ ಶರೀರಕ್ಕೆ ಸಚಿವರು ಹಾಗೂ ಗಣ್ಯರು ಪುಷ್ಪಚಕ್ರ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ವೇದ ಸಂಸ್ಕಾರದೊಂದಿಗೆ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ನೆರವೇರಿತು. ಜಾನಕಿಯವರ ಪುತ್ರ ಕೆಲ ವರ್ಷಗಳ ಹಿಂದೆಯೇ ನಿಧನರಾಗಿದ್ದ ಹಿನ್ನೆಲೆಯಲ್ಲಿ ಮೊಮಗಳಾದ ಅಪ್ಸರಾ ಅವರು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಹಿಂದೂ ಧರ್ಮ ಮತ್ತು ಸಂಪ್ರದಾಯದಂತೆ ತೆಲುಗು ಬ್ರಾಹಣ ವಿಧಿವಿಧಾನಗಳ ಅನ್ವಯ ಅಂತ್ಯಕ್ರಿಯೆ ನಡೆಯಿತು.

ಸಂಗೀತ ಲೋಕದಲ್ಲಿ ತಮದೇ ಆದ ಅಳಿಸಲಾಗದ ಹೆಜ್ಜೆಗುರುತು ಮೂಡಿಸಿ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಸ್ವರ ಸಾಮ್ರಾಜ್ಞೆ ಇನ್ನು ನೆನೆಪು ಮಾತ್ರ! ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹತ್ತಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಜೀವ ತುಂಬಿದ್ದ ಮಹಾನ್‌ ಚೇತನವೊಂದರ ಯುಗ ಮುಕ್ತಾಯಗೊಂಡಿದ್ದು, ಇಡೀ ಕಲಾ ಲೋಕ ಕಂಬನಿ ಮಿಡಿಯಿತು.

ಗಣ್ಯರ ದಂಡು, ಅಭಿಮಾನಿಗಳ ಸಾಗರ
ಅಂತ್ಯಕ್ರಿಯೆ ಸಮಾರಂಭವು ರಾಜಕೀಯ, ಸಾಂಸ್ಕೃತಿಕ ಹಾಗೂ ಚಿತ್ರರಂಗದ ಗಣ್ಯರ ಸಮಿಲನಕ್ಕೆ ಸಾಕ್ಷಿಯಾಯಿತು. ಹಿರಿಯ ಸಚಿವರು, ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಸಂಸದರು ಸೇರಿದಂತೆ ರಾಜ್ಯದ ಪ್ರಮುಖ ಜನಪ್ರತಿನಿಧಿಗಳು ಭಾಗವಹಿಸಿ ಎಸ್‌‍.ಜಾನಕಿ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.

ಇದರೊಂದಿಗೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಮೈಸೂರು ನಗರ ಪೊಲೀಸ್‌‍ ಆಯುಕ್ತೆ ಸೀಮಾ ಲಾಟ್ಕರ್‌ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡವೂ ಉಪಸ್ಥಿತವಿತ್ತು.
ಚಿತ್ರರಂಗದಿಂದ ಸಂಗೀತ ನಿರ್ದೇಶಕರು, ಗಾಯಕರು, ನಟ-ನಟಿಯರು ಆಗಮಿಸಿ ಜಾನಕಮನಿಗೆ ಕಣ್ಣೀರಿನ ಮೂಲಕ ವಿದಾಯ ಹೇಳಿದರು.

ಬೆಳಗ್ಗೆಯಿಂದಲೇ ಸಾವಿರಾರು ಅಭಿಮಾನಿಗಳು ಕನಿಯನಹುಂಡಿಗೆ ಆಗಮಿಸಿದ್ದರು. ಎಲ್ಲಿದ್ದೀರಿ ಅಮ ನಿಮ ಕಂಠ ಮತ್ತೆ ಕೇಳಲು ಸಿಗುವುದಿಲ್ಲವೇ ಎಂದು ಅಳುತ್ತಾ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.ಕಳೆದ ಎರಡು ವರ್ಷಗಳಿಂದ ಕೀಲು ನೋವು ಮತ್ತು ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ಎಸ್‌‍.ಜಾನಕಿ ಅವರು ಮೈಸೂರಿನ ಬೋಗಾದಿಯ ಎಸ್‌‍ಬಿಎಂ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಅವರನ್ನು ನವೀನ್‌ ಮತ್ತು ಪವನ್‌ ಎಂಬುವವರು ಆರೈಕೆ ಮಾಡುತ್ತಿದ್ದರು.

ವಾರದ ಹಿಂದೆಯಷ್ಟೇ ಮಂಗಳೂರಿನಲ್ಲಿದ್ದ ತಮ ಅಕ್ಕನ ಮನೆಗೆ ಭೇಟಿ ನೀಡಿ ವಾಪಸ್‌‍ ಆಗಿದ್ದ ಜಾನಕಿ ಅವರಿಗೆ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹಠಾತ್‌ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ 7.30ಕ್ಕೆ ಕೊನೆಯುಸಿರೆಳೆದರು. ನಿಧನದ ಸಮಯದಲ್ಲಿ ಅವರ ಸೊಸೆ ಉಮಾ ಹಾಗೂ ಮೊಮಗಳು ಅಪ್ಸರಾ ಜೊತೆಯಲ್ಲಿದ್ದರು.

ಭಾರತೀಯ ಚಿತ್ರಸಂಗೀತದ ದೈತ್ಯ ಶಕ್ತಿಗೆ ನಮನ
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಹೆಗ್ಗಳಿಕೆ ಜಾನಕಿ ಅವರದ್ದಾಗಿದೆ. ಕನ್ನಡದಲ್ಲಂತೂ ಸಾವಿರಾರು ಸಾರ್ವಕಾಲಿಕ ಸೂಪರ್‌ ಹಿಟ್‌ ಭಾವಗೀತೆಗಳು, ಮೆಲೋಡಿ, ಶಾಸ್ತ್ರೀಯ, ಅರೆ-ಶಾಸ್ತ್ರೀಯ, ಪ್ರೇಮಗೀತೆಗಳು ಹಾಗೂ ಪಾಶ್ಚಾತ್ಯ ಶೈಲಿಯ ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ. ಸದ್ಯ ಅವರು ಭೌತಿಕವಾಗಿ ನಮನ್ನು ಅಗಲಿದ್ದರೂ, ಅವರ ಅಪ್ರತಿಮ ಕಂಠ ಮತ್ತು ಹಾಡುಗಳು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಜೀವಂತವಾಗಿರಲಿವೆ.

RELATED ARTICLES

Latest News