ಬೆಂಗಳೂರು,ಮಾ.28- ಹಿಂದಿ ಹೇರಿಕೆ ವಿರೋಧಿಸಿ ಹೋರಾಟ ನಡೆಸಿದ ಕನ್ನಡ ಹೋರಾಟಗಾರರಿಗೆ ಕೊನೆಗೂ ಸರ್ಕಾರ ಸ್ಪಂದಿಸಿದ್ದಕ್ಕೆ ಅಭಿನಂದನೆಗಳು ಎಂದು ಕನ್ನಡ ಪರ ಹೋರಾಟಗಾರ ಸಾ.ರಾ.ಗೋವಿಂದು ತಿಳಿಸಿದ್ದಾರೆ.
ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಕೇಂದ್ರ ಸರ್ಕಾರದ ವಿರುದ್ಧ ಹಲವಾರು ವರ್ಷಗಳಿಂದ ಕನ್ನಡಪರ ಹೋರಾಟಗಾರರು ವಿರೋಧಿಸಿ ಹೋರಾಟ ನಡೆಸಿದ್ದರು. ಇದಕ್ಕೆ ರಾಜ್ಯಸರ್ಕಾರಕ್ಕೆ ಸ್ಪಂದಿಸಿ ತೃತೀಯ ಭಾಷೆ ಹಿಂದಿಯನ್ನು ಮೊಟಕುಗೊಳಿಸಿದೆ. ಇದು ಸಮಸ್ತ ಕನ್ನಡಿಗರಿಗೆ ಸಂದ ಜಯ ಎಂದು ಅವರು ಹೇಳಿದ್ದಾರೆ.
ನಾವು ಸರ್ಕಾರಕ್ಕೆ ಈ ಬಗ್ಗೆ ಸಾಕಷ್ಟು ಬಾರಿ ಮನವರಿಕೆ ಮಾಡಿ ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು ಎಂದು ಹೋರಾಟ ನಡೆಸಿದ್ದೆವು. ಇದಲ್ಲದೆ ನಮ ಕನ್ನಡದ ಶಾಸ್ತ್ರೀಯ ಸ್ಥಾನಮಾನವನ್ನು ಎತ್ತಿಹಿಡಿಯುವಂತಹ ಕಾರ್ಯ ನಡೆಸಬೇಕು ಮತ್ತು ಪರಭಾಷಿಗರ ದಬ್ಬಾಳಿಕೆ ಹಾಗೂ ಹಿಂದಿ ಹೇರಿಕೆಯನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದ್ದೆವು.
ಇದಕ್ಕೆ ಈಗ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಸಮತಿಸಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೇ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದು ನಮಗೆಲ್ಲರಿಗೂ ಅತ್ಯಂತ ಖುಷಿ ತಂದಿದೆ. ನಾವು ಸರ್ಕಾರಕ್ಕೆ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಎಲ್ಲಾ ಕನ್ನಡಪರ ಸಂಘಟನೆಗಳು, ಚಳವಳಿ ನಾಯಕರು ಹಿಂದಿ ದಬ್ಬಾಳಿಕೆ ವಿರುದ್ಧ ದನಿ ಎತ್ತಿದ್ದರು. ಇದಕ್ಕೆ ಕೊನೆಗೂ ಅಂತ್ಯ ಕಂಡಿದೆ. ಕನ್ನಡಪರ ಸಂಘಟನೆಗಳಿಗೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕನ್ನಡವನ್ನು ಕಡೆಗಣಿಸುವ ಶಕ್ತಿಗಳ ವಿರುದ್ಧ ಹೋರಾಟ ನಿಶ್ಚಿತ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಇಡೀ ಕನ್ನಡಿಗರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದರೆ ಶಾಸಕ ಸುರೇಶ್‌ಕುಮಾರ್‌ರವರು ವಿರೋಧಿಸಿರುವುದು ಖಂಡನೀಯ, ಇದು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ, ಅವರು ಶಾಸಕರಾಗಿ ಯಾರಿಂದ ಆರಿಸಿ ಬಂದಿದ್ದಾರೆ? ಅವರು ಕನ್ನಡಿಗರೋ ಅಥವಾ ಪರಭಾಷಿಗರೋ ಎಂದು ಖಾರವಾಗಿ ಸಾ.ರಾ.ಗೋವಿಂದು ಕಿಡಿಕಾರಿದ್ದಾರೆ.
ಅವರು ನಗರ ಪಾಲಿಕೆ ಸದಸ್ಯರಾದಾಗಿನಿಂದಲೂ ಕನ್ನಡಿಗರು ಅವರ ಕೈ ಹಿಡಿದಿದ್ದಾರೆ. ಈಗ ಅವರು ಶಾಸಕರಾಗಿದ್ದು ಕನ್ನಡ ವಿರೋಧಿ ಉದ್ಧಟತನ ತೋರಿದ್ದಾರೆ. ಈ ನಡವಳಿಕೆ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕೂಡಲೇ ಪರಭಾಷಿಗರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ ಕನ್ನಡಿಗರ ಪರ ನಿಲ್ಲಬೇಕು. ನಮ ಸ್ವಾಭಿಮಾನವನ್ನು ಕೆಣಕಿದರೆ ಕನ್ನಡಿಗರು ನಿಮ ವಿರುದ್ಧ ಉಗ್ರ ಹೋರಾಟ ನಡೆಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಪರವಾಗಿ ಸರ್ಕಾರ ತೃತೀಯ ಭಾಷೆ ಹಿಂದಿಯನ್ನು ಮೊಟಕುಗೊಳಿಸಿದ್ದಕ್ಕೆ ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಕೃತಜ್ಞತೆ ಸಲ್ಲಿಸಿದ್ದಾರೆ.ನಾವು ಹಲವು ಬಾರಿ ಹಿಂದಿ ದಬ್ಬಾಳಿಕೆಯನ್ನು ತಡೆಯಲು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸಿರುವುದು ಕನ್ನಡಿಗರಿಗೆ ಜಯ ಸಿಕ್ಕದಂತಾಗಿದೆ ಎಂದು ಹೇಳಿದ್ದಾರೆ.
