ಬೆಂಗಳೂರು,ಏ.29- ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಸಮೀಪಿ ಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಬಣ ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸಿ, ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇತ್ತ ಡಿ.ಕೆ.ಶಿವಕುಮಾರ್ ಬಣ ಶತಾಯಗತಾಯ ಅಧಿಕಾರ ಗಿಟ್ಟಿಸಲೇ ಬೇಕು ಎಂದು ಜಿದ್ದಿಗೆ ಬಿದ್ದು ಕಾರ್ಯತಂತ್ರಗಳನ್ನು ನಡೆಸುತ್ತಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮೇಲ್ನೋಟಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರ ಆತೀಯರಾಗಿರುವಂತೆ ಕಂಡು ಬರುತ್ತಿದೆ. ಆದರೆ ಒಳಗೊಳಗೆ ತಮ ಕಾರ್ಯಸಾಧನೆಗಾಗಿ ನಾನಾ ರೀತಿಯ ತಂತ್ರಗಾರಿ ಕೆಗಳನ್ನು ನಡೆಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರರಾದ ಮಾಜಿ ಸಂಸದ ಡಿ.ಕೆ.ಸುರೇಶ್ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಬಣದ ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ.ಮಹದೇವಪ್ಪ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ ರಾಜ್ಯ ನಾಯಕರು ಸಿದ್ದರಾಮಯ್ಯ ಅವರ ಪರವಾಗಿ ಬಲವಾದ ಪ್ರತಿಪಾದನೆಗಳನ್ನು ಮಂಡಿಸಿದ್ದಾರೆ. ಎನ್ನಲಾಗುತ್ತಿದೆ.ಸಿದ್ದರಾಮಯ್ಯ ಅವರದು ಕರ್ನಾಟಕದಲ್ಲಿ ಗಟ್ಟಿ ನಾಯಕತ್ವ. ಅವರನ್ನು ಬದಲಾವಣೆ ಮಾಡಿದರೆ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಲಿದೆ ಎಂಬ ಎಚ್ಚರಿಕೆಯನ್ನು ಸತೀಶ್ ಜಾರಕಿಹೊಳಿ ಮತ್ತು ಎಚ್.ಸಿ ಮಹದೇವಪ್ಪ ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲೇಬೇಕೆಂಬ ಅನಿವಾರ್ಯತೆ ಎದುರಾದರೆ, ಶಾಸಕರ ಅಭಿಪ್ರಾಯ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.ಏಕಾಏಕಿ ಕುರ್ಚಿ ಬಿಡುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದರೆ, ಅದು ಆಡಳಿತದ ಮೇಲೂ ಪರಿಣಾಮ ಬೀರಲಿದೆ. ಸಾರ್ವಜನಿಕವಾಗಿಯೂ ತಪ್ಪು ಸಂದೇಶ ರವಾನೆಯಾಗಿ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.
ಹೈಕಮಾಂಡ್‌ನ ನಾಯಕರು ಕರ್ನಾಟಕ ರಾಜಕಾರಣದ ಬಗ್ಗೆ ತಮ ಬಳಿ ಸ್ಪಷ್ಟ ಮಾಹಿತಿ ಇದೆ. ಯಾರ ಶಿಫಾರಸುಗಳು, ಸಲಹೆಗಳು ಅಗತ್ಯ ಇಲ್ಲ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಸಚಿವರು ದೆಹಲಿಗೆ ಬಂದರೆ ತಮ ಇಲಾಖೆಗಳ ಅಭಿವೃದ್ಧಿ ಹಾಗೂ ಸಾಧನೆಗಳ ಬಗ್ಗೆ ವರದಿ ಸಲ್ಲಿಸಬೇಕು. ಅದನ್ನು ಬಿಟ್ಟು ಯಾರಾ ಪರವಾಗಿಯೂ ಲಾಬಿ ನಡೆಸಲು ಬರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸರಣೆ ಸಭೆಗಳು:
ದೆಹಲಿಯಲ್ಲಿ ಬೀಡುಬಿಟ್ಟಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಕರ್ನಾಟಕ ಭವನದಲ್ಲಿ ರಾಜ್ಯದ ಪ್ರಮುಖ ನಾಯಕರಾದ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಹಾಗೂ ಶಾಸಕ ಹಂಪನಗೌಡ ಬಾದರ್ಲಿ ಅವರ ಜೊತೆ ಉಪಾಹಾರ ಕೂಟ ನಡೆಸಿದ್ದಾರೆ.ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಈ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಕುತೂಹಲ ಹೆಚ್ಚಿಸಿದೆ.
ಸಿದ್ದರಾಮಯ್ಯ ಅವರು ಕುರ್ಚಿ ಬಿಡಲಿ, ಬಿಡದೇ ಇರಲಿ ಮೇ 15ರೊಳಗೆ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಸಿಹಿ ಸುದ್ದಿ ನೀಡಲಿದೆ ಎಂದು ಬೆಂಬಲಿಗರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾಯಕತ್ವ ಬದಲಾವಣೆಯಾಗುವುದು ಶತಸಿದ್ಧ. ಮೂರು ವರ್ಷ ನಿರಾಯಸವಾಗಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯಅವರು ಕೊನೆಯ ಎರಡು ವರ್ಷಗಳಿಗೆ ಅಧಿಕಾರ ತ್ಯಾಗ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಶಾಸಕರ ಯಾತ್ರೆ:
ಈ ನಡುವೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ಶಾಸಕರ ನಿಯೋಗ ದೆಹಲಿಯತ್ತ ಮುಖ ಮಾಡಿದೆ. ಎರಡೂ ಬಣಗಳಿಂದಲೂ ಬೇರೆ ಬೇರೆ ಶಾಸಕರು ದೆಹಲಿಗೆ ತೆರಳುತ್ತಿದ್ದು, ತಮದೇ ಆದ ರೀತಿಯಲ್ಲಿ ಲಾಬಿ ನಡೆಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರ ಬಣದವರು ನಾಯಕತ್ವ ಬದಲಾವಣೆಯಾಗಬಾರದು ಎಂದು ಪ್ರತಿಪಾದಿಸಿದರೆ, ಇತ್ತ ಡಿ.ಕೆ.ಶಿಕುಮಾರ್ ಬಣದ ಶಾಸಕರು, ಚುನಾವಣೆಯ ಕೆಲಸಕ್ಕಾಗಿ ಕೂಲಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಹೈಕಮಾಂಡ್‌ಗೆ ಇದು ಇಕ್ಕಟ್ಟಿನ ಪರಿಸ್ಥಿಯನ್ನು ನಿರ್ಮಿಸಿದೆ.
ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಶಾಸಕರು ದೆಹಲಿಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆಯಾದರೂ ಆಂತರಿಕವಾಗಿ ಆಯಾ ಗುಂಪುಗಳ ಪ್ರಭಾವಿಗಳು ತಮ ಬೆಂಬಲಿಗರನ್ನು ಹುರಿದುಂಬಿಸಿ ದೆಹಲಿಗೆ ಕಳುಹಿಸುತ್ತಿದ್ದಾರೆ.
ಸಿದ್ದರಾಮಯ್ಯ ಬಣಕ್ಕೆ ಸಂಪುಟ ಪುನರ್ ರಚನೆಯಾಗಬೇಕು ಎಂದಿದ್ದರೆ, ಡಿ.ಕೆ.ಶಿವಕುಮಾರ್ ಬಣಕ್ಕೆ ನಾಯಕತ್ವ ಬದಲಾವಣೆಯಾಗಬೇಕಿದೆ. ಈ ವಿಭಿನ್ನ ಬೇಡಿಕೆಗಳು ದಿನೇ ದಿನೇ ರಾಜಕೀಯ ಪರಿಸ್ಥಿತಿಯನ್ನು ಹದಗೆಡಿಸುತ್ತಿವೆ. ಮೇ ಮೊದಲವಾರದಲ್ಲೇ ಸಂಪುಟ ಪುನರಾರಚನೆಗೆ ಗ್ರೀನ್ ಸಿಗ್ನಲ್ ನಿರೀಕ್ಷೆಯಲ್ಲಿದ್ದವರಿಗೆ ಡಿ.ಕೆ.ಶಿವಕುಮಾರ್ ಅವರ ಬಿಗಿಪಟ್ಟು ಕಂಗೆಡುವಂತೆ ಮಾಡಿದೆ.
