ಬೆಂಗಳೂರು, ಮೇ. 1- ವಾಣಿಜ್ಯ ಸಿಲಿಂಡರ್ಗಳ ಬೆಲೆ ದಿಢೀರ್ ಏರಿಕೆಯಾಗುತ್ತಿದ್ದಂತೆ ಆಟೋ ಎಲ್ಪಿಜಿ ದರಗಳು ಹೆಚ್ಚಳವಾಗಿದ್ದು, ಆಟೋ ಚಾಲಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದಿನಿಂದ ಆಟೋ ಎಲ್ಪಿಜಿ ದರದಲ್ಲಿ 5.73 ರೂ. ಏರಿಕೆ ಆಗಿದ್ದು, ಚಾಲಕರ ಜೇಬಿಗೆ ಕತ್ತರಿ ಬಿದ್ದಿದೆ.
ನಿನ್ನೆವರೆಗೆ ಲೀಟರ್ಗೆ 89.35 ರೂಪಾಯಿ ಇದ್ದ ಆಟೋ ಎಲ್ಪಿಜಿ ದರ, ಇಂದಿನಿಂದ 95.08 ರೂಪಾಯಿಗೆ ಏರಿಕೆಯಾಗಿದೆ. ಈ ದರ ಏರಿಕೆ ಸರ್ಕಾರದ ನಿಯಂತ್ರಣದಲ್ಲಿರುವ ಆಟೋ ಎಲ್ಪಿಜಿ ಬಂಕ್ಗಳಲ್ಲಿ ಅನ್ವಯವಾಗಲಿದ್ದು ಚಾಲಕರು ಹೆಚ್ಚಿನ ವೆಚ್ಚ ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಖಾಸಗಿ ಎಲ್ಪಿಜಿ ಬಂಕ್ಗಳಲ್ಲಿ ದರ ಏರಿಕೆ ಒಂದೇ ರೀತಿಯಲ್ಲಿ ಇಲ್ಲದೆ, ಬಂಕ್ಗಿಂತ ಬಂಕ್ಗೆ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಚಾಲಕರಲ್ಲಿ ಗೊಂದಲವೂ ಹೆಚ್ಚಾಗಿದೆ. ಇಂಧನ ದರ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಆಟೋ ಚಾಲಕರು, ಆಟೋ ದರ ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ಒಂದು ವೇಳೆ ಆಟೋ ಪ್ರಯಾಣ ದರ ಏರಿಕೆಯಾದರೆ ಅದರ ಪರಿಣಾಮ ಪ್ರಯಾಣಿಕರ ಮೇಲೂ ಬೀಳುವ ಸಾಧ್ಯತೆ ಇದೆ.ಎಲ್ಪಿಜಿ ದರ ಏರಿಕೆ ನಗರ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಲಕ್ಷಣಗಳು ಕಾಣಿಸುತ್ತಿವೆ.
