Thursday, April 16, 2026
Homeರಾಜ್ಯರಂಗೇರಿದ ಉಪಚುನಾವಣೆ ಅಖಾಡ : ಕರ್ನಾಟಕಕ್ಕೆ ಅಮಿತ್‌ ಶಾ ಒಂದು ದಿನದ ಭೇಟಿ

ರಂಗೇರಿದ ಉಪಚುನಾವಣೆ ಅಖಾಡ : ಕರ್ನಾಟಕಕ್ಕೆ ಅಮಿತ್‌ ಶಾ ಒಂದು ದಿನದ ಭೇಟಿ

By-elections: Karnataka Amit Shah on a one-day visit

ಬೆಂಗಳೂರು,ಏ.3- ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ.ಬಿಜೆಪಿ ಮತ್ತು ಕಾಂಗ್ರೆಸ್‌‍ ನಾಯಕರು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚುನಾವಣೆಯ ಬಿಸಿಯ ನಡುವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಂದು ದಿನದ ಭೇಟಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಆದಿಚುಂಚನಗಿರಿ ಮಠದ ಬಿಜಿಎಸ್‌‍ ಮೆಡಿಕಲ್‌ ಕಾಲೇಜಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತ್‌ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು ಉಪಚುನಾವಣೆಯ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಅವರನ್ನು ಸ್ವಾಗತಿಸಲು ಭರ್ಜರಿ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಮತ್ತು ಎಚ್‌.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಇದೇ ಏಪ್ರಿಲ್‌ 9ರಂದು ನಡೆಯಲಿದೆ. ಬಹಿರಂಗ ಪ್ರಚಾರದ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಅಮಿತ್‌ ಶಾ ಅವರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ದೆಹಲಿಯಿಂದ ಆಗಮಿಸಲಿರುವ ಶಾ ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ತಂಗಲಿದ್ದಾರೆ. ಶನಿವಾರ ಬಿಜಿಎಸ್‌‍ ಮೆಡಿಕಲ್‌ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್‌‍ ಆಗಲಿದ್ದಾರೆ.

ಬಿಜೆಪಿ ನಾಯಕರು ಇದ್ದಬದ್ದ ಭಿನ್ನಮತವನ್ನೆಲ್ಲಾ ಬದಿಗಿಟ್ಟು, ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಯಡಿಯೂರಪ್ಪ ಮತ್ತು ಜಿಎಂ ಸಿದ್ದೇಶ್ವರ, ಜೊತೆಯಾಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು. ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ರಾಜ್ಯ ಮಟ್ಟದ ಎಲ್ಲಾ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊನೆಯ ಕ್ಷಣದ ರಣತಂತ್ರವನ್ನು ಹೆಣೆಯಲು ಅಮಿತ್‌ ಶಾ ತಮ ಭೇಟಿಯ ವೇಳೆ ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ.

ರಾಜ್ಯ ಬಿಜೆಪಿ ನಾಯಕರಿಂದ ಅಮಿತ್‌ ಶಾಗೆ ಮಾಹಿತಿ :
ಅಮಿತ್‌ ಶಾ ತಮ್ಮ ಭೇಟಿಯ ವೇಳೆ ರಾಜ್ಯದ ಯಾವ ಯಾವ ಬಿಜೆಪಿ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅವರನ್ನು ಸ್ವಾಗತಿಸಲು ರಾಜ್ಯ ಕಮಲ ಪಡೆಯಂತೂ ಸಜ್ಜಾಗಿದೆ.

ಎರಡು ಕ್ಷೇತ್ರಗಳ ಉಪಚುನಾವಣೆಯ ಮಾಹಿತಿಯನ್ನು ಅಮಿತ್‌ ಶಾ ಪಡೆದುಕೊಳ್ಳಲಿದ್ದಾರೆ. ಮುಂಬರುವ ಬೆಂಗಳೂರು ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯ ತಯಾರಿಯ ಬಗ್ಗೆಯೂ ಅಮಿತ್‌ ಶಾ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶನಿವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಗರೂರಿನಲ್ಲಿನ ಬಿಜಿಎಸ್‌‍ ಮೆಡಿಕಲ್‌ ಕಾಲೇಜು ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೊಂಡಿದೆ. ಆದಿಚುಂಚನಗಿರಿ ಮಠದ ವಿಶೇಷ ಆಹ್ವಾನದ ಮೇರೆಗೆ ಅಮಿತ್‌ ಶಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಯಾರನ್ನೆಲ್ಲಾ ಆಹ್ವಾನಿಸಲಾಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ರಾಜ್ಯ ಸರ್ಕಾರದ ಕಡೆಯಿಂದಲೂ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

RELATED ARTICLES

Latest News