ಬ್ಯಾಂಕಾಕ್, ಆ.7- ಥೈಲ್ಯಾಂಡ್ನ ರಾಜಧಾನಿ ಬ್ಯಾಂಕಾಕ್ನಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಸಹಪಾಠಿಗಳು ಹಾಗೂ ಶಿಕ್ಷಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಓರ್ವ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 15 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನಂತರ ದಾಳಿ ನಡೆಸಿದ ವಿದ್ಯಾರ್ಥಿಯೂ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ.
ಬ್ಯಾಂಕಾಕ್ ಸಮೀಪದ ನೊಂಥಬುರಿಯ ಬ್ಯಾಂಗ್ ಕ್ರುವಾಯಿ ಜಿಲ್ಲೆಯಲ್ಲಿರುವ ದೇಬ್ಸಿರಿನ್ ನೊಂಥಬುರಿ ಶಾಲೆಯಲ್ಲಿ ಇಂದು ಬೆಳಗ್ಗೆ ತರಗತಿಗಳು ಆರಂಭವಾಗುವ ವೇಳೆಗೆ ಈ ಭೀಕರ ಘಟನೆ ನಡೆದಿದೆ.
9ನೇ ತರಗತಿಯ ವಿದ್ಯಾರ್ಥಿ ಬಂದೂಕಿನೊಂದಿಗೆ ಶಾಲೆಗೆ ಆಗಮಿಸಿ ದಿಢೀರನೆ ಗುಂಡಿನ ಸುರಿಮಳೆ ಗೈದಿದ್ದಾನೆ. ಗುಂಡೇಟಿನಿಂದ ಶಿಕ್ಷಕರೊಬ್ಬರು ಕೊನೆಯುಸಿರೆಳೆದಿದ್ದು, ಗಾಯಗೊಂಡ 15 ಜನರಲ್ಲಿ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದೆ.
ಫ್ಲೈ ಬ್ಯಾಂಗ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣವೇ ಶಾಲಾ ಕ್ಯಾಂಪಸ್ಗೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಮಾಧ್ಯಮಗಳು ಘಟನೆಯ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೇರ ಪ್ರಸಾರ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕಿರಿಯ ವಯಸ್ಸಿನ ವಿದ್ಯಾರ್ಥಿ ಬಂದೂಕನ್ನು ಹೇಗೆ ಪಡೆದುಕೊಂಡ ಮತ್ತು ದಾಳಿ ನಡೆಸಲು ಇದ್ದ ಮಾನಸಿಕ ಅಥವಾ ವೈಯಕ್ತಿಕ ಉದ್ದೇಶವೇನು ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗ್ನೇಯ ಏಷ್ಯಾದ ದೇಶಗಳ ಪೈಕಿ ಥೈಲ್ಯಾಂಡ್ನಲ್ಲಿ ಸಾರ್ವಜನಿಕರಲ್ಲಿ ಬಂದೂಕು ಹೊಂದುವ ಪ್ರಮಾಣ ಹೆಚ್ಚಾಗಿದೆ. ಕಾನೂನುಬದ್ಧ ಹಾಗೂ ಅಕ್ರಮ ಬಂದೂಕುಗಳು ಸುಲಭವಾಗಿ ಸಿಗುವುದೇ ಇಂತಹ ದುರಂತಗಳಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಕಳೆದ 2022 ರಲ್ಲಿ ಥೈಲ್ಯಾಂಡ್ನ ಮಕ್ಕಳ ಆರೈಕೆ ಕೇಂದ್ರವೊಂದರಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ನಡೆಸಿದ ಮಾರಣಾಂತಿಕ ದಾಳಿಯಲ್ಲಿ 24ಮಕ್ಕಳು ಸೇರಿದಂತೆ 36 ಜನರು ಮೃತಪಟ್ಟಿದ್ದರು.
