ಬೆಂಗಳೂರು, ಆ.7 -ಹೊಸ ಮೆಟ್ರೋ ರೈಲುಗಳ ಪರೀಕ್ಷೆ ಹಾಗೂ ತಪಾಸಣೆ ಹಿನ್ನೆಲೆಯಲ್ಲಿ ಇಂದು ರಾತ್ರಿ ಗ್ರೀನ್‌ಲೈನ್ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಸಿಆರ್‌ಆರ್‌ಸಿ ಸಂಸ್ಥೆ ಪೂರೈಸಿರುವ ಹೊಸ ರೈಲುಗಳ ತಪಾಸಣೆಗಾಗಿ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಗ್ರೀನ್‌ಲೈನ್‌ನಲ್ಲಿ ವಿಶೇಷ ಪರೀಕ್ಷಾ ಸಂಚಾರ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದ.
ಯಶವಂತಪುರದಿಂದ ಮಾದಾವರದವರೆಗೆ ಅಪ್‌ಲೈನ್‌ನಲ್ಲಿ ರಾತ್ರಿ 10.30ರಿಂದ ಆದಾಯ ಸೇವೆ ಮುಕ್ತಾಯವಾಗುವವರೆಗೆ ಸಾಮಾನ್ಯವಾಗಿ 10 ನಿಮಿಷಗಳ ಅಂತರದಲ್ಲಿ ಸಂಚರಿಸುವ ರೈಲುಗಳು ಇನ್ನು ಮುಂದೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಆದರೆ, ಮಾದಾವರದಿಂದ ಸಿಲ್‌್ಕ ಇನ್‌ಸ್ಟಿಟ್ಯೂಟ್‌ವರೆಗಿನ ಡೌನ್‌ಲೈನ್ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮಾರ್ಗದಲ್ಲಿ ರೈಲುಗಳ ಸಂಚಾರ ಎಂದಿನ ವೇಳಾಪಟ್ಟಿಯಂತೆ ಮುಂದುವರಿಯಲಿದೆ.
ರಾತ್ರಿ ವೇಳೆಯಲ್ಲಿ ಗ್ರೀನ್‌ಲೈನ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ತಾತ್ಕಾಲಿಕ ಬದಲಾವಣೆಯಿಂದ ಪ್ರಯಾಣಿಕರಿಗೆ ಉಂಟಾಗಬಹುದಾದ ಅನಾನುಕೂಲತೆಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದ್ದು, ಪರೀಕ್ಷಾ ಕಾರ್ಯಾಚರಣೆಗೆ ಪ್ರಯಾಣಿಕರು ಸಹಕರಿಸುವಂತೆ ಕೋರಿದೆ.
