ವಾಷಿಂಗ್ಟನ್, ಮೇ.2- ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರೂ ಕೆಲಸ ಸಿಗದೆ ಇದ್ದ ಪರಿಣಾಮ ಖಿನ್ನತೆಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿಯೊಬ್ಬ ದೂರದ ಅಮೆರಿಕದಲ್ಲಿ ಆತಹತ್ಯೆಗೆ ಶರಣಾಗಿದ್ದಾನೆ. ದೊಡ್ಡ ಕನಸು ಹೊತ್ತು ಅಮೆರಿಕಕ್ಕೆ ಓದಲು ಹೋಗಿದ್ದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ ಚಂದು ಮೃತ ಯುವಕ.
ಚಂದು ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಕಳೆದ ಹಲವು ವಾರಗಳಿಂದ ಉದ್ಯೋಗ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ. ಕರ್ನೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಮತ್ತು ಕುಟುಂಬವು ಹೊಂದಿದ್ದ ಸಾಲದ ಹೊರೆಯು ಚಂದು ಅವರ ಮೇಲೆ ತೀವ್ರ ಭಾವನಾತ್ಮಕ ಒತ್ತಡ ಹೇರಿತ್ತು.
ಈ ನಿರಂತರ ಒತ್ತಡ ತಾಳಲಾರದೆ ಅವರು ಅಮೆರಿಕದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಿಕಾಗೋ ಪೊಲೀಸರು ತಿಳಿಸಿದ್ದಾರೆ.ಚಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು 20 ಲಕ್ಷ ರೂ. ವೆಚ್ಚವಾಗಲಿದ್ದು, ಬಡ ಕುಟುಂಬಕ್ಕೆ ಇದನ್ನು ಭರಿಸಲು ಸಾಧ್ಯವಿಲ್ಲ.
ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಹಣವನ್ನು ಸಂಗ್ರಹಿಸುವ ಗುರಿಯೊಂದಿಗೆ ನಿಧಿಸಂಗ್ರಹಣೆಯನ್ನು ಪ್ರಾರಂಭಿಸಿದೆ. ಕಳೆದ ಎರಡು ದಿನಗಳಲ್ಲಿ ಈಗಾಗಲೇ 76,000 ಡಾಲರ್‌ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಇದರಲ್ಲಿ ಚಂದು ಅವರ ಕುಟುಂಬ ಮಾಡಿರುವ ಸಾಲವನ್ನು ತೀರಿಸಲು 25,000 ಡಾಲರ್ ಹಣವನ್ನು ಅವರ ಹೆತ್ತವರಿಗೆ ನೀಡಲು ನಿರ್ಧರಿಸಲಾಗಿದೆ.
ಈ ಘಟನೆಯ ಕುರಿತು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಸಂತಾಪ ಸೂಚಿಸಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರ ಸಹಾಯ ಕೋರಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸಚಿವ ರಾಮ್ ಮೋಹನ್ ನಾಯ್ಡು ಅವರು, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
