ವಾಷಿಂಗ್ಟನ್, ಏ.7- ಇರಾನ್‌ಗೆ ನಮ ಸೇನೆಯ ಚಲನವಲನಗಳ ಬಗ್ಗೆ ಚೀನಾ ಮಾಹಿತಿ ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.ಮಧ್ಯಪ್ರಾಚ್ಯ ಕದನದಲ್ಲಿ ತಾನು ಯಾರ ಪರವೂ ಇಲ್ಲ ಎಂದು ತೋರಿಸಿಕೊಳ್ಳುವ ಚೀನಾ, ರಹಸ್ಯವಾಗಿ ಇರಾನ್‌ಗೆ ಅಮೆರಿಕ ಸೇನೆಯನ್ನು ಬಗ್ಗುಬಡಿಯಲು ಸಹಾಯ ಮಾಡುತ್ತಿದೆ ಎನ್ನುವುದು ಅಮೆರಿಕದ ಆರೋಪವಾಗಿದೆ.
ಚೀನಾದ ಕೆಲ ಎಐ ಕಂಪನಿಗಳು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ಚಲನವಲನದ ಬಗ್ಗೆ ಸ್ಯಾಟಲೈಟ್ ಇಮೇಜಿಂಗ್ ಆಧರಿತ ಮಾಹಿತಿಯನ್ನು ಮಾರಾಟ ಮಾಡುತ್ತಿವೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.
ಇದಕ್ಕೆ ಪುಷ್ಟಿ ಕೊಡುವಂತೆ, ಮಿಜಾರ್‌ವಿಷನ್ ಎಂಬ ಕಂಪನಿ, ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಶಸ್ತ್ರಾಸ್ತ್ರಗಳ ಜಾಗವನ್ನು ನಾವು ಪತ್ತೆ ಮಾಡಿದೆವು. ಅಮೆರಿಕದ ಯುದ್ಧವಿಮಾನ ವಾಹಕ ನೌಕೆಗಳ ಮರುಪೂರಣದ ಮಾದರಿಯನ್ನೂ ನಾವು ಗುರುತಿಸಿದ್ದೇವೆ. ವೆನಿಜುವೆಲಾ ಅಧ್ಯಕ್ಷ ಮಡುರೋ ಅಪಹರಣಕ್ಕೂ ತಿಂಗಳುಗಳ ಮುಂಚೆಯೇ ನಾವು ಅಮೆರಿಕದ ಕ್ಷಿಪಣಿಗಳ ಸ್ಥಾನ ಬದಲಾವಣೆಯನ್ನು ಗಮನಿಸಿದ್ದೆವು ಎಂದು ಹೇಳಿಕೊಂಡಿದೆ.
ಈ ಕಂಪನಿಗಳು ಯಾವುದೇ ರಹಸ್ಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಈ ಮಾಹಿತಿಯನ್ನು ಪಡೆಯುತ್ತಿಲ್ಲ. ಬದಲಿಗೆ, ಮಾರಾಟಕ್ಕಿರುವ ಸ್ಯಾಟಲೈಟ್ ಚಿತ್ರಗಳು, ವಿಮಾನ ಟ್ರ್ಯಾಕಿಂಗ್ ಡೇಟಾ, ಹಡಗುಗಳನ್ನು ಗುರುತಿಸುವ ಸೌಲಭ್ಯವನ್ನು ಬಳಸಿಕೊಂಡು, ಅವನ್ನೆಲ್ಲಾ ಎಐ ಟೂಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಅದು ಅವುಗಳ ಚಲನೆಯನ್ನು ಪರಿಶೀಲಿಸಿ, ಅಮೆರಿಕ ಸೇನೆಯ ಮುಂದಿನ ನಡೆಯನ್ನು ಅಂದಾಜಿಸುತ್ತದೆ. ಇದೇ ಮಾಹಿತಿಯನ್ನು ಆ ಕಂಪನಿಗಳು ಇರಾನ್‌ಗೆ ಮಾರಿವೆ ಎನ್ನುವುದು ಅಮೆರಿಕದ ಆರೋಪವಾಗಿದೆ.
