ನವದೆಹಲಿ, ಏ.7- ಇದೇ ಏ.10 ರಿಂದ ಟೋಲ್ಗಳಲ್ಲಿ ನಗದು ಪಾವತಿ ತೆಗೆದು ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನ ಮಾಡಿದೆ. ದೇಶದ ಎಲ್ಲಾ ಟೋಲ್ ಗಳನ್ನ ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಏ. 10 ರಿಂದ ಜಾರಿಯಾಗುವಂತೆ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನ ನಿಲ್ಲಿಸಲಾಗುತ್ತಿದೆ. ಟೋಲ್ ಹಾದು ಹೋಗಲು ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ಆಯ್ಕೆ ನೀಡಲಾಗಿದೆ. ಆದರೆ, ಈ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಯುಪಿಐ ವಹಿವಾಟು ನಡೆಸಿದಲ್ಲಿ ಸಾಮಾನ್ಯ ಟೋಲ್ ಶುಲ್ಕಕ್ಕಿಂತ ಶೇ.25 ರಷ್ಟು ಹೆಚ್ಚುವರಿ ಹಣವನ್ನ ಚಾಲಕರು ಪಾವತಿಸಬೇಕಾಗುತ್ತದೆ. ಒಂದು ವೇಳೆ ಫಾಸ್ಟ್ಟ್ಯಾಗ್ ಮತ್ತು ಯುಪಿಐ ಎರಡೂ ಪಾವತಿ ವಿಧಾನಗಳನ್ನ ಚಾಲಕರು ನಿರಾಕರಿಸಿದರೆ ರಾಷ್ಟ್ರೀಯ ಹೆದ್ದಾರಿ ನಿಯಮಗಳಡಿ ವಾಹನ ಪ್ರವೇಶವನ್ನು ನಿರಾಕರಿಸಬಹುದು. ಅಥವಾ ಇ-ನೋಟಿಸ್ ನೀಡಬಹುದು. 3 ದಿನಗಳ ಒಳಗೆ ದಂಡದ ಮೊತ್ತ ಪಾವತಿಸದೇ ಇದ್ದರೆ ದಂಡದ ಮೊತ್ತ ದುಪ್ಪಟ್ಟಾಗಬಹುದು ಎಂದು ಸೂಚಿಸಲಾಗಿದೆ.
ಟೋಲ್ ಬೂತ್ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.
