ಬೆಂಗಳೂರು, ಏ. 8- ಕಾರು ಮೆಕ್ಯಾನಿಕ್ರೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗುಂಟೆ ನಿವಾಸಿ ತೌಹಿಬ್ ಪಾಷ (23) ಕೊಲೆಯಾಗಿರುವ ಕಾರು ಮೆಕ್ಯಾನಿಕ್.
ಮನೆಯ ಮೊದಲ ಮಹಡಿಯಲ್ಲಿ ಒಂದು ವರ್ಷದ ಮಗುವಿನೊಂದಿಗೆ ತೌಹಿಬ್ ಪಾಷ ದಂಪತಿ ವಾಸವಾಗಿದ್ದು, ಕೆಲ ಮಹಡಿಯಲ್ಲಿ ಅವರ ಸಂಬಂಧಿಕರು ನೆಲೆಸಿದ್ದಾರೆ.ರಾತ್ರಿ 7.30ರಿಂದ 8ಗಂಟೆ ಸುಮಾರಿನಲ್ಲಿ ತೌಹಿಬ್ ಪಾಷಗೆ ಯಾರೋ ಚಾಕುವಿನಿಂದ ಚುಚ್ಚಿದ್ದರಿಂದ ಕೂಗಿಕೊಂಡಿದ್ದಾರೆ.
ಇವರ ಮನೆಯಿಂದ ಕೂಗಾಟ, ಕಿರುಚಾಟ ಕೇಳಿ ಕೆಳ ಮಹಡಿಯಲ್ಲಿದ್ದ ಸಂಬಂಧಿಕರು ಹಾಗೂ ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದಾಗ ತೌಹಿಬ್ ಪಾಷ ರಕ್ತದ ಮಡುವಿನಲ್ಲಿರುವುದು ಕಂಡು ಬಂದಿದೆ.
ತಕ್ಷಣ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಗಂಗೊಂಡನ ಹಳ್ಳಿಯಲ್ಲಿ ವಾಸವಾಗಿರುವ ತೌಹಿಬ್ ಪಾಷ ಪೋಷಕರಿಗೆ ಮಗ ಮೃತಪಟ್ಟಿರುವ ಸುದ್ದಿ ತಿಳಿದು ಮನೆ ಬಳಿ ಬಂದು ಸೊಸೆಯೇ ಕೊಲೆ ಮಾಡಿದ್ದಾಳೆಂದು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತೌಹಿಬ್ ಪಾಷನ ಪತ್ನಿಯನ್ನು ವಿಚಾರಣೆ ನಡೆಸಿದಾಗ, ಆತನೇ ಎದೆಗೆ ಚಾಕುವಿನಿಂದ ಚುಚ್ಚಿಕೊಂಡರೆಂದು ಹೇಳಿದ್ದಾರೆ.ತೌಹಿಬ್ ಪಾಷ ಪೋಷಕರ ಹೇಳಿಕೆ, ಪತ್ನಿಯ ಹೇಳಿಕೆ ಪಡೆದುಕೊಂಡಿರುವ ಪೊಲೀಸರು, ಕೌಟುಂಬಿಕ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಂಡಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಕೊಲೆ ಹೇಗೆ ಆಗಿದೆ ಎಂಬುವುದು ಗೊತ್ತಾಗಲಿದೆ.
